ವಿಜಯಪುರ(ಡಿಸೆಂಬರ್. 14): ನಮ್ಮೂರು ಬಸ್ ಬಂತು ಎಂದು ಓಡೋಡಿ ಪ್ರಯಾಣಿಕರು ಹೋಗಿ ಸೀಟು ಹಿಡಿದು ಸಂಭ್ರಮಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸಾರಿಗೆ ಇಲಾಖೆ ನೌಕರರ ಮುಷ್ಕರ ಕೊನೆಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಿದ್ದು, ಸುಮಾರು 150ಕ್ಕೂ ಹೆಚ್ಚು ಬಸ್ಸುಗಳು ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸಂಚಾರ ಆರಂಭಿಸಿವೆ. ಈ ಸುದ್ದಿ ಬರುತ್ತಲೇ ಪ್ರಯಾಣಿಕರೂ ಕೂಡ ಬಸ್ ನಿಲ್ದಾಣಗಳತ್ತ ಆಗಮಿಸುತ್ತಿದ್ದಾರೆ. ಹೀಗೆ ಬಂದ ಪ್ರಯಾಣಿಕರು ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸ್ಯಾಟ್ಲೈಟ್ ಬಸ್ ನಿಲ್ದಾಣಗಳಲ್ಲಿ ತಮ್ಮೂರಿನ ಬಸ್ ಬರುವವರೆಗೆ ಕಾಯ್ದಿದ್ದರು. ಯಾವಾಗ ಒಂದೊಂದೆ ಬಸ್ಸುಗಳು ಬರತೊಡಗಿದವೋ ಆ ಬಸ್ಸಿನಲ್ಲಿ ತಮ್ಮೂರಿಗೆ ತೆರಳಬೇಕಿದ್ದ ಪ್ರಯಾಣಿಕರು ಓಡೋಡಿ ಹೋಗಿ ಸೀಟುಗಳಿಗೆ ಟವಲ್ ಹಾಕಿದರು. ಅರ್ಥಾತ್ ಸೀಟು ಹಿಡಿಯಲು ತಮ್ಮ ಕೈಚೀಲ, ಬ್ಯಾಗ್ ಮುಂತಾದ ವಸ್ತುಗಳನ್ನು ಹಾಕಿ ಸೀಟುಗಳನ್ನು ಭದ್ರಪಡಿಸಿಕೊಂಡರು. ನಾ ಮುಂದು, ತಾ ಮುಂದು ಎಂದು ಮಹಿಳೆಯರು ಮತ್ತು ಪುರುಷರು ಎಂಬ ಬೇದಭಾವವಿಲ್ಲದೆ ದೌಡಾಯಿಸಿದ್ದು ಗಮನಾರ್ಹವಾಗಿತ್ತು.
ಇದು ಕಳೆದ ನಾಲ್ಕು ದಿನಗಳಿಂದ ಬಸ್ಸುಗಳ ಸಂಚಾರ ಸಮಸ್ಯೆಯಿಂದ ತತ್ತರಿಸಿರುವ ಪ್ರಯಾಣಿಕರ ಗೋಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ಬಸ್ ನಿಲ್ದಾಣಗಳಿಗೆ ಬರುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ಸುಗಳೂ ಕೂಡ ಬೇರೆ ಬೇರೆ ಮಾರ್ಗಗಳಲ್ಲಿ ಪ್ರಯಾಣ ಬೆಳೆಸಿದವು. ಈ ಸಂದರ್ಭದಲ್ಲಿ ಬಸ್ ಬಂದ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಸಂತೋಷ್, ಮಹಾರಾಷ್ಟ್ರದ ಮಿರಜ್ ಗೆ ಆಸ್ಪತ್ರೆಗೆ ತೆರಳಲು ಬಾಡಿಗೆ ಕಾರಿಗಾಗಿ 4 ಸಾವಿರ ರೂ ಖರ್ಚು ಮಾಡಿದ್ದೆ. ಆದರೆ, ಬಸ್ ಇದ್ದರೆ ಕೇವಲ 300 ರೂ ದಿಂದ 400 ರೂ ಖರ್ಚಾಗುತ್ತಿತ್ತು. ಈಗ ಬಸ್ ಬಂದಿದ್ದರಿಂದ ತಿರುಗಾಡಲು ಅನುಕೂಲವಾಗಿದೆ ಎಂದು ನ್ಯೂಸ್ 18 ಕನ್ನಡದ ಜೊತೆ ಸಂತಸ ಹಂಚಿಕೊಂಡಿದ್ದಾನೆ.
ಈ ಮಧ್ಯೆ, ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ಎಐಟಿಯುಸಿ ಮುಖಂಡ ಐ. ಎಂ. ಮುಶ್ರಿಫ್ ಮತ್ತು ಎಸ್ ಸಿ, ಎಸ್ ಟಿ ನೌಕರರ ಸಂಘಟನೆ ಮುಖಂಡ ಬಸವರಾಜ ತಳವಾರ ಬಸ್ ನಿಲ್ದಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕ ಮತ್ತು ನಿರ್ವಾಹಕರಿಗೆ ಕೈ ಕುಲುಕಿ ಶುಭಾಶಯ ಕೋರಿದರು. ಅಲ್ಲದೇ, ನಿರ್ಭಯವಾಗಿ ಕೆಲಸ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಎಐಟಿಯುಸಿ ಮುಖಂಡ ಐ. ಎಂ. ಮುಶ್ರಿಫ್, ಮೂರು ದಿನ ನಾವು ಮುಷ್ಕರಕ್ಕೆ ಬೆಂಬಲ ನೀಡಿದ್ದೇವು. ನಿನ್ನೆ ರಾತ್ರಿ ಅನಂತ ಸುಬ್ಬರಾವ್ ಸೂಚನೆ ಮೇರೆಗೆ ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಬಸ್ ಸೇವೆ ಆರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವೇ ಖುದ್ದಾಗಿ ಬಂದು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಯನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಅಲ್ಲದೇ, ಈ ಮುಷ್ಕರದಲ್ಲಿ ಸಂಕಷ್ಟ ಎದುರಿಸಿದ ಪ್ರಯಾಣಿಕರಿಗೆ ಕ್ಷಮೆ ಯಾಚಿಸುತ್ತೇವೆ. ಇಂದಿನಿಂದ ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಬಸ್ಸುಗಳು ಸಂಚರಿಸುತ್ತಿವೆ. ಮನೆಯಲ್ಲಿರುವ ಸಿಬ್ಬಂದಿ ಮನೆಗೆ ಬನ್ನಿ ಎಂದು ವಿನಂತಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ : ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಜನವರಿ 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ: ವಾಟಾಳ್ ನಾಗರಾಜ್
ಎಸ್ ಸಿ, ಎಸ್ ಟಿ ನೌಕರರ ಸಂಘದ ಮುಖಂಡ ಬಸವರಾಜ ತಳವಾರ ನ್ಯೂಸ್ 18 ಜೊತೆ ಮಾತನಾಡಿ, ಕರ್ತವ್ಯಕ್ಕೆ ಹಾಜರಾಗುವಂತೆ ಮೊಬೈಲ್ ಮೂಲಕ ಮನವಿ ಮಾಡಿದ್ದೇವು. ಈಗಾಗಲೇ ಶೇ. 50 ರಷ್ಟು ಸಿಬ್ಬಂದಿ ಕರ್ತವ್ಯ್ಯಕ್ಕೆ ಹಾಜರಾಗಿದ್ದಾರೆ. ಇನ್ನುಳಿದ ಶೇ. 50 ರಷ್ಟು ಸಿಬ್ಬಂದಿ ಗ್ರಾಮೀಣ ಭಾಗದಲ್ಲಿದ್ದು, ಬಸ್ ಆರಂಭವಾಗುತ್ತಿದ್ದಂತೆ ಅವರೂ ಕೂಡ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಈವರೆಗೆ ಸಾರ್ವಜನಿಕರಿಗೆ ಆದ ತೊಂದರೆಗೆ ಕ್ಷಮೆ ಯಾಚಿಸುವುದಾಗಿ ಅವರು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ