• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪಿಂಚಣಿ ಪಡೆಯಲು ಪಿಂಚಣಿದಾರರು ಬ್ಯಾಂಕ್, ಕಚೇರಿಗೆ ಹೋಗುವ ಅಗತ್ಯವಿಲ್ಲ; ಹೈಕೋರ್ಟ್​ಗೆ ಸರ್ಕಾರ ಮಾಹಿತಿ

ಪಿಂಚಣಿ ಪಡೆಯಲು ಪಿಂಚಣಿದಾರರು ಬ್ಯಾಂಕ್, ಕಚೇರಿಗೆ ಹೋಗುವ ಅಗತ್ಯವಿಲ್ಲ; ಹೈಕೋರ್ಟ್​ಗೆ ಸರ್ಕಾರ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್‌ ಸಂಕಷ್ಟ ಸಮಯದಲ್ಲಿ ಯಾವುದೇ ಅರ್ಹ ನಾಗರಿಕರಿಂದ ಲೈಫ್‌ ಸರ್ಟಿಫಿಕೇಟ್‌ ಕೊಡಿ ಎಂದು ತಾನು ಒತ್ತಾಯಿಸಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟಪಡಿಸಿತು. ಪ್ರಕರಣ ಜುಲೈ 28 ರಂದು ಮತ್ತೆ ವಿಚಾರಣೆಗೆ ಬರಲಿದೆ.

  • Share this:

    ಬೆಂಗಳೂರು (ಜೂನ್ 30, ಬುಧವಾರ): ಪಿಂಚಣಿ ಪಡೆಯಲು ಪಿಂಚಣಿದಾರರು ಬ್ಯಾಂಕ್ ಅಥವಾ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಇಂದು ಮಾಹಿತಿ ನೀಡಿದೆ. ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ತನ್ನ ಆದೇಶದಲ್ಲಿ ದಾಖಲಿಸಿಕೊಂಡಿದೆ.


    ನಂತರ ಅದು, ಪಿಂಚಣಿದಾರರಿಗೆ ಪಿಂಚಣಿ ಹೇಗೆ ನೀಡಲಾಗುವುದು ಎಂಬ ವಿವರಗಳೊಂದಿಗೆ ಮೇಲಿನ ನಿರ್ಧಾರವನ್ನು ಎತ್ತಿ ತೋರಿಸುವ ನಿರ್ದಿಷ್ಟ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ ಅಶ್ವಿನಿ ಕುಮಾರ್‌ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿತು. ಅಶ್ವಿನಿ ಕುಮಾರ್‌ ಪ್ರಕರಣದಲ್ಲಿ ಎಲ್ಲಾ ವೃದ್ಧರಿಗೆ ನಿಯಮಿತವಾಗಿ ಪಿಂಚಣಿ ನೀಡಬೇಕು ಮತ್ತು ಗುರುತಿಸಲಾದ ವೃದ್ಧರಿಗೆ ಅಗತ್ಯ ಔಷಧ, ಮುಖಗವಸು, ಸ್ಯಾನಿಟೈಜರ್‌ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಆಯಾ ರಾಜ್ಯ ಸರ್ಕಾರಗಳು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.


    ಈ ನಿರ್ದೇಶನದಂತೆ ರಾಜ್ಯದ ಹಿರಿಯ ನಾಗರಿಕರಿಗೆ ವೃದ್ಧಪ್ಯ ವೇತನ ಹೆಚ್ಚಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಆಲಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 2020ರ ಅಕ್ಟೋಬರ್‌ನಲ್ಲಿ ನೋಟಿಸ್ ನೀಡಿತ್ತು. ಹಿರಿಯ ನಾಗರಿಕರ ಅಗತ್ಯತೆಗಳನ್ನು ಗುರುತಿಸಿ, ಆರೋಗ್ಯ ಶಿಬಿರಗಳನ್ನು ನಡೆಸಿ, ಆರೋಗ್ಯ ಮತ್ತು ಔಷಧಿಗಳು ಸುಲಭವಾಗಿ ದೊರೆಯುವಂತೆ ನೋಡಿಕೊಂಡು, ಆಹಾರ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯ ಹಕ್ಕನ್ನು ರಕ್ಷಿಸುವ ಮೂಲಕ ಅವರ ಜೀವನ ಮತ್ತು ಘನತೆಗೆ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು.


    ಈ ಹಿಂದಿನ ವಿಚಾರಣೆಯಲ್ಲಿ, ಹಿರಿಯ ನಾಗರಿಕರು ತಮ್ಮ ವಾಸಸ್ಥಳಗಳಲ್ಲೇ ವೃದ್ಧಾಪ್ಯ ವೇತನ ಪಡೆಯಲು ಅರ್ಹರೆ ಎಂಬ ಬಗ್ಗೆ ರಾಜ್ಯ ಸರ್ಕಾರದಿಂದ ನ್ಯಾಯಾಲಯ ಸ್ಪಷ್ಟನೆ ಕೋರಿತ್ತು. ಪ್ರಕರಣವನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡಾಗ ನ್ಯಾಯಾಲಯ ಇದನ್ನು ಗಮನಿಸಿ, “ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಿಗೆ (ಪಿಂಚಣಿ ಸಂಗ್ರಹಿಸಲು) ಭೇಟಿ ನೀಡಲು ಸಾಧ್ಯವಾಗದವರಿಗಾಗಿ (ಹಿರಿಯ ನಾಗರಿಕರಿಗೆ) ನೀವು ಏನು ಮಾಡುತ್ತಿದ್ದೀರಿ ಎಂದು ಸ್ಪಷ್ಟವಾಗಿ ಹೇಳಬೇಕು" ಎಂದಿತು.


    ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ ಅವರು ಬ್ಯಾಂಕುಗಳಿಗೆ ಅಥವಾ ಅಂಚೆ ಕಚೇರಿಗಳಿಗೆ ತೆರಳಲು ಸಾಧ್ಯವಾಗದವರಿಗೆ ಅವರ ಮನೆಗಳಲ್ಲೇ ಪಿಂಚಣಿ ನೀಡಬೇಕಾಗುತ್ತದೆ ಎಂದರು. ಆಗ ಸರ್ಕಾರ “ಯಾವುದೇ ಪಿಂಚಣಿದಾರರನ್ನು ಕಚೇರಿಗೆ ಬರುವಂತೆ ಕೇಳಿಲ್ಲ” ಎಂದು ಪ್ರತಿಕ್ರಿಯಿಸಿತು. ಈ ಬಗ್ಗೆ ನ್ಯಾಯಾಲಯ “ನಿಮ್ಮ ಪ್ರಕಾರ ಯಾವುದೇ ಪಿಂಚಣಿದಾರರು ಯಾವುದೇ ಕಚೇರಿಗೆ ಹೋಗಬೇಕಿಲ್ಲವೇ?” ಎಂದು ಪ್ರಶ್ನಿಸಿತು. ಅದಕ್ಕೆ ಸರ್ಕಾರ ಧನಾತ್ಮಕವಾಗಿ ಪ್ರತಿಕ್ರಿಯಿಸಿತು.


    ಇದನ್ನು ಓದಿ:  ನೀರಿಗೆ ಬಿದ್ದಿದ್ದ ನಾಲ್ವರು ಸಹೋದರರು ಶವವಾಗಿ ಪತ್ತೆ; ಮೂರು ದಿನಗಳ ಕಾರ್ಯಾಚರಣೆ ದುರಂತ ಅಂತ್ಯ


    ಅಲ್ಲದೆ ಕೋವಿಡ್‌ ಸಂಕಷ್ಟ ಸಮಯದಲ್ಲಿ ಯಾವುದೇ ಅರ್ಹ ನಾಗರಿಕರಿಂದ ಲೈಫ್‌ ಸರ್ಟಿಫಿಕೇಟ್‌ ಕೊಡಿ ಎಂದು ತಾನು ಒತ್ತಾಯಿಸಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟಪಡಿಸಿತು. ಪ್ರಕರಣ ಜುಲೈ 28 ರಂದು ಮತ್ತೆ ವಿಚಾರಣೆಗೆ ಬರಲಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಯಾರೂ ಹೊರಗೆ ಬಾರದೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಆಷ್ಟು ಗುಂಪುಗೂಡುವುದನ್ನು ನಿಯಂತ್ರಿಸಬೇಕಿದೆ.

    Published by:HR Ramesh
    First published: