• Home
  • »
  • News
  • »
  • state
  • »
  • Paresh Mesta Death Case: ಪರೇಶ್‌ ಮೇಸ್ತ ಸಾವು ಆಕಸ್ಮಿಕ! ಕೋರ್ಟ್‌ಗೆ ಸಲ್ಲಿಸಿದ ರಿಪೋರ್ಟ್‌ನಲ್ಲಿ ಸಿಬಿಐ ಉಲ್ಲೇಖ

Paresh Mesta Death Case: ಪರೇಶ್‌ ಮೇಸ್ತ ಸಾವು ಆಕಸ್ಮಿಕ! ಕೋರ್ಟ್‌ಗೆ ಸಲ್ಲಿಸಿದ ರಿಪೋರ್ಟ್‌ನಲ್ಲಿ ಸಿಬಿಐ ಉಲ್ಲೇಖ

ಮೃತ ಪರೇಶ್ ಮೇಸ್ತ

ಮೃತ ಪರೇಶ್ ಮೇಸ್ತ

ಪರೇಶ್ ಮೇಸ್ತ ಸಾವಿನ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ತನಿಖೆ ಹೊಣೆ ಸಿಬಿಐಗೆ ವಹಿಸಲಾಗಿದ್ದು, ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು. ಇದೀಗ ವಿಸ್ತೃತ ತನಿಖೆ ನಡೆಸಿ ನಾಲ್ಕೂವರೆ ವರ್ಷದ ನಂತರ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

  • Share this:

ಹೊನ್ನಾವರ, ಉತ್ತರ ಕನ್ನಡ: 2017ರ ಡಿಸೆಂಬರ್ 6ರಂದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದಲ್ಲಿ (Honnavar) ನಡೆದಿದ್ದ ಗಲಭೆಯಲ್ಲಿ (Riot) ಶವವಾಗಿ ಪತ್ತೆಯಾಗಿದ್ದ ಮೀನುಗಾರ ಯುವಕ ಪರೇಶ್ ಮೇಸ್ತ (Paresh Mesta) ಸಾವು ಆಕಸ್ಮಿಕ ಅಂತ ಸಿಬಿಐ (CBI) ಹೇಳಿದೆ. ಹೊನ್ನಾವರ ನ್ಯಾಯಾಲಯಕ್ಕೆ (Honnavar Court) ಬಿ ರಿಪೋರ್ಟ್ (B Report) ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಸಲ್ಲಿಸಿರುವ ವರದಿಯನ್ನು ಹೊನ್ನಾವರ ಕೋರ್ಟ್‌ ಪರಿಶೀಲಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ಕೋರ್ಟ್ ತೀರ್ಪು (Judgment) ನೀಡಲಿದೆ.


2017ರ ಡಿಸೆಂಬರ್‌ನಲ್ಲಿ ನಡೆದಿದ್ದ ಗಲಭೆ


2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಗಲಭೆ ನಡೆದು, ಬಳಿಕ ಅದು ಕೋಮು ಸಂಘರ್ಷದ ರೂಪ ಪಡೆದಿತ್ತು. ಆಗ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8ರಂದು ಹೊನ್ನಾವರ ನಗರದ ಬಸ್ ನಿಲ್ದಾಣದ ಮುಂದಿನ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ.


ಬಿಜೆಪಿ, ಹಿಂದೂ ಸಂಘಟನೆಗಳಿಂದ ಆರೋಪ


ಪರೇಶ್ ಮೇಸ್ತನದ್ದು ಕೊಲೆ ಅಂತ ಕುಟುಂಬಸ್ಥರು, ಹಾಗೂ ಬಿಜೆಪಿ, ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಪರೇಶ್ ಮೇಸ್ತನನ್ನು ಅನ್ಯ ಕೋಮಿನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ಮೇಸ್ತಾನನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಈ ಘಟನೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: Suicide: ನನ್ನ ಮೃತದೇಹ ನೋಡೋಕೆ ಬಂದಿಲ್ಲ ಅಂದ್ರೆ ದೆವ್ವವಾಗಿ ಬರ್ತೀನಿ! ಡೆತ್‌ ನೋಟ್‌ ಬರೆದಿಟ್ಟು ಬಾಲಕಿ ಸೂಸೈಡ್


ಕರಾವಳಿಯಲ್ಲಿ ಸಂಘರ್ಷ


ಪರೇಶ್ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಡಿಸೆಂಬರ್‌ 11ರಂದು ಬಂದ್‌ಗೆ ಕರೆ ನೀಡಿದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡಿದ್ದವು.


ಸಿಬಿಐಗೆ ತನಿಖೆ ಹೊಣೆ ನೀಡಿದ್ದ ಸಿದ್ದರಾಮಯ್ಯ ಸರ್ಕಾರ


ಪರೇಶ್ ಮೇಸ್ತ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕೆಂದು ಅಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ತೀವ್ರ ಒತ್ತಡಕ್ಕೆ ತಲೆಬಾಗಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.


ಎನ್ಐಎ ಬದಲು ಸಿಬಿಐ ತನಿಖೆ


ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿತು. ರಾಜ್ಯಪಾಲರಿಗೂ ಈ ಕುರಿತು ದೂರು  ಕೂಡ ನೀಡಲಾಯಿತು. ಆದರೆ ಅಂದಿನ ಸರ್ಕಾರ ಸಿಬಿಐಗೆ ವಹಿಸಿತ್ತು. ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ’ ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ. ಮೇಸ್ತ ಪೋಷಕರ ಒತ್ತಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು.


ಇದನ್ನೂ ಓದಿ: Rahul Gandhi-Ramya: ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯಲ್ಲ! ಹೀಗಂದಿದ್ದೇಕೆ ನಟಿ ರಮ್ಯಾ?


ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು. ಇದೀಗ ವಿಸ್ತೃತ ತನಿಖೆ ನಡೆಸಿ ನಾಲ್ಕೂವರೆ ವರ್ಷದ ನಂತರ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

Published by:Annappa Achari
First published: