ಕೊನೆಯ ದಿನಗಳನ್ನು ಎಣಿಸುತ್ತಿದೆ ಪೀಣ್ಯ ಕೈಗಾರಿಕಾ ಪ್ರದೇಶ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷಾಂತರ ಕಾರ್ಮಿಕರು!

ಪೀಣ್ಯಾ ಕೈಗಾರಿಕಾ ವಲಯದ ಚೇತರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲೂ ಸೂಕ್ತ ಕ್ರಮಗಳನ್ನು ಜರುಗಿಸದೆ ಇದ್ದಲ್ಲಿ, ದೇಶದ ಆರ್ಥಿಕ ವಲಯದ ಮೇಲೆ ದೊಡ್ಡ ಪೆಟ್ಟು ಬೀಳಲಿದೆ. ಅಲ್ಲದೆ, ಭವಿಷ್ಯದಲ್ಲಿ ಪೀಣ್ಯಾ ಕೈಗಾರಿಕ ಪ್ರದೇಶ ಎಂಬುದು ಗತಕಾಲದ ಪಳೆಯುಳಿಕೆಯಾಗಿ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

MAshok Kumar | news18
Updated:August 26, 2019, 12:20 PM IST
ಕೊನೆಯ ದಿನಗಳನ್ನು ಎಣಿಸುತ್ತಿದೆ ಪೀಣ್ಯ ಕೈಗಾರಿಕಾ ಪ್ರದೇಶ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷಾಂತರ ಕಾರ್ಮಿಕರು!
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸವಿಲ್ಲದೆ ಖಾಲಿ ಬಿದ್ದಿರುವ ಒಂದು ಕೈಗಾರಿಕೆಯ ಚಿತ್ರ.
  • News18
  • Last Updated: August 26, 2019, 12:20 PM IST
  • Share this:
ದಕ್ಷಿಣಾ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ರಾಜಧಾನಿ ಬೆಂಗಳೂರಿನ ಮುಕುಟಗಳಲ್ಲೊಂದು ಎಂದರೆ ತಪ್ಪಾಗಲಾರದು. 45 ಚ.ಕಿಲೋ ಮೀಟರ್ ವಿಸ್ತೀರ್ಣದ ಪಿಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಆಟೋ ಮೊಬೈಲ್​ನಿಂದ ಗಾರ್ಮೆಂಟ್ಸ್​ ವರೆಗೆ 10 ಸಾವಿರ ಕಾರ್ಖಾನೆಗಳಿವೆ. 12 ಲಕ್ಷ ಕಾರ್ಮಿಕರು ಈ ಕೈಗಾರಿಕೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಂಬಿಕೊಂಡಿದ್ದಾರೆ. ಆದರೆ, ದೇಶ ಈವರೆಗೆ ಕಂಡರಿಯದಂತಹ ಆರ್ಥಿಕ ಮುಗ್ಗಟ್ಟಿನಿಂದಾಗಿ ಈ ಎಲ್ಲಾ ಕೈಗಾರಿಕೆಗಳು ಏದುಸಿರು ಬಿಡುತ್ತಿದ್ದು ಇದೀಗ ಮುಚ್ಚುವ ಹಂತಕ್ಕೆ ಬಂದು ನಿಂತಿವೆ.

ಆಟೋ ಮೊಬೈಲ್ ಬಿಡಿ ಭಾಗಗಳು, ಪೌಡರ್ ಕೋಟಿಂಗ್, ಫ್ಯಾಬ್ರಿಕೇಷನ್, ಪ್ಯಾಕೇಜಿಂಗ್ ಇಂಡಸ್ಟ್ರಿ, ಎಲೆಕ್ಟ್ರೋ ಪ್ಲೇಟಿಂಗ್, ಸಿಎನ್​ಸಿ ಮೆಷಿನ್ ಜಾಬ್ ವರ್ಕ್, ಮಷಿನ್ ಟೂಲ್ ಕಾಂಪೊನೆಂಟ್ ಸಪ್ಲೇಯರ್ಸ್, ವಿದ್ಯುತ್ ಟ್ರಾನ್ಸ್​ಫಾರ್ಮರ್​ ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳು ಇಲ್ಲಿದ್ದು, ದೇಶ ವಿದೇಶದ ನಾನಾ ಭಾಗಗಳಿಗೆ ಇಲ್ಲಿ ತಯಾರಾಗುವ ಉತ್ಪನ್ನಗಳು ರಫ್ತಾಗುತ್ತವೆ. ರಾಜಧಾನಿಯ ಪ್ರಮುಖ ಆದಾಯ ಹಾಗೂ ಆರ್ಥಿಕತೆಯ ಮೂಲ ಇದೇ ಪೀಣ್ಯ ಕೈಗಾರಿಕಾ ಪ್ರದೇಶ ಎಂದರೆ ತಪ್ಪಾಗಲಾರದು.

ಒಂದು ಅಂದಾಜಿನ ಪ್ರಕಾರ ಪೀಣ್ಯಾ ಕೈಗಾರಿಕಾ ಪ್ರದೇಶದ ಒಂದು ತಿಂಗಳ ವಹಿವಾಟು ಸುಮಾರು 2,500 ಕೋಟಿಗೂ ಅಧಿಕ. ಇನ್ನೂ ಪ್ರತಿ ಕೈಗಾರಿಕೆಯಲ್ಲಿ ದಿನಕ್ಕೆ 12 ರಿಂದ 15 ಲಕ್ಷ ವಹಿವಾಟು ನಡೆಯುತ್ತಿತ್ತು. ಹೀಗಾಗಿ ಇಲ್ಲಿನ ಎಲ್ಲಾ ಕೈಗಾರಿಕೆಗಳು 24 ಗಂಟೆಯೂ ಚಾಲ್ತಿಯಲ್ಲಿರುತ್ತಿದ್ದವು, ಎಲ್ಲರಿಗೂ ಕೈತುಂಬಾ ಕೆಲಸವಿತ್ತು. ವಾರಾಂತ್ಯದ ರಜೆಯಲ್ಲೂ ಓವರ್ ಟೈಮ್ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಳ್ಳೆಯ ದುಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಮುಂಚಿನಂತಿಲ್ಲ.

ಕೆಲ ಕಾರ್ಖಾನೆಗಳ ಮಾರಾಟ ಶೇ. 60 ರಷ್ಟು ಕುಸಿದಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ.90 ರಷ್ಟು ಮಾರಾಟ ತಗ್ಗಿದೆ. ಬಿಎಫ್​ಡಬ್ಲ್ಯೂ, ಎಎಂಎಸ್, ಎಸಿಇ ಡಿಸೈನರ್ಸ್​ನಂತಹ ದೊಡ್ಡ ಕಂಪೆನಿಗಳು ತಿಂಗಳಿಗೆ 250 ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ, ಈಗ ಈ ಕಂಪೆನಿಯ ಗೋದಾಮಿನಲ್ಲಿ ತಲಾ ಒಂದು ಸಾವಿರಕ್ಕೂ ಅಧಿಕ ಯಂತ್ರಗಳು ಧೂಳು ಹಿಡಿಯುತ್ತಿವೆ. ದೇಶದ ಕೈಗಾರಿಕ ವಲಯದ ಮೇಲೆ ಸುನಾಮಿಯಂತೆ ಎರಗಿರುವ ಆರ್ಥಿಕ ಹಿಂಜರಿತವೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ ಇಲ್ಲಿನ ಕಾರ್ಖಾನೆ ಮಾಲೀಕರು.ಬಿಡಿ ಭಾಗಗಳ ಮಾರಾಟ ಮಾರ್ಚ್ ತಿಂಗಳಿನಿಂದಲೇ ಕುಸಿತ ಕಂಡಿದೆ. ಏಪ್ರಿಲ್, ಮೇ ತಿಂಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆ ಇತ್ತಾದರೂ ಬೇಡಿಕೆ ಇಲ್ಲದೆ ಕೈಗಾರಿಕೆಗಳ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ.  ಇನ್ನೂ ಜೂನ್, ಜುಲೈ ತಿಂಗಳಲ್ಲಿ ಮಾರಾಟ ಪ್ರಮಾಣ ಪಾತಾಳ ಸೇರಿದೆ. ಪರಿಣಾಮ ಬಹುತೇಕ ಕಾರ್ಖಾನೆಗಳು ಇಂದು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ದಿನಕ್ಕೆ 24 ಗಂಟೆ ಮೂರು ಪಾಳಿಯಲ್ಲಿ ಕೆಲಸ ನೀಡುತ್ತಿದ್ದ ಕಾರ್ಖಾನೆಗಳು ಈಗ ದಿನಕ್ಕೆ 5 ರಿಂದ 6 ಗಂಟೆ ಮಾತ್ರ ಕೆಲಸ ನಿರ್ವಹಿಸುತ್ತಿವೆ. ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಕೈಗಾರಿಕೆಗಳನ್ನೇ ನಂಬಿದ್ದ ಲಕ್ಷಾಂತರ ಜನ ಇದೀಗ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವಂತಾಗಿದೆ.

ಈ ಕುರಿತು ಈಗಾಗಲೇ ಟ್ವೀಟ್ ಮೂಲಕ ತನ್ನ ವಿಷಾಧವನ್ನು ವ್ಯಕ್ತಪಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, “ದಕ್ಷಿಣ ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯ. ಶೇ.70 ರಷ್ಟು ವಹಿವಾಟು ಕುಸಿತದೊಂದಿಗೆ 10 ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳು (ಐಸಿಯು) ತೀವ್ರ ನಿಗಾ ಘಟಕದಲ್ಲಿವೆ. 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೈತುಂಬಾ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿ, ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ” ಎಂದು ಬರೆದುಕೊಂಡಿದೆ.

ಪೀಣ್ಯಾ ಕೈಗಾರಿಕಾ ವಲಯದ ಚೇತರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲೂ ಸೂಕ್ತ ಕ್ರಮಗಳನ್ನು ಜರುಗಿಸದೆ ಇದ್ದಲ್ಲಿ, ದೇಶದ ಆರ್ಥಿಕ ವಲಯದ ಮೇಲೆ ದೊಡ್ಡ ಪೆಟ್ಟು ಬೀಳಲಿದೆ. ಅಲ್ಲದೆ, ಭವಿಷ್ಯದಲ್ಲಿ ಪೀಣ್ಯಾ ಕೈಗಾರಿಕ ಪ್ರದೇಶ ಎಂಬುದು ಗತಕಾಲದ ಪಳೆಯುಳಿಕೆಯಾಗಿ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

(ಮಾಹಿತಿ-ಪ್ರಜಾವಾಣಿ)
First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ