news18-kannada Updated:January 29, 2021, 7:49 PM IST
ಪೋಲಿಯೊ ಲಸಿಕೆ
ಬೆಂಗಳೂರು (ಜನವರಿ 29); ಜನವರಿ 31ರಂದು ಪೋಲಿಯೊ ಲಸಿಕೆ ಹಾಕಿಸುವ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 17 ರಂದು ಪೋಲಿಯೋ ಲಸಿಕೆ ನೀಡಬೇಕಿತ್ತು. ಕೊರೋನಾ ಲಸಿಕೆ ಬಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೇ ತಿಂಗಳು 31 ರಂದು 0-5 ವರ್ಷದ 64,07,930 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದರು.
ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಚಾಲನೆ ದೊರೆಯಲಿದೆ. ಪೋಷಕರು ಹಿಂದೆ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕಳೆದ 10-11 ವರ್ಷಗಳಿಂದ ಪೊಲೀಯೋ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿಮೂರ್ಲನೆಯಾಗಿದೆ. ಆದರೆ ಪಕ್ಕದ ಪಾಕಿಸ್ತಾನ, ಅಫ್ಫಾನಿಸ್ತಾನದಲ್ಲಿ ಈ ರೋಗ ಇರುವುದರಿಂದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕಿದೆ ಎಂದರು.
ನಮ್ಮಲ್ಲಿ ಒಟ್ಟು 85,05,060 ಡೋಸ್ ಪೊಲೀಯೊ ಲಸಿಕೆ ಲಭ್ಯವಿದೆ. 1,10,179 ವ್ಯಾಕ್ಸಿನೇಟರ್ ಗಳು ಇದ್ದಾರೆ. 6,645 ಸೂಪರ್ ವೈಸರ್ ತಂಡ, 904 ಮೊಬೈಲ್ ತಂಡ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 32,908 ಬೂತ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ಕಳೆದ ವರ್ಷದ ಶೇ.70 ಬೋಧನಾ ಶುಲ್ಕ ಈ ವರ್ಷದ ಶಾಲಾ ಶುಲ್ಕ ನಿಗದಿ: ಸಚಿವ ಸುರೇಶ್ ಕುಮಾರ್
ರಾಜ್ಯದಲ್ಲಿ 2,90,533 ಮಂದಿಗೆ ಕೋವಿಡ್ ಲಸಿಕೆ ನೀಡಿದ್ದು, ಇವತ್ತಿನವರೆಗೆ ಶೇ. 49 ಸಾಧನೆಯಾಗಿದೆ. ಲಸಿಕೆ ಪಡೆದಿರುವುದರಿಂದ ಯಾವುದೇ ಸಾವು ಆಗಿಲ್ಲ. ಈ ಬಗ್ಗೆ ತಪ್ಪು ತಿಳಿವಳಿಕೆ ಬೇಡ. ಕೆಲವೆಡೆ ಅಡ್ಡ ಪರಿಣಾಮವಾಗಿದ್ದು, ಅದು ಕೂಡ ನಂತರ ಪರಿಹಾರವಾಗಿದೆ. ವಾಂತಿ, ನಶೆ ಬರುವುದು ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಅದೂ ಶೀಘ್ರದಲ್ಲಿ ವಾಸಿಯಾಗಲಿದೆ. ಇಂಗ್ಲೆಂಡ್ನಲ್ಲಿ ಅಲ್ಲಿನ ಪ್ರಧಾನಿ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಕೇರಳದಲ್ಲಿ ಪ್ರತೀ ದಿನ ಐದಾರು ಸಾವಿರ ಸೋಂಕಿತರ ಪಟ್ಟಿ ಬರುತ್ತಿದೆ. ಅದರ ಸ್ಯಾಂಪಲ್ ಕಲೆಕ್ಟ್ ಮಾಡಿ, ಅದರ ಸ್ವರೂಪ ಪತ್ತೆ ಹಚ್ಚಲಾಗುತ್ತಿದೆ. ಸಂಪೂರ್ಣ ಸೋಂಕು ಹೋಗಿದೆ ಅನ್ನೋ ಭ್ರಮೆ ಬೇಡ. ಈಗಿರುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದು ಗುಣಮುಖರಾಗಬೇಕು. ಇಂತಹ ಲಸಿಕೆಯ ರಾಮಬಾಣವನ್ನು ಬಳಸದಿದ್ದರೆ ವ್ಯರ್ಥವಾಗುತ್ತದೆ ಎಂದು ಹೇಳಿದರು.
ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕ್ರಮ ವಹಿಸಿದೆ ಎಂದರು.
Published by:
HR Ramesh
First published:
January 29, 2021, 7:49 PM IST