ಬೆಂಗಳೂರು: ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಪರೇಶ್ ಮೇಸ್ತಾ ಕೊಲೆ (Paresh Mesta) ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ (Karnataka Government) ಹಿಂಪಡೆದುಕೊಂಡಿದೆ. ಪ್ರಕರಣ ಹಿಂಪಡೆದುಕೊಂಡ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಆದೇಶ ಹೊರಡಿಸಿದ್ದಾರೆ. 2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara, Uttara Kannada) ಮೀನುಗಾರ ಕುಟುಂಬದ ಪರೇಶ್ ಮೇಸ್ತಾ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಇದೊಂದು ಕೊಲೆ ಎಂದು ಆರೋಪಿಸಿದ್ದ ಬಿಜೆಪಿ (BJP) ಸೇರಿದಂತೆ ಬಲಪಂಥೀಯ ಸಂಘಟನೆಗಳು ಹತ್ಯೆ ಖಂಡಿಸಿ ಅಂದಿನ ಸಿದ್ದರಾಮಯ್ಯ ಸರ್ಕಾರದ (Siddaramaiah Government) ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಿತ್ತು. ಪರೇಶ್ ಮೇಸ್ತಾ 2017ರಲ್ಲಿ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.
ಹತ್ಯೆ ಸಂಬಂಧ ಶಿರಸಿಯಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಅಂದು ಶಿರಸಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 122 ಜನರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು.
ಇದೀಗ ಸಿಎಂ ಬೊಮ್ಮಾಯಿ ಅವರು ಈ ಮೂರು ಪ್ರಕರಣಗಳನ್ನು ಹಿಂಪಡೆದು ಆದೇಶ ಹೊರಡಿಸಿದ್ದಾರೆ. ಈ ಮೊದಲು ಶಿರಸಿಯಲ್ಲಿ ದಾಖಲಾಗಿದ್ದ 26 ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಬಾಕಿ ಉಳಿದಿದ್ದ ಮೂರು ಪ್ರಕರಣಗಳನ್ನು ಹಿಂಪಡೆಯಲಾಗಿದೆ.
ಯಾರೆಲ್ಲಾ ವಿರುದ್ಧ ದಾಖಲಾಗಿತ್ತು ಪ್ರಕರಣ?
ಶಿರಸಿ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ, ಭಜರಂಗದಳ ಕಾರ್ಯಕರ್ತರು ಸೇರಿದಂತೆ 122 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ 122 ಜನರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲಾಗಿದೆ.
ಪರೇಶ್ ಮೇಸ್ತಾ ಯಾರು?
ಪರೇಶ್ ಮೇಸ್ತಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಮಲಾಕರ ಮೇಸ್ತ ಎಂಬ ಮೀನುಗಾರರ ಕುಟುಂಬದ ಯುವಕ. 21 ವರ್ಷದ ಯುವಕ ಪರೇಶ್ ಮೇಸ್ತ ಏಕಾಏಕಿ ನಾಪತ್ತೆಯಾಗಿದ್ದ.
2017ರ ಡಿಸೆಂಬರ್ ವೇಳೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊನ್ನಾವರದ ಗುಡ್ ಲಕ್ ವೃತ್ತದಲ್ಲಿ ಕೋಮ ಗಲಭೆ ನಡೆದಿತ್ತು. ಈ ವೇಳೆ ಪಟ್ಟಣದ ತುಳುಸಿ ನಗರದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.
ಶವವಾಗಿ ಪತ್ತೆಯಾಗಿದ್ದ ಪರೇಶ್
2017ರ ಡಿಸೆಂಬರ್ 6ಕ್ಕೆ ಪರೇಶ್ ಮೇಸ್ತಾ ಏಕಾಏಕಿ ಕಾಣೆಯಾಗಿದ್ದ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಕನ್ನಡ ಜಿಲ್ಲೆಯ ಪ್ರವಾಸ ಮುಗಿಸಿ ತೆರಳಿದ ಬಳಿಕ, ಅಂದರೆ ಡಿ.8ರಂದು ಪರೇಶ್ ಮೇಸ್ತ ಶವವಾಗಿ ಪತ್ತೆಯಾಗಿದ್ದಯ ಆತನ ದೇಹ ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಮುಂದಿರುವ ಶೆಟ್ಟಿಕೆರೆಯಲ್ಲಿ ದೊರೆತಿತ್ತು.
ಸಿಬಿಐ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ
ಪರೇಶ್ ಮೇಸ್ತಾ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕೆಂದು ಅಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ತೀವ್ರ ಒತ್ತಡಕ್ಕೆ ತಲೆಬಾಗಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
ಬಿ ರಿಪೋರ್ಟ್ ಸಲ್ಲಿಸಿದ ಸಿಬಿಐ
ಪರೇಶ್ ಸಾವು ಆಕಸ್ಮಿಕ ಅಂತ ಸಿಬಿಐ ಹೇಳಿದೆ. ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಸಲ್ಲಿಸಿರುವ ವರದಿಯನ್ನು ಹೊನ್ನಾವರ ಕೋರ್ಟ್ ಪರಿಶೀಲಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ಕೋರ್ಟ್ ತೀರ್ಪು ನೀಡಲಿದೆ.
ಇದನ್ನೂ ಓದಿ: Siddaramaiah: ಪರೇಶ್ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ
ಸಿಬಿಐ ರಿಪೋರ್ಟ್‌ನಲ್ಲಿ ಏನಿದೆ?
ಪರೇಶ್ ಮೇಸ್ತಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಆರೋಪಿಗಳು ಭಾಗಿಯಾಗಿದ್ದಾರೆ ಅಂತ ತೋರಿಸುವ ಯಾವುದೇ ದೋಷಾರೋಪಣೆಯ ಪುರಾವೆಗಳು ಗೋಚರಿಸಿಲ್ಲ. ಅನೇಕ ಸಂಸ್ಥೆಗಳಿಂದ ಸಂಗ್ರಹಿಸಲಾದ ವೈದ್ಯಕೀಯ ಹಾಗೂ ಕಾನೂನು ಪುರಾವೆಗಳು ಹಾಗೂ ಸಾಕ್ಷ್ಯಗಳ ಅಭಿಪ್ರಾಯವು ಪರೇಶ್ ಮೇಸ್ತಾ ಸಾವಿನ ಕಾರಣವನ್ನು ಸ್ಪಷ್ಟವಾಗಿಸಿದೆ.
ನೀರಿನಲ್ಲಿ ಮುಳುಗುವಿಕೆ ಎಂದು ಸ್ಪಷ್ಟವಾಗಿಸಿದೆ. ಅದರಂತೆ, ಅಂತಿಮ ವರದಿಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಜೂನಿಯರ್ ಡಿಎನ್) ಹಾಗೂ ಜೆಎಂಎಫ್‌ಸಿ ಹೊನ್ನಾವರಕ್ಕೆ ಸಲ್ಲಿಸಿದ್ದೇವೆ ಅಂತ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ