ಅಧ್ಯಕ್ಷೆ ಅನಕ್ಷರಸ್ಥೆಯಾಗಿದ್ದೇ ಬಂಡವಾಳ; ಬರೋಬ್ಬರಿ 90 ಲಕ್ಷ ರೂ. ದೋಚಿದ ಚಾಲಾಕಿ ಪಿಡಿಒ

news18
Updated:September 7, 2018, 12:00 PM IST
ಅಧ್ಯಕ್ಷೆ ಅನಕ್ಷರಸ್ಥೆಯಾಗಿದ್ದೇ ಬಂಡವಾಳ; ಬರೋಬ್ಬರಿ 90 ಲಕ್ಷ ರೂ. ದೋಚಿದ ಚಾಲಾಕಿ ಪಿಡಿಒ
ಹಣ ಲೂಟಿ ಮಾಡಿದ ಪಿಡಿಒ ನಾಗಪ್ಪ
news18
Updated: September 7, 2018, 12:00 PM IST
-ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ,(ಸೆ.07): ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಕ್ಷರಸ್ಥೆಯಾಗಿರುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಪಿಡಿಒ ಓರ್ವ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಘಟನೆ ಕಲಬುರ್ಗಿ ತಾಲೂಕಿನ ಫರತಾಬಾದ್ ಗ್ರಾಮ ಪಂಚಾಯತ್​​​ನಲ್ಲಿ ಬೆಳಕಿಗೆ ಬಂದಿದೆ.

ಪಿಡಿಒ ನಾಗಪ್ಪ ಎನ್ನುವಾತನೇ ಖೊಟ್ಟಿ ಬಿಲ್ ಸೃಷ್ಟಿಸಿದ್ದಲ್ಲದೇ, ಅಧ್ಯಕ್ಷರ ಸಹಿಯೂ ಕೂಡ ನಕಲಿ ಮಾಡಿ ಲೂಟಿ ಹಣ ಮಾಡಿದ್ದಾನೆ. ಅಂದಾಜು 98 ಲಕ್ಷ ರೂಪಾಯಿ ಅನುದಾನ ಲೂಟಿ ಮಾಡಿದ್ದು, ಈ ಕುರಿತು ಗ್ರಾಮ ಪಂಚಾಯತ್​ ಅಧ್ಯಕ್ಷೆ, ಸದಸ್ಯರು ಜಿಲ್ಲಾ ಪಂಚಾಯತ್ ಸಿಇಒಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಗಳು ಅನಕ್ಷರಸ್ಥರಾಗಿದ್ದರೆ ಅಧಿಕಾರಿಗಳು ಯಾವ ಯಾವ ರೀತಿಯಲ್ಲಿ ಆಟ ಆಡುತ್ತಾರೆ. ಮೋಸ ಮಾಡುತ್ತಾರೆ ಎನ್ನುವುದಕ್ಕೆ  ಕಲಬುರ್ಗಿ ತಾಲೂಕಿನ ಫರತಾಬಾದ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರವೇ ಸಾಕ್ಷಿಯಾಗಿದೆ.

ಫರತಾಬಾದ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಾನಮ್ಮ ಬಜಂತ್ರಿ ಅನಕ್ಷರಸ್ಥೆ ಆಗಿರುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಪಿಡಿಒ ನಾಗಪ್ಪ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೇ ಅಧ್ಯಕ್ಷರ ಸಹಿಯೂ ಕೂಡ ಖೊಟ್ಟಿ ಮಾಡಿ ಬರೋಬ್ಬರಿ 90 ಲಕ್ಷಕ್ಕೂ ಅಧಿಕ ಅಭಿವೃದ್ದಿ ಅನುದಾನವನ್ನು ತಿಂದು ತೇಗಿದ್ದಾನೆ ಎನ್ನುವ ಆರೋಪ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರದ್ದು.  2016-17 ಮತ್ತು 2018ನೇ ಸಾಲಿನ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ಆಪ್ತರ ಹಾಗೂ ಅಲ್ಲಿನ ಸಿಬ್ಬಂದಿಗಳ ಹೆಸರಿನ ಖಾತೆಗೆ ಜಮಾ ಮಾಡುವ ಮೂಲಕ ಎತ್ತಿ ಹಾಕಿದ್ದಾನೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಕ್ಷರಸ್ಥೆಯಾಗಿರುವ ಪಂಚಾಯತಿ ಅಧ್ಯಕ್ಷೆಗೆ ಸುಳ್ಳು ಮಾಹಿತಿ ನೀಡಿ ಪಂಚಾಯತಿಯ ಅನುದಾನವನ್ನು ಈ ರೀತಿ ಹಣ ತಿಂದು ಹಾಕಿದ್ದಾನೆ.

ಇನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ತಮ್ಮ ಆಪ್ತರ ಖಾತೆಗೆ ಹಣವನ್ನು ಜಮಾ ಮಾಡಿ, ನಂತರ ಆ ಹಣ ಪಡೆದಿದ್ದಾನೆ ಎನ್ನುವ ಆರೋಪ ಆತನ ಮೇಲಿದೆ. 25-11-2016 ರಲ್ಲಿ 14 ನೇ ಹಣಕಾಸು ಯೋಜನೆಯಲ್ಲಿ ಚೆಕ್ ನಂಬರ್ 501065 ನಲ್ಲಿ ತಮ್ಮ ಆಪ್ತ ಎಬಿ ಮಾಲೀಪಾಟೀಲ್ ಎನ್ನುವರ ಹೆಸರಿಗೆ 5 ಲಕ್ಷ ರೂಪಾಯಿ ಜಮಾ ಮಾಡಿದ್ದಾನೆ. 11-12-2017ರಲ್ಲಿ ದೇವೀಂದ್ರ ಎನ್ನೋರ ಹೆಸರಿಗೆ ಚೆಕ್ ನಂಬರ್ 503829 ನಲ್ಲಿ 8 ಲಕ್ಷ ಸುಭಾಷ ಎನ್ನುವವರಿಗೆ ಮತ್ತು 09-01-2018 ರಂದು  14 ಲಕ್ಷ ರೂಪಾಯಿ ಜಯಪ್ಪ ಹಾಗೂ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಮಂಜುನಾಥ ಹೆಸರಿನಲ್ಲಿ ಹಣ ಎತ್ತಿ ಹಾಕಿದ್ದಾನೆ. ಹೀಗೆ ಒಟ್ಟು 50 ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ಆಪ್ತರ ಖಾತೆಗೆ ಹಾಕುವ ಮೂಲಕ ಪಂಚಾಯತ್ ಹಣಕ್ಕೆ ಕನ್ನ ಹಾಕಿದ್ದಾನೆ ಎನ್ನುವ ಆರೋಪ ಫರತಾಬಾದ್ ಗ್ರಾಮ ನಾಗರೀಕ ಕ್ರಿಯಾ ಸಮಿತಿ ಅಧ್ಯಕ್ಷ ಎಂ.ಬಿ. ಸಜ್ಜನ್ ಅವರದ್ದು.

ಇನ್ನು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಗ್ರಾಮಕ್ಕೆ 254 ಶೌಚಾಲಯಗಳು ಮಂಜೂರಾಗಿದ್ದವು. ಆದರೆ ಕೇವಲ 54 ಶೌಚಾಲಯಗಳನ್ನು ನಿರ್ಮಿಸಿ ಉಳಿದ ಶೌಚಾಲಯಗಳನ್ನು ನಿರ್ಮಿಸದೇ 30 ಲಕ್ಷ ರೂ ಅನಾಮತ್ತಾಗಿ ತಮ್ಮ ಆಪ್ತರ ಖಾತೆಗೆ ಜಮಾ ಮಾಡಿ ನುಂಗಿ ಹಾಕಿದ್ದಾನೆ. ಇದಲ್ಲದೇ ಸಣ್ಣಪುಟ್ಟ ಕಾಮಗಾರಿಗಳು, ನಿರ್ವಹಣೆ ಸೇರಿ ಹಲವು ಖೊಟ್ಟಿ ಬಿಲ್​​ಗಳನ್ನು ಸೃಷ್ಟಿಸಿ  ಪಂಚಾಯತಿ ಅಧ್ಯಕ್ಷೆಯ ಸಹಿ ಕೂಡ ನಕಲಿ ಮಾಡಿ ಲಕ್ಷ ಲಕ್ಷ ಹಣ ತಮ್ಮ ಆಪ್ತ ನೌಕರರೊಂದಿಗೆ ಸೇರಿ ಸರಕಾರಕ್ಕೆ ಪಂಗನಾಮ ಹಾಕಿದ್ದಾನೆ. ವಿಚಿತ್ರವೆಂದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಳಕೆ ಮಾಡಿಕೊಂಡ ವಿದ್ಯುತ್ ಬಿಲ್ಲನ್ನು ಜೆಸ್ಕಾಂಗೆ ಪಾವತಿಸಲೆಂದು ಕೇಂದ್ರ ಸರ್ಕಾರದ ನೀಡಿದ ಹಣವನ್ನೂ ಈತ ತನ್ನ ಸ್ನೇಹಿತರ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ವಿದ್ಯುತ್ ಬಿಲ್ ಪಾವತಿಗೆಂದು ಬಂದ ಹಣದಲ್ಲಿ ಸುಮಾರು 14 ಲಕ್ಷ ರೂಪಾಯಿ ಚೆಕ್ ನ್ನು ಮಂಜುನಾಥ ಎಂಬುವರಿಗೆ ಕೊಡಲಾಗಿದೆ. ಶೌಚಾಲಯ ನಿರ್ಮಾಣ, ವಿದ್ಯುತ್ ಬಿಲ್ ಪಾವತಿ ಇತ್ಯಾದಿಗಳಲ್ಲಿ ಸುಮಾರು 98 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎಂದು ಗ್ರಾ.ಪಂ. ಸದಸ್ಯ ಶರಣು ಆರೋಪಿಸಿದ್ದಾರೆ.

ಸುಮಾರು 90 ಲಕ್ಷ ರೂಪಾಯಿ ಅನುದಾನ ದುರ್ಬಳಕೆಯಾಗಿದೆ. ಆದರೆ ಇದೆಲ್ಲವೂ ಗಮನಕ್ಕೆ ಬಂದದ್ದೂ ತೀರಾ ಇತ್ತೀಚೆಗೆ. ಅದೂ ಸಹ ಪಿಡಿಒ ನಾಗಪ್ಪ ಬೇರೆಡೆಗೆ ವರ್ಗಾವಣೆಯಾದ ಸಂದರ್ಭದಲ್ಲಿ ಲೆಕ್ಕ-ಪತ್ರ ಒಪ್ಪಿಸುವಾಗ ಹಣ ದುರ್ಬಳಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಸೇರಿ ಹಿರಿಯ ಅಧಕಾರಿಗಳಿಗೆ ದೂರು ನೀಡಿದ ಕ್ರಮಕ್ಕೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯ್ತಿ ಸದಸ್ಯರ ಬಸವರಾಜ ಹಲಬುರ್ಗಿ ಆರೋಪಿಸಿದ್ದಾರೆ. ಫರತಾಬಾದ್​​​ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತಿ ಸಿಇಒ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಈ ಸಂಬಂಧ ಈಗಾಗಲೇ ದೂರು ಬಂದಿದೆ. ಅವ್ಯವಹಾರ ನಡೆದಿದೆ ಎಂದು ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ದೂರು ನೀಡಿದ್ದಾರೆ. ಈ ಕುರಿತ ತನಿಖೆಗಾಗಿ ಸಮಿತಿ ರಚನೆ ಮಾಡಿದ್ದೇವೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
Loading...

ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಫರತಾಬಾದ್ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ. ಅನಕ್ಷರಸ್ಥ ಅಧ್ಯಕ್ಷೆಗೆ ಮೋಸ ಮಾಡಿ ಸರ್ಕಾರದ ಹಣ ಲೂಟಿ ಮಾಡಿರುವ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳದಿದ್ದಲ್ಲಿ, ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಮತ್ತು ಗ್ರಾ.ಪಂ. ಸದಸ್ಯರು ಎಚ್ಚರಿಸಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ