ಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೇಕಾಬಿಟ್ಟಿ ತಮ್ಮ ಪಿಪಿಇ ಕಿಟ್ ಎಸೆಯುವಂತಿಲ್ಲ!

ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇವೆ. ಜೊತೆಗೆ ಪಿಪಿಇ ವಿಲೇವಾರಿಗಾಗಿ ನಿಯೋಜಿಸಲಾದ ಕಸದ ಡಬ್ಬಿಗಳನ್ನು ಬಳಸುವುದರೊಂದಿಗೆ ಅವರ ನಗರ ಮತ್ತು ವಿಮಾನ ನಿಲ್ದಾಣಗಳನ್ನು ಸ್ವಚ್ಛವಾಗಿ ಇರಿಸುವ ಬದ್ಧತೆಯನ್ನು ಉಳಿಸಿಕೊಳ್ಳುವಂತೆ ಕೋರುತ್ತೇವೆ ಎಂದು ಬಿಐಎಎಲ್‍ನ ವಕ್ತಾರರು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

  • Share this:
ದೇವನಹಳ್ಳಿ; ದೇಶ ಹಬ್ಬದ ಆಚರಣೆಯ ಮನೋಭಾವದಲ್ಲಿದ್ದು, ಜನರು ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ಪ್ರಯಾಣ ಆರಂಭಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ / ಬೆಂಗಳೂರು ವಿಮಾನ ನಿಲ್ದಾಣ) ದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  (ಬಿಐಎಎಲ್) ಈಗ ಪ್ರಯಾಣಿಕರು ಅವರ ವೈಯಕ್ತಿಕ ಸಂರಕ್ಷಣೆಯ ಉಪಕರಣಗಳ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್-ಪಿಪಿಇ) ವಿಲೇವಾರಿ ಮಾಡಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲವಾರು ಕಡೆಗಳಲ್ಲಿ ಇಡಲಾಗಿರುವ ಜೈವಿಕ ತ್ಯಾಜ್ಯದ ಕಸದ ಡಬ್ಬಿಗಳನ್ನು ಬಳಸುವಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

ಪ್ರಯಾಣಿಕರು ತಾವು ಧರಿಸುತ್ತಿರುವ ಪಿಪಿಇ ಕಿಟ್, ಕೈ ಗಮಸು, ಫೇಸ್ ಶೀಲ್ಡ್, ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವ ಘಟನೆಗಳು ಸರ್ವೇ ಸಾಮಾನ್ಯವಾಗಿದ್ದು ಅದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ವಿಮಾನ ನಿಲ್ದಾಣದ ಒಳಗೂ ಸಹ ಮೂರು ರೀತಿಯ ತ್ಯಾಜ್ಯ ನಿರ್ವಹಣಾ ಡಬ್ಬಿ ಇಟ್ಟಿದ್ದರೂ ಸಾರ್ವಜನಿಕರು ಯಾವುದೊ ಡಬ್ಬಕ್ಕೆ ಹಾಕಿ ಹೋಗುತ್ತಿದ್ದಾರೆ. ಇದರಿಂದ ಕಸ ವಿಂಗಡಣೆಗೂ ಸಾಕಷ್ಟು ಸಮಸ್ಯೆ ಎದುರಾಗಿದೆ.

ವೈರಸ್ ಹರಡುವುದನ್ನು ತಡೆಯಲು  ಬಿಐಎಎಲ್ ವಿಭಿನ್ನ ಗಾತ್ರಗಳ 139 ಜೈವಿಕ ತ್ಯಾಜ್ಯ ವಿಲೇವಾರಿ ಬಿನ್‍ಗಳನ್ನು ವಿಮಾನ ನಿಲ್ದಾಣದ ವಿವಿಧೆಡೆಗಳಲ್ಲಿ ಇರಿಸಿದೆ.  ಜೈವಿಕ ತ್ಯಾಜ್ಯವನ್ನು ಜವಾಬ್ದಾರಿಯೊಂದಿಗೆ ನೈತಿಕ ರೀತಿಯಲ್ಲಿ ವಿಲೇವಾರಿ ನಡೆಸಲು ಖಾತ್ರಿ ಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಬಳಸಲಾಗಿರುವ ಪಿಪಿಇಗಳನ್ನು ವಿಮಾನ ನಿಲ್ದಾಣದ ವಿವಿಧ ಕಡೆಗಳಲ್ಲಿ ಎಸೆದಿರುವುದು ಕಂಡುಬಂದಿದ್ದು, ಇವು ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ಆರೋಗ್ಯದ ಅಪಾಯ ಉಂಟು ಮಾಡುತ್ತಿದ್ದು ಪ್ರಯಾಣಿಕರಿಗೆ ಎಚ್ಚರಕೆ ನೀಡಿದೆ.

ಬೆಂಗಳೂರು ವಿಮಾನ ನಿಲ್ದಾಣ ಪ್ರತಿ ದಿನಕ್ಕೆ 800ರಿಂದ 1,000 ಕಿಲೋ ಗ್ರಾಮ್‍ ಗಳಷ್ಟು ಜೈವಿಕ ತ್ಯಾಜ್ಯ ಸಂಗ್ರಹಿಸುತ್ತದೆ. ಕೋವಿಡ್-19ಕ್ಕೆ ಸಂಬಂಧಿತ ಪಿಪಿಇ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನವಾಗಿ, ಬಿಐಎಎಲ್ ಜೈವಿಕ ತ್ಯಾಜ್ಯವನ್ನು ಸರ್ಕಾರ ಸೂಚಿಸಿದ ರೀತಿಯಲ್ಲಿ ವೈಜ್ಞಾನಿಕ ಮಾರ್ಗದಲ್ಲಿ ವಿಲೇವಾರಿ ಮಾಡುವುದನ್ನು ನಿರ್ವಹಿಸುತ್ತಿದೆ. ವರ್ಷಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ಪ್ರಯಾಣಿಕರು ತಾವು ಬಳಸಿದ ಮಾಸ್ಕ್​ಗಳು, ಗ್ಲೌಸ್​ಗಳು ಮತ್ತು ಇತರೆ ಸಂರಕ್ಷಣಾತ್ಮಕ ಉಪಕರಣಗಳನ್ನು ನಿಗದಿತ ಜೈವಿಕ ತ್ಯಾಜ್ಯದ ಕಸದ ಡಬ್ಬಿಗಳಲ್ಲಿ ಹಾಕುವಂತೆ ಬಿಐಎಎಲ್ ಮನವಿ ಮಾಡಿದೆ. ಈ ಕಸದ ಡಬ್ಬಿಗಳನ್ನು ವಿಮಾನ ನಿಲ್ದಾಣದ ವಿವಿಧ ಅನುಕೂಲಕರ ಸ್ಥಳಗಳಲ್ಲಿ ಇಡಲಾಗಿದೆ.

ಇದನ್ನು ಓದಿ: ಅನಾವಶ್ಯಕವಾಗಿ ಬಂದ್ ಮಾಡಿದ್ರೆ ನಾನು ಸಹಿಸಲ್ಲ; ಕನ್ನಡಪರ ಸಂಘಟನೆಗಳಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಜೈವಿಕ ತ್ಯಾಜ್ಯದ ಕಸದ ಡಬ್ಬಿಗಳಲ್ಲದೆ – ಒಣ ತ್ಯಾಜ್ಯ, ಹಸಿ ತ್ಯಾಜ್ಯ ಮತ್ತು ಕಲರ್ ಕೋಡೆಡ್ ಬಿನ್‍ಗಳನ್ನು ಅಲ್ಲಲ್ಲಿ ಇರಿಸಲಾಗಿದೆ. ಆಹಾರ ಪದಾರ್ಥ, ಪ್ಲಾಸ್ಟಿಕ್ ಮತ್ತು ಲೋಹ ಹಾಗೂ ಕಾಗದ ಮುಂತಾದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಇವುಗಳನ್ನು  ಇಡಲಾಗಿದೆ. ಸೂಕ್ತ ವೈಯಕ್ತಿಕ ಸಂರಕ್ಷಣೆಯ ಉಪಕರಣಗಳಾದ ಮಾಸ್ಕ್​ಗಳು, ಗ್ಲೌಸ್‍ಗಳು, ಫೇಸ್ ಶೀಲ್ಡ್ ಮತ್ತು ಹಾಜ್‍ಮ್ಯಾಟ್ ಸ್ಯೂಟ್‍ಗಳ ಬಳಕೆಯು ಕೋವಿಡ್-19 ಹರಡುವುದನ್ನು ತಡೆಯುವ ಹೋರಾಟದಲ್ಲಿ ಬಹಳಷ್ಟು ಮುಖ್ಯವಾಗಿರುತ್ತದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪಿಪಿಇ ಮಾಲಿನ್ಯದ ತೊಂದರೆ ಉಂಟಾಗಲು ದಾರಿಯಾಗಿದೆ. ಅವುಗಳನ್ನು ಕಂಡಲ್ಲಿ ಎಸೆಯುವುದರಿಂದ ಅವು ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವುದಲ್ಲದೆ, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ತೀವ್ರ ಅಪಾಯ ಉಂಟು ಮಾಡಬಹುದು.

ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇವೆ. ಜೊತೆಗೆ ಪಿಪಿಇ ವಿಲೇವಾರಿಗಾಗಿ ನಿಯೋಜಿಸಲಾದ ಕಸದ ಡಬ್ಬಿಗಳನ್ನು ಬಳಸುವುದರೊಂದಿಗೆ ಅವರ ನಗರ ಮತ್ತು ವಿಮಾನ ನಿಲ್ದಾಣಗಳನ್ನು ಸ್ವಚ್ಛವಾಗಿ ಇರಿಸುವ ಬದ್ಧತೆಯನ್ನು ಉಳಿಸಿಕೊಳ್ಳುವಂತೆ ಕೋರುತ್ತೇವೆ ಎಂದು ಬಿಐಎಎಲ್‍ನ ವಕ್ತಾರರು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.
Published by:HR Ramesh
First published: