HOME » NEWS » State » PARENTS WANTS TO JOIN THEIR CHILDREN TO GOVERNMENT SCHOOLS DUE TO FINANCIAL PROBLEM LG

ಆರ್ಥಿಕ ಸಂಕಷ್ಟದಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ ಪೋಷಕರು

ವಿದ್ಯಾರ್ಥಿಗಳ ಕೊರತೆಯಾಗಿ 2018 ರಿಂದ ಮೂರು ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಇದೀಗ ಮೂರು ಶಾಲೆಗಳಿಗೂ ವಿದ್ಯಾರ್ಥಿಗಳನ್ನು ದಾಖಲಿಸಲು ಪೋಷಕರು ಬಂದಿರುವುದರಿಂದ ಆ ಶಾಲೆಗಳನ್ನು ಮತ್ತೆ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

news18-kannada
Updated:September 15, 2020, 3:45 PM IST
ಆರ್ಥಿಕ ಸಂಕಷ್ಟದಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ ಪೋಷಕರು
ಸರ್ಕಾರಿ ಶಾಲೆ
  • Share this:
ಕೊಡಗು(ಸೆ.15): ಖಾಸಗಿ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳ ವ್ಯಾಮೋಹ ಹಳ್ಳಿಗಳನ್ನು ಬಿಟ್ಟಿರಲಿಲ್ಲ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಕೊರೊನಾ ಸಂಕಷ್ಟದಲ್ಲಿ ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಹೆದರಿ ಮತ್ತೆ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಮೂರು ಶಾಲೆಗಳು ಮತ್ತೆ ತೆರೆಯುತ್ತಿವೆ. ಮಕ್ಕಳು, ವೃದ್ಧರಾದಿಯಾಗಿ ಎಲ್ಲರನ್ನೂ ಬಿಟ್ಟುಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ ಇಡೀ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆದರೆ ಈ ಕೊರೋನಾ ಸರ್ಕಾರಿ ಶಾಲೆಗಳಿಗೆ ಒಂದು ರೀತಿ ವರದಾನವಾಗಿದೆ ಎಂದರೆ ತಪ್ಪಲ್ಲ. ಹೌದು ಖಾಸಗಿ  ಶಾಲೆ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳ ವ್ಯಾಮೋಹ ಗ್ರಾಮೀಣ ಪ್ರದೇಶಗಳನ್ನೂ ಬಿಟ್ಟಿರಲಿಲ್ಲ. ಹೀಗಾಗಿ ಕೊಡಗಿನ ಹಲವು ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಆದರೆ ಕೊರೋನಾ ತಂದಿಟ್ಟಿರುವ ಆರ್ಥಿಕ ಸಂಕಷ್ಟ ಪ್ರತಿ ವ್ಯಕ್ತಿಯ ದುಡಿಮೆಗೆ ಕತ್ತರಿ ಹಾಕಿದೆ. ಇಂತಹ ಆರ್ಥಿಕ ಸಂಕಷ್ಟದಲ್ಲೂ ಖಾಸಗಿ ಶಾಲೆಗಳು ಶುಲ್ಕವನ್ನೇನು ಕಡಿಮೆ ಮಾಡಿಲ್ಲ. ಇದರಿಂದ ಹೆದರಿರುವ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ.

2018 ರಿಂದ ಕೊಡಗಿನ ಮಡಿಕೇರಿ ಮದೆನಾಡು, ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಹಾಗೂ ಕುಂದಾ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದವು. ಖಾಸಗೀ ಶಾಲೆಗಳು ವಸೂಲಿ ಮಾಡುತ್ತಿರುವ ಶುಲ್ಕ ಕಟ್ಟಲಾಗದ ಪೋಷಕರು, ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಚ್ಚಿದ್ದ ಶಾಲೆಗಳನ್ನು ತೆರೆಯುವಂತೆ ಪಂಚಾಯಿತಿ ಅಧಿಕಾರಿಗಳ ಮುಖಾಂತರ ಬಿಇಓ ಅವರಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ನಮಗೆ ಸರ್ಕಾರಿ ಶಾಲೆ ತೆರೆದರೆ ಸಾಕು ಎನ್ನುತ್ತಾರೆ ಮದೆನಾಡಿನ ಪೋಷಕರಾದ ಸರಿತಾ.

ಚೇತರಿಕೆಯತ್ತ ಪ್ರವಾಸೋದ್ಯಮ; ಜನರಲ್ಲಿ ಮರೆಯಾದ ಕೊರೋನಾ ಭಯ; ಜಲಪಾತಗಳ ತವರೂರಲ್ಲಿ ಪ್ರವಾಸಿಗರ ಹಿಂಡು

ಕೊಡಗು ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಚೆನ್ನಾಗಿಯೇ ಇವೆ. ಆದರೂ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದರು. ಪರಿಣಾಮ ವಿದ್ಯಾರ್ಥಿಗಳ ಕೊರತೆಯಾಗಿ 2018 ರಿಂದ ಮೂರು ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಇದೀಗ ಮೂರು ಶಾಲೆಗಳಿಗೂ ವಿದ್ಯಾರ್ಥಿಗಳನ್ನು ದಾಖಲಿಸಲು ಪೋಷಕರು ಬಂದಿರುವುದರಿಂದ ಆ ಶಾಲೆಗಳನ್ನು ಮತ್ತೆ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಕರು ಹಾಗೂ ಕೊಠಡಿಗಳ ಕೊರತೆ ಏನು ಇಲ್ಲ. ಯಾವೆಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯದ ಕೊರತೆ ಇದೆಯೋ ಅವುಗಳಿಗೆ ಸೌಲಭ್ಯ ಕಲ್ಪಿಸಿ, ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಒಲವು ತೋರಿಸುತ್ತಿದ್ದಾರೆ ಡಿಡಿಪಿಐ ಫೆರಿಗ್ರಿನ್ ಎಸ್ ಮಚ್ಚಾಡೋ.

ಒಟ್ಟಿನಲ್ಲಿ ಕೊರೊನಾದಿಂದ ಇಡೀ ಆರ್ಥಿಕ ಸ್ಥಿತಿಯೇ ಬುಡಮೇಲಾಗುತ್ತಿದ್ದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಹಿ ಧೋರಣೆಗೆ ಹೆದರಿದ ವಿದ್ಯಾರ್ಥಿ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಸರ್ಕಾರಿ ಶಾಲೆಗಳ ಪಾಲಿಗೆ ವರದಾನವೇ ಸರಿ.
Published by: Latha CG
First published: September 15, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories