ಕೊಡಗು(ಆ.03): ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಡುವುದು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ತಡರಾತ್ರಿವರೆಗೆ ಭಾರೀ ಪ್ರಮಾಣದಲ್ಲಿ ಸುರಿದಿದೆ. ಪರಿಣಾಮವಾಗಿ ಪಯಶ್ವಿನಿ ನದಿ (River) ಉಕ್ಕಿ ಹರಿದು ಕೊಯಿನಾಡು ಮತ್ತು ಕಲ್ಲುಗುಂಡಿಗಳಲ್ಲಿ ಪ್ರವಾಹದಿಂದ (Flood) ಹತ್ತಾರು ಮನೆಗಳು ತೀವ್ರ ಮುಳುಗಡೆಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪಯಶ್ವಿನಿ ನದಿ ಉಕ್ಕಿ ಹರಿದಿದ್ದ ಹಿನ್ನೆಲೆಯಲ್ಲಿ ಮೇಲ್ಭಾಗದಿಂದ ನದಿಯಲ್ಲಿ (River) ತೇಲಿ ಬಂದ ಬಾರಿ ಗಾತ್ರದ ನೂರಾರು ಮರಗಳು ಕೊಯಿನಾಡಿನ ಕಿಂಡಿ ಅಣೆಕಟ್ಟೆಯಲ್ಲಿ (Dam) ಸಿಲುಕಿಕೊಂಡಿದ್ದವು. ಇದರಿಂದ ಕೊಯಿನಾಡಿನ ಅಣ್ಣೆಕಟ್ಟೆಯಲ್ಲಿ ದೊಡ್ಡ ಪ್ರಮಾಣದ ನೀರು ಸಂಗ್ರಹವಾಗಿ ಮನೆಗಳಿಗೆ ನುಗ್ಗಿದೆ. ಇದರಿಂದ ಐದು ಮನೆಗಳು ಸಂಪೂರ್ಣ ಜಲಾವೃತವಾಗೊಂಡು ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಮತ್ತು ಇತರೆ ಎಲ್ಲಾ ವಸ್ತಗಳು ಸಂಪೂರ್ಣ ಹಾಳಾಗಿವೆ.
ರಾತ್ರಿ ಹೊತ್ತು ಹರಿವು ಹೆಚ್ಚಳ
ರಾತ್ರಿ ಒಂಭತ್ತುವರೆಯಲ್ಲಿ ನೀರು ಇದ್ದಕ್ಕಿದ್ದಂತೆ ನದಿಯಲ್ಲಿ ಜಾಸ್ತಿಯಾಗತೊಡಗಿದೆ. ಇನ್ನೇನು ಜನರು ಅಲ್ಲಿಂದ ಸ್ಥಳಾಂತರಗೊಳ್ಳಬೇಕು ಎನ್ನುವಷ್ಟರಲ್ಲಿಯೇ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹೀಗಾಗಿ ಜನರು ಯಾವುದೇ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವೇ ಆಗಿಲ್ಲ. ಒಂದು ಮನೆಯ ಒಂದು ಭಾಗ ಬಹುತೇಕ ಕುಸಿದು ಬಿದ್ದಿದೆ. ಜೊತೆಗೆ ಎಲ್ಲಾ ಐದು ಮನೆಗಳು ಸಂಪೂರ್ಣ ಜಲಾವೃತಗೊಂಡು ಮನೆಯ ಎಲ್ಲಾ ವಸ್ತುಗಳು ಹಾಳಾಗಿವೆ. ಇನ್ನು ಸಂಪಾಜೆಯಲ್ಲೂ 2 ಕುಟುಂಬಗಳಿಗೆ ಪಯಶ್ವಿನಿ ನದಿ ನೀರು ನುಗ್ಗಿ ತೀವ್ರ ಹಾನಿಯಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಪ್ರವಾಹದ ನೀರು ನುಗ್ಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ಡಾ ಬಿ.ಸಿ. ಸತೀಶ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಐದು ಮನೆಗಳಿಗೆ ಪಯಶ್ವಿನಿ ನದಿ ನೀರು
ಕಳೆದ 20 ದಿನಗಳ ಹಿಂದೆಯಷ್ಟೇ ಈ ಐದು ಮನೆಗಳಿಗೆ ಪಯಶ್ವಿನಿ ನದಿ ನೀರು ನುಗ್ಗಿ ಜಲಾವೃಗೊಂಡು ತೀವ್ರ ಸಮಸ್ಯೆ ಎದುರಿಸಿದ್ದವು. ಹೀಗಾಗಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮತ್ತು ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜನರು ನಾವು ಪಯಶ್ವಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಕೇಳಿದ್ದೆವು. ಆದರೆ ನೀವು ಕಿಂಡಿ ಅಣೆಕಟ್ಟು ನಿರ್ಮಿಸಿ ಜನರಿಗೆ ಉಪಕಾರ ಮಾಡಿಕೊಡುವ ಬದಲು ಉಪದ್ರ ನೀಡಿದ್ದೀರಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಕಿಂಡಿ ಅಣೆಕಟ್ಟು ಕಟ್ಟಿರುವ ಪರಿಣಾಮ ಇಂದು ನಾವು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿದ್ದೇವೆ.
ಇದನ್ನೂ ಓದಿ: Kattathila Mutt: ಮಧ್ವಾಚಾರ್ಯರು ಕಡೆಯದಾಗಿ ಭೇಟಿ ನೀಡಿದ ಕಟತ್ತಿಲ ಮಠದ ಬಗ್ಗೆ ನಿಮಗೆ ತಿಳಿಯಬೇಕೇ! ಹಾಗಾದರೆ ಇದನ್ನು ಓದಲೇಬೇಕು
ನೀವೇನೋ ಬಂದು ಇಲ್ಲಿ ಟಾಟಾ ಮಾಡಿ ಐದು, ಹತ್ತು ಸಾವಿರ ಪರಿಹಾರ ಅಂತ ಕೊಟ್ಟು ಕೈತೊಳೆದುಕೊಳ್ಳುತ್ತೀರಿ ಎಂದು ಅಸಮಾಧಾನ ಹೊರಹಾಕಿದರು.
ಜನರನ್ನು ಸಮಾಧಾನಪಡಿಸಿದ ವಿರಾಜಪೇಟೆ ಶಾಸಕ.ಕೆ.ಜಿ. ಬೋಪಯ್ಯ ತಡೆಗೋಡೆಗಳನ್ನು ಇನ್ನಷ್ಟು ಎತ್ತರಿಸಲು ಸೂಚಿಸಲಾಗಿದೆ.
ಇನ್ನು ಮುಂದೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸಮಾಧಾನಪಡಿಸಿ ಬಳಿಕ ಕೊಯಿನಾಡಿನ ಐದು ಮತ್ತು ಸಂಪಾಜೆಯ ಎರಡು ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 10 ಸಾವಿರ ರೂಪಾಯಿ ಪರಹಾರ ಚೆಕ್ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಪಶ್ಚಿಮ ವಾಹಿನಿ ಯೋಜನೆ ಅಡಿಯಲ್ಲಿ ಜನರಿಗೆ ಅನುಕೂಲವಾಗಲೆಂದು ಕಿಂಡಿ ಅಣೆಕಟ್ಟು ಕಟ್ಟಲಾಗಿತ್ತು. ಆದರೆ ಅಣೆಕಟ್ಟು ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಾಗ ಸರಿಯಿಲ್ಲ ಎನಿಸುತ್ತಿದೆ.
ಜನರು ಒಪ್ಪುವುದಾದರೆ ಅವರಿಗೆ ಶಾಶ್ವತವಾಗಿ ಅನುಕೂಲವಾಗುವಂತೆ ಈ ಐದು ಮನೆಗಳಿಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಸುರಕ್ಷಿತ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದಿದ್ದಾರೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾಗಿರುವ ಕಲ್ಲುಗುಂಡಿಯಲ್ಲೂ ಪಯಶ್ವಿನಿ ನದಿ ಹರಿದ ಪರಿಣಾಮ ಕಲ್ಲುಗುಂಡಿ ಬಹುತೇಕ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಹರಿದಿದ್ದ ಪ್ರವಾಹದ ನೀರು ಕೆಲವು ಮನೆಗಳ ಮೊದಲ ಮಹಡಿ ಮುಳುಗುವಷ್ಟು ನೀರು ನುಗ್ಗಿದೆ.
ಇದನ್ನೂ ಓದಿ: Basavaraj Bommai: ಮಳೆಯಿಂದಾದ ಮನೆ ಹಾನಿಗೆ ತಕ್ಷಣ ಪರಿಹಾರ ನೀಡಿ: ಸಿಎಂ ಬೊಮ್ಮಾಯಿ ಸೂಚನೆ
ರಾತ್ರಿ ಒಂಭತ್ತುವರೆ ಗಂಟೆ ಸಮಯದಲ್ಲಿ ಪ್ರವಾಹದ ನೀರು ನುಗ್ಗಿರುವುದರಿಂದ ಜನರು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಂಪೂರ್ಣ ಜಲಾವೃತಗೊಂಡು ಮನೆಯ ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಜನರು ಮೊದಲ ಮಹಡಿ ಮತ್ತು ಮೇಲ್ಚಾವಣಿ ಏರಿ ಜೀವ ಉಳಿಸಿಕೊಂಡಿದ್ದಾರೆ. ಮುಂಜಾನೆ ಐದುಗಂಟೆಯವರಿಗೆ ಜನರು ಜಲಾವೃತವಾಗಿರುವ ಮನೆಗಳ ಛಾವಣಿಗಳ ಮೇಲೆ ಕಾಲ ಕಳೆದಿದ್ದಾರೆ. ಮನೆಗಳು ಅಷ್ಟೇ ಅಲ್ಲ, ಹತ್ತಾರು ಅಂಗಡಿಗಳು ಪ್ರವಾಹದ ನೀರಿನಲ್ಲಿ ಮುಳುಗಿ ಅಪಾರ ನಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ