HOME » NEWS » State » PARENTS TEACHING THEM CHILDRENS IN A PRIVATE ROOM AT KABBINAGADDE VILLAGE RH

ಪುಳಿಯೋಗರೆ ಶಿಕ್ಷಕನ ವಿರುದ್ಧ ಆಕ್ರೋಶ; ಖಾಸಗಿ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಪೋಷಕರು!

ಕಬ್ಬಿನಗದ್ದೆ ಗ್ರಾಮದಲ್ಲಿ ಶಿಕ್ಷಕ ಹಾಗೂ ಪೋಷಕರ ನಡುವಿನ ಗದ್ದಲ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ಎದುರಾಗಲಿದೆ. ಆದರೆ, ಪುಳಿಯೋಗರೆ ವಿಚಾರವಾಗಿ ಶಾಲೆಯಲ್ಲಿ ಎದುರಾಗಿರುವ ಸಮಸ್ಯೆಯಿಂದಾಗಿ ಮಕ್ಕಳು ಪಾಠ-ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ತುರ್ತು ಕ್ರಮ ವಹಿಸಿ, ಸಮಸ್ಯೆ ಸರಿಪಡಿಸಬೇಕಿದೆ.

news18-kannada
Updated:February 5, 2020, 4:43 PM IST
ಪುಳಿಯೋಗರೆ ಶಿಕ್ಷಕನ ವಿರುದ್ಧ ಆಕ್ರೋಶ; ಖಾಸಗಿ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಪೋಷಕರು!
ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದ ಸರ್ಕಾರಿ ಶಾಲೆ.
  • Share this:
ಹಾಸನ; ಅದು ಸರ್ಕಾರಿ ಶಾಲೆ. ಹೇಳಿ ಕೇಳಿ ಇವತ್ತಿನ ಕಾಲದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮೂರಿಯುವವರೆ ಜಾಸ್ತಿ. ಆದರೆ ಕಬ್ಬಿನಗದ್ದೆ ಸರ್ಕಾರಿ ಶಾಲೆಯಲ್ಲಿ ಮಾತ್ರ 60ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದಾರೆ. ಆದರೆ ಈ ಪುಳಿಯೋಗರೆ ಶಿಕ್ಷಕ ಮತ್ತೆ ನಮ್ಮ ಶಾಲೆಗೆ ಬಂದವರೆ, ಹಾಗಾಗಿ ನಾವು ನಮ್ಮ‌ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಹೇಳಿ, 26 ಮಕ್ಕಳಿಗೆ ಪೋಷಕರೇ ಗ್ರಾಮದ ಮನೆಯೊಂದರಲ್ಲಿ  ಪಾಠ ಮಾಡುತ್ತಿದ್ದಾರೆ. ಅರೇ ಯಾರಿದು ಪುಳಿಯೋಗರೆ ಶಿಕ್ಷಕ ಅಂತ ಅಚ್ಚರಿ ಆಗುತ್ತಿದೆಯೇ? ಹಾಗಾದರೆ ಈ ವರದಿಯನ್ನು ಒಮ್ಮೆ ಓದಿ. 

ಕಳೆದ ಎರಡು ವಾರದ ಹಿಂದೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಬ್ಬಿನಗದ್ದೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿಯಿಂದ, ಇದೇ ಶಾಲೆಯ ಶಿಕ್ಷಕ ನಿರ್ವಾಣಯ್ಯ ಪುಳಿಯೋಗರೆ ಎಂಬ ಪದ ಹೇಳಿಸಿದ್ದರು. ವಿದ್ಯಾರ್ಥಿನಿ ಪುಳಿಯೋಗರೆ ಪದ ಉಚ್ಛಾರಣೆ ಸಾಧ್ಯವಾಗದೆ ಪರದಾಡುತ್ತಿರುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದರಿಂದ ಶಿಕ್ಷಕ ನಿರ್ವಾಣಯ್ಯ ಅಮಾನತಾಗಿದ್ದರು. ಆದರೆ ಅಮಾನತು ಆದೇಶಕ್ಕೆ ತಡೆ ತಂದ ಶಿಕ್ಷಕ ಮತ್ತೆ ಅದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಹಾಜರಾಗಿದ್ದಾರೆ. ಆದರೆ ಯಾವಾಗ  ವಿದ್ಯಾರ್ಥಿನಿಗೆ ಅವಮಾನ ಮಾಡಿದ ಶಿಕ್ಷಕ ಪುನಃ ಶಾಲೆಗೆ ಪಾಠ ಮಾಡಲು ಆಗಮಿಸಿದರೋ ವಿದ್ಯಾರ್ಥಿಗಳ ಪೋಷಕರು ರೊಚ್ಚಿಗೆದ್ದಿದ್ದಾರೆ. ಸುಮಾರು 26 ಮಕ್ಕಳನ್ನು ಶಾಲೆಯಿಂದ ಹೊರತಂದು ಪ್ರತ್ಯೇಕ ಮನೆಯಲ್ಲಿ ತಾವೇ ಪಾಠ ಮಾಡುತ್ತಿದ್ದಾರೆ. ನಮ್ಮ ಊರಿನಿಂದ ಈ ಶಿಕ್ಷಕ ಹೋಗುವವರೆಗೂ ನಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸುವುದಿಲ್ಲ ಅಂತಾ ಪ್ರತಿಜ್ಞೆ ಮಾಡಿದ್ದಾರೆ.

ನಮ್ಮ ಮಕ್ಕಳ ಮಾನ ಮರ್ಯಾದೆ ಈ ಶಿಕ್ಷಕನಿಂದ ಹೋಗಿದೆ. ಇಂತಹವರು ಮತ್ತೆ ಯಾಕೆ ನಮ್ಮ ಶಾಲೆಗೆ ಬಂದರು. ಇವರು ಬಂದ್ರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ನಾವೇನು ಶಿಕ್ಷಕನನ್ನು ಅಮಾನತು ಮಾಡಿ ಎನ್ನುವುದಿಲ್ಲ. ಆದರೆ ನಮ್ಮ ಊರಿನ ಶಾಲೆಯಿಂದ ವರ್ಗಾವಣೆ ಮಾಡಿ ಎಂದು ಹಠ ಕೇಳುತ್ತಿದ್ದೇವೆ ಎಂದು ಪೋಷಕರು ಹೇಳುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಹಾಸನದ ಡಿಡಿಪಿಐ ಪ್ರಕಾಶ್ ಪ್ರತಿಕ್ರಿಯಿಸಿ, ಘಟನೆ ನನ್ನ ಗಮನಕ್ಕೆ ಬಂದಿದೆ. ಪೋಷಕರ ಆಕ್ರೋಶಕ್ಕೆ ತುತ್ತಾಗಿರುವ ಶಿಕ್ಷಕನನ್ನು ಬೇರೆ ಶಾಲೆಗೆ ಡಪ್ಟೇಷನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಚಿಕ್ಕಮಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಹುಡುಗಿಯನ್ನೇ ಕೊಲೆ ಮಾಡಿದ ಯುವಕ!

ಒಟ್ಟಾರೆ ಕಬ್ಬಿನಗದ್ದೆ ಗ್ರಾಮದಲ್ಲಿ ಶಿಕ್ಷಕ ಹಾಗೂ ಪೋಷಕರ ನಡುವಿನ ಗದ್ದಲ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ಎದುರಾಗಲಿದೆ. ಆದರೆ, ಪುಳಿಯೋಗರೆ ವಿಚಾರವಾಗಿ ಶಾಲೆಯಲ್ಲಿ ಎದುರಾಗಿರುವ ಸಮಸ್ಯೆಯಿಂದಾಗಿ ಮಕ್ಕಳು ಪಾಠ-ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ತುರ್ತು ಕ್ರಮ ವಹಿಸಿ, ಸಮಸ್ಯೆ ಸರಿಪಡಿಸಬೇಕಿದೆ.
Youtube Video
First published: February 5, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories