Theft in Train: ಪುತ್ತೂರು ರೈಲು ನಿಲ್ದಾಣದಲ್ಲಿ 7 ಲಕ್ಷದ ಚಿನ್ನ ಕಳವು! ಆದರ್ಶ ಸ್ಟೇಷನ್​ನಲ್ಲಿ ಕಾಡುತ್ತಿದೆ ಅಭದ್ರತೆ

ಬೆಂಗಳೂರಿನಿಂದ ಪುತ್ತೂರಿನ ಕಡೆಗೆ ಬರುತ್ತಿದ್ದ ಮಹಿಳೆಯೋರ್ವರಿಂದ ಬಲವಂತವಾಗಿ ಬ್ಯಾಗನ್ನು ಕಸಿದುಕೊಂಡು ಸುಮಾರು 7 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಪುತ್ತೂರು ಕಬಕ ನಿಲ್ದಾಣದಲ್ಲಿ ಘಟನೆ ನಡೆದಿದೆ. ಈಗ ಈ ನಿಲ್ದಾಣದಲ್ಲಿ ಅಭದ್ರತೆ ಕಾಡುತ್ತಿದೆ.

ಪುತ್ತೂರು ಕಬಕ ರೈಲು ನಿಲ್ದಾಣ

ಪುತ್ತೂರು ಕಬಕ ರೈಲು ನಿಲ್ದಾಣ

  • Share this:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ನಗರವನ್ನು ಹೊರತುಪಡಿಸಿ ಪುತ್ತೂರು (Putturu) ಜಿಲ್ಲೆಯ ಪ್ರಮುಖ ಅಭಿವೃದ್ದಿ ಹೊಂದುತ್ತಿರುವ ನಗರವಾಗಿ ರೂಪುಗೊಳ್ಳುತ್ತಿದೆ. ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳನ್ನೊಳಗೊಂಡ ಅಭಿವೃದ್ಧಿಶೀಲ ಉಪ ವಿಭಾಗದ ಕೇಂದ್ರವಾಗಿ ಪುತ್ತೂರು ಕಾರ್ಯಾಚರಿಸುತ್ತಿದೆ. ಆದರೆ ಉಪ ವಿಭಾಗದ ಕೇಂದ್ರಸ್ಥಾನದಲ್ಲಿರುವ ಪುತ್ತೂರಿನ ರೈಲು ನಿಲ್ದಾಣ (Railway Station) ಪ್ರಯಾಣಿಕರಿಗೆ (Passengers) ಸುರಕ್ಷಿತ ತಾಣವಾಗಿಲ್ಲ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವಾರು ಅಪರಾಧಿ (Crime) ಕೃತ್ಯಗಳು ಈ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಆದರ್ಶ ರೈಲು ನಿಲ್ದಾಣವೆಂದು ಕರೆಸಿಕೊಳ್ಳುತ್ತಿರುವ ಇಲ್ಲಿ ಪ್ರಯಾಣಿಕರಿಗೆ ಅಭದತ್ರೆ (Insecurity) ಕಾಡುತ್ತಿದೆ. ಇದೀಗ ಇಲ್ಲಿ 40 ಸಾವಿರ ಹಣ, 7 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹೀಗೆ ಎಲ್ಲಾ ಕಡೆಗಳಲ್ಲಿ ಜನ ಜಂಗುಳಿ ಇರೋದು ಸಾಮಾನ್ಯ. ಈ ಜನಜಂಗುಳಿಯ ಲಾಭವನ್ನು ದುಷ್ಕರ್ಮಿಗಳು ಪಡೆದುಕೊಳ್ಳೋದೂ ಸಾಮಾನ್ಯವಾಗಿದೆ. ಇದು ಜನಜಂಗುಳಿ ಇರುವ ಜಾಗಗಳ ಸಮಸ್ಯೆಯಾದರೆ, ಇನ್ನು ಕೆಲವು ಕಡೆಗಳಲ್ಲಿ ಜನ ಸಂಚಾರವಿಲ್ಲದಿರುವುದೂ ಅಪರಾಧಿಗಳಿಗೆ ತಮ್ಮ ಕೃತ್ಯ ನಡೆಸಲು ವರದಾನವಾಗುತ್ತಿದೆ.

ಪುತ್ತೂರು ರೈಲು ನಿಲ್ದಾಣಕ್ಕೆ ಆದರ್ಶ ರೈಲು ನಿಲ್ದಾಣವೆಂದು ಘೋಷಣೆ
ಇಂಥಹ ಒಂದು ಸಮಸ್ಯೆಗೆ ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ಪುತ್ತೂರು ರೈಲು ನಿಲ್ದಾಣವೂ ಸಿಲುಕಿಕೊಂಡಿದೆ. ಇತ್ತೀಚೆಗಷ್ಟೇ ಈ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ನಿಲ್ದಾಣವನ್ನು ಆದರ್ಶ ರೈಲು ನಿಲ್ದಾಣ ಎಂದು ಘೋಷಿಸಲಾಗಿತ್ತು. ಆ ಬಳಿಕ ಈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.

ಇದನ್ನೂ ಓದಿ: ಮೈಸೂರಿನ ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ

ಹೆಚ್ಚು ಪ್ರಯಾಣಿಕರ ಸಂಚಾರ
ಮುಖ್ಯವಾಗಿ ಮಂಗಳೂರು- ಬೆಂಗಳೂರು ಮಧ್ಯೆ ಓಡಾಡುವ ರೈಲುಗಳು ಪುತ್ತೂರು ರೈಲು ನಿಲ್ದಾಣದ ಮೂಲಕವೇ ಹಾದು ಹೋಗುತ್ತದೆ. ಇದೇ ಕಾರಣದಿಂದ ಮಂಗಳೂರಿನಿಂದ ಬೆಂಗಳೂರು ಹೊರಡುವ, ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುವ ಹೀಗೆ ಎರಡು ದಿಕ್ಕಿನ ಪ್ರಯಾಣಕ್ಕೂ ಪುತ್ತೂರು ನಿಲ್ದಾಣದಲ್ಲಿ ಪ್ರಯಾಣಿಕರು ಇರುತ್ತಾರೆ. ಬೆಂಗಳೂರಿನಿಂದ- ಮಂಗಳೂರು ಮೂಲಕ ಹಾದುಹೋಗುವ ರೈಲು ಪುತ್ತೂರು ನಿಲ್ದಾಣಕ್ಕೆ ಬೆಳಗ್ಗಿನ ಜಾವ ಸುಮಾರು 2.30ಕ್ಕೆ ತಲುಪುತ್ತದೆ.

ಪುತ್ತೂರು ರೈಲು ನಿಲ್ದಾಣದಲ್ಲಿ ಚಿನ್ನ ಕಳವು
ಹೀಗೆ ತಲುಪುವ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಕೆಲವು ದುಷ್ಕರ್ಮಿಗಳು ಕಳ್ಳತನ, ದರೋಡೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಿಂದ ಪುತ್ತೂರಿನ ಕಡೆಗೆ ಬರುತ್ತಿದ್ದ ಮಹಿಳೆಯೋರ್ವರಿಂದ ಬಲವಂತವಾಗಿ ಬ್ಯಾಗನ್ನು ಕಸಿದುಕೊಂಡು ಸುಮಾರು 7 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು.

ರಾತ್ರಿ ವೇಳೆಯೇ ಹೊಂಚು ಹಾಕಿ ಕಳ್ಳತನ
ರಾತ್ರಿಯ ಸಮಯದಲ್ಲಿ ರೈಲ್ವೇ ನಿಲ್ದಾಣದಲ್ಲಿ ಯಾವುದೇ ಭದ್ರತೆ ಇಲ್ಲದ ಕಾರಣ ಕಳ್ಳರನ್ನು ಹಿಡಿಯಲೂ ಸಾಧ್ಯವಾಗುತ್ತಿಲ್ಲ. ಇಂಥಹ ಹಲವಾರು ಘಟನೆಗಳು ಈ ರೈಲು ನಿಲ್ದಾಣದಲ್ಲಿ ನಡೆದಿದ್ದು, ಕೆಲವರು ಮಾತ್ರ ಈ ಸಂಬಂಧ ದೂರು ದಾಖಲಿಸುತ್ತಿದ್ದು, ಇನ್ನು ಕೆಲವರು ದೂರು ದಾಖಲಿಸಿಕೊಳ್ಳಲು ನಿರಾಸಕ್ತಿಯನ್ನೂ ವಹಿಸುತ್ತಾರೆ.

ರೈಲು ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆಗೆ ಮನವಿ
ಇದಕ್ಕಾಗಿ ಪುತ್ತೂರು ರೈಲು ನಿಲ್ದಾಣದ ಆವರಣಕ್ಕೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗಿನವರೆಗೆ ಪೋಲೀಸ್ ಪಹರೆಯನ್ನು ಹಾಗೂ ರೈಲು ನಿಲ್ದಾಣದ ಒಳಗಡೆ ರೈಲ್ವೇ ಪೋಲೀಸರ ನಿಯೋಜನೆಯಾಗಬೇಕೆಂದು ಪ್ರಯಾಣಿಕರು ಒತ್ತಾಯಿಸಲಾರಂಭಿಸಿದ್ದಾರೆ.

ಸೂಕ್ತ ಭದ್ರತೆಗೆ ಹೆಚ್ಚಿದ ಒತ್ತಡ
ಈ ಸಂಬಂಧ ರೈಲು ಪ್ರಯಾಣಿಕರು ಸ್ಥಳೀಯ ಪುತ್ತೂರು ನಗರಸಭೆಗೂ ಮನವಿ ಮಾಡಿದ್ದಾರೆ. ಪ್ರಯಾಣಿಕರ ಮನವಿಯ ಹಿನ್ನಲೆಯಲ್ಲಿ ಪುತ್ತೂರು ಶಾಸಕರು, ಪೋಲೀಸ್ ಡಿವೈಎಸ್ಪಿ ಮತ್ತು ರೈಲು ನಿಲ್ದಾಣದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ರೈಲು ನಿಲ್ದಾಣದಲ್ಲಿ ಸೂಕ್ತ ಭದ್ರತೆಯನ್ನು ಒದಗಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಸ್ಮಶಾನ ಇಲ್ಲದೇ ಹೆಣ ಹೂಳಲು ಪಂಚಾಯ್ತಿ ಆವರಣದಲ್ಲಿ ಗುಂಡಿ ತೆಗೆದ ಗ್ರಾಮಸ್ಥರು

ಪ್ರೀ ಪೇಯ್ಡ್ ಆಟೋ ವ್ಯವಸ್ಥೆ?
ಅಲ್ಲದೆ ರೈಲು ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ವ್ಯವಸ್ಥೆಯನ್ನೂ ಕಲ್ಪಸಲು ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಲಾಗಿದೆ. ರೈಲು ನಿಲ್ದಾಣದಲ್ಲಿ ಬೇರೆ ಬೇರೆ ಕಡೆಗಳ ಆಟೋಗಳು ರಾತ್ರಿ ಹೊತ್ತಿನಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯಲು ಬರುತ್ತಿವೆಯಾದರೂ, ಈ ಆಟೋಗಳ ಬಗ್ಗೆ ಸಮಗ್ರ ಮಾಹಿತಿಗಳನ್ನೂ ಪೋಲೀಸ್ ಇಲಾಖೆ ಪಡೆದುಕೊಳ್ಳುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲು ಪುತ್ತೂರು ನಗರಸಭೆ ತೀರ್ಮಾನಿಸಿದೆ.

ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿರುವ ಪುತ್ತೂರು ನಿಲ್ದಾಣದಲ್ಲಿ ಅಗತ್ಯವಾಗಿ ಬೇಕಾದ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ನಿಗಾವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ, ಪೋಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
Published by:Thara Kemmara
First published: