ಚಾಮರಾಜನಗರದಲ್ಲಿ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸತ್ತಿದ್ದರೆ ಸರ್ಕಾರದ ‌ನಿರ್ಲಕ್ಷ್ಯವೇ ಕಾರಣ; ಸಿ.ಟಿ. ರವಿ

ಆರೋಗ್ಯ ಸಚಿವ ಸುಧಾಕರ್ ಕೇವಲ‌ ಚಿಕ್ಕಬಳ್ಳಾಪುರಕ್ಕೆ ಮಾತ್ರ ಸಚಿವರಲ್ಲ. ಅವರು ಇಡೀ ರಾಜ್ಯದ ಆರೋಗ್ಯ ಮಂತ್ರಿ. ತಮ್ಮ ಜಿಲ್ಲೆಗೆ ಬೆಡ್ ರಿಸರ್ವ್ ಮಾಡಿದ್ದು ಸರಿಯಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕು. ಅವರು ಸಂಕುಚಿತ ಮನೋಭಾವದವರು ಎನಿಸಿಕೊಳ್ಳುತ್ತಾರೆ. ವಿಶಾಲ ಮನೋಭಾವದ ವ್ಯಕ್ತಿ ಎನಿಸಿಕೊಳ್ಳುವುದಿಲ್ಲ ಎಂದು ಚಾಟಿ ಬೀಸಿದರು.

ಸಿ ಟಿ ರವಿ.

ಸಿ ಟಿ ರವಿ.

 • Share this:
  ಬೆಂಗಳೂರು: ಚಾಮರಾಜನಗರದಲ್ಲಿ ನಡೆದ ದುರಂತ ಘೋರ ಅನ್ಯಾಯ. ಈ ದುರಂತಕ್ಕೆ ಯಾರೇ ಹೊಣೆಯಾದರೂ ಅವರ ಮೇಲೆ ಕ್ರಮ ಆಗಲೇಬೇಕು. ಬೇರೆ ರಾಜ್ಯಗಳಲ್ಲಿ ನಡೆಯುತ್ತಿದ್ದ ದುರಂತ ಇಂದು ನಮ್ಮ ರಾಜ್ಯದಲ್ಲಿ ನಡೆದಿದೆ. ಇದು ದುರ್ದೈವದ ಸಂಗತಿ. ಇಂತಹ ಘಟನೆಗಳಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಆದಾಗ ಮಾತ್ರ ಮತ್ತೆ ಇಂಥ ದುರಂತಗಳು ಮರುಕಳಿಸುವುದಿಲ್ಲ. ತಕ್ಷಣ ತನಿಖೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.  ಘಟನೆ ಕುರಿತು ನಾನು ಸಿಎಂ ಭೇಟಿ ಮಾಡಿದ್ದೇನೆ. ಬೇರೆ ಜಿಲ್ಲೆಗಳ ಆಕ್ಸಿಜನ್ ಕೊರತೆ ಬಗ್ಗೆಯೂ ಅವರ ಗಮನಕ್ಕೆ ತಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಇಂದು ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕಾದ ಸ್ಥಿತಿ ಇದೆ. ಬೇರೆ ರಾಜ್ಯಗಳ ದುರ್ಘಟನೆಗಳು ನಮಗೆ ಪಾಠ ಆಗಬೇಕಿತ್ತು. ಈ ಘಟನೆ ಕ್ಷಮೆಗೆ ಅರ್ಹವಲ್ಲದ ಘಟನೆ. ಬೇರೆ ರಾಜ್ಯ ನೋಡಿ ನಮ್ಮ ರಾಜ್ಯ ಎಚ್ಚೆತ್ತುಕೊಳ್ಳಬೇಕಿತ್ತು. ಸಚಿವರು ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು.  ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ ಹೊರಬೇಕು. ಸರ್ಕಾರದ ಗಮನಕ್ಕೂ ಬಂದು ನಿರ್ಲಕ್ಷ್ಯ ವಹಿಸಿದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಅಸಮಾಧಾನ ಹೊರಹಾಕಿದರು.

  ಈ ಹಿಂದೆ ರಾಜಕೀಯ ತುರ್ತು ಪರಿಸ್ಥಿತಿ‌ ಘೋಷಣೆ ಮಾಡಿದ್ದರು. ಈಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು. ಆದ್ಯತೆ ಮೇಲೆ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದ ಸಿ.ಟಿ. ರವಿ, ಆಕ್ಸಿಜನ್ ಕಾರಣಕ್ಕೆ ಸತ್ತಿದ್ದರೆ ಸರ್ಕಾರವೇ ಕಾರಣ. ಆಕ್ಸಿಜನ್ ಕೊರತೆಯಿಂದ ಸತ್ತಿದ್ದರೆ ಸರ್ಕಾರದ ‌ನಿರ್ಲಕ್ಷ್ಯವೇ ಕಾರಣ ಆಗುತ್ತೆ. ಚಿಕಿತ್ಸೆ ವೈಫಲ್ಯದಿಂದ ಸತ್ತಿದ್ದರೆ ಅದು ಉದ್ದೇಶಪೂರ್ವಕ ಅಲ್ಲ. ಉದ್ದೇಶಪೂರ್ವಕವಾಗಿ ಮಾಡಿದರೆ, ಅದಕ್ಕೆ ಕಾರಣರಾದವರೇ ಹೊಣೆ ಹೊತ್ತಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಆದ್ಯತೆ ಮೇಲೆ ಮಾಡಬೇಕು.  ಇದು ಹೆಲ್ತ್ ಎಮರ್ಜೆನ್ಸಿ, ಕೊವಿಡ್ ನಿರ್ವಹಣೆಗೆ ಆದ್ಯತೆ ಕೊಡಬೇಕು ಎಂದು ಹೇಳಿದರು.

  ಇದನ್ನು ಓದಿ: Oxygen Crisis: ಇದು ಸಾವೋ ಅಥವಾ ಕೊಲೆಯೋ?; ಚಾಮರಾಜನಗರ ದುರಂತಕ್ಕೆ ರಾಹುಲ್​ ಗಾಂಧಿ ವಿಷಾದ

  10 ಸಾವಿರ ಬೆಡ್ ಮಾಡಿದ್ದೂ ಹೌದು. ಅದು ಉಪಯೋಗವಾಗದಿದ್ದಾಗ ಅದನ್ನು ಡಿಸ್‌ಮೆಂಟಲ್ ಮಾಡಿದ್ದು ಹೌದು. ಪೂರ್ವಯೋಜಿತವಾಗಿ ಹಂತಹಂತವಾಗಿ ಕೇಸು ಹೆಚ್ಚಾಗಿಲ್ಲ. ಒಂದೇ ಸಲಕ್ಕೆ ಪ್ರಕರಣಗಳು ಹೆಚ್ಚಾದವು. ಹೀಗಾಗಿ‌ ನಿಭಾಯಿಸುವಲ್ಲಿ ಸ್ವಲ್ಪ ಕಷ್ಟ ಆಗಿದೆ. ತುರ್ತುಪರಿಸ್ಥಿತಿ ಎಂದು ಘೋಷಿಸಿ, ಉಳಿದೆಲ್ಲ ಇಲಾಖೆ ಕೆಲಸ ಸ್ಥಗಿತ ಮಾಡಬೇಕು. ಆರೋಗ್ಯದ ಸಮಸ್ಯೆಗೆ ಮಾತ್ರ ಒತ್ತು ನೀಡಬೇಕು ಎಂದು ಸಿ.ಟಿ. ರವಿ ಹೇಳಿದರು.

  ಸಿಎಂ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುತ್ತಾ? ಸಮಸ್ಯೆ ಬಗೆಹರಿಯುತ್ತೆ ಎಂದರೆ ಅಧಿಕಾರ ದೊಡ್ಡದಲ್ಲ. ಬೇರೆ ರಾಜ್ಯಗಳಲ್ಲಿ ಸಿಎಂ ರಾಜೀನಾಮೆ ಕೇಳಿಲ್ಲ. ಇವರು ಕೇಳುತ್ತಿದ್ದಾರೆ, ಸಮಸ್ಯೆ ಪರಿಹಾರ ಆಗುತ್ತೆ ಎಂದರೆ ಅಧಿಕಾರ ದೊಡ್ಡದಲ್ಲ. ಆರೋಗ್ಯ ಸಚಿವ ಸುಧಾಕರ್ ಕೇವಲ‌ ಚಿಕ್ಕಬಳ್ಳಾಪುರಕ್ಕೆ ಮಾತ್ರ ಸಚಿವರಲ್ಲ. ಅವರು ಇಡೀ ರಾಜ್ಯದ ಆರೋಗ್ಯ ಮಂತ್ರಿ. ತಮ್ಮ ಜಿಲ್ಲೆಗೆ ಬೆಡ್ ರಿಸರ್ವ್ ಮಾಡಿದ್ದು ಸರಿಯಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕು. ಅವರು ಸಂಕುಚಿತ ಮನೋಭಾವದವರು ಎನಿಸಿಕೊಳ್ಳುತ್ತಾರೆ. ವಿಶಾಲ ಮನೋಭಾವದ ವ್ಯಕ್ತಿ ಎನಿಸಿಕೊಳ್ಳುವುದಿಲ್ಲ ಎಂದು ಚಾಟಿ ಬೀಸಿದರು.
  Published by:HR Ramesh
  First published: