ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸೆಗಣಿಯಿಂದ ಪಾಂಡವರನ್ನು ಪೂಜಿಸುವ ಆಚರಣೆ

ದೀಪಗಳ ಹಬ್ಬ ದೀಪಾವಳಿಯನ್ನು ಹೈದರಾಬಾದ್-ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದುಷ್ಟ ಸಂಹಾರದ ಸಂಕೇತವಾಗಿ ಬಲಿಪಾಡ್ಯಮಿಯನ್ನು ಈ ಭಾಗದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.

Vijayasarthy SN
Updated:November 8, 2018, 8:22 PM IST
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸೆಗಣಿಯಿಂದ ಪಾಂಡವರನ್ನು ಪೂಜಿಸುವ ಆಚರಣೆ
ಪಾಂಡವ ಪೂಜೆ ಆಚರಣೆಯ ಒಂದು ದೃಶ್ಯ
Vijayasarthy SN
Updated: November 8, 2018, 8:22 PM IST
- ಶಿವರಾಮ ಅಸುಂಡಿ / ರಾಚಪ್ಪ ಬನ್ನಿದಿನ್ನಿ, ನ್ಯೂಸ್18 ಕನ್ನಡ

ಕಲಬುರ್ಗಿ/ಬಾಗಲಕೋಟೆ(ನ. 08): ಬಲಿಪಾಡ್ಯಮಿಯನ್ನು ಹೈದರಾಬಾದ್ ಕರ್ನಾಟಕದಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ದೀಪಾವಳಿ ಅಂಗವಾಗಿ ಕಲಬುರಗಿಯಲ್ಲಿ ಪಾಂಡವ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಮನೆಗಳ ಮುಂದೆ ಗೋವಿನ ಸೆಗಣಿಯಿಂದ ಪಾಂಡವರ ಕೋಟೆ ನಿರ್ಮಿಸಿ, ದುಷ್ಟ ಸಂಹಾರದ ಸಂಕೇತವಾಗಿ ರಾಕ್ಷಸನ ಹೊಟ್ಟೆಯಲ್ಲಿ ಪಟಾಕಿ ಇಟ್ಟು ಸಿಡಿಸಲಾಯಿತು. ಗೋಪೂಜೆ ನೆರವೇರಿಸುವ ಶುಭ ಕೋರಲಾಯಿತು. ಗೋವಿನ ಸೆಗಣಿಯನ್ನು ಪೂಜಿಸುವ ಮೂಲಕ ಧನ-ಕನಕ ಪ್ರಾಪ್ತಿಯಾಗಲಿ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಲಾಯಿತು.

ಬಲಿಪಾಡ್ಯಮಿಯ ದಿನವಾದ ಇಂದು ಪಾಂಡವ ಪೂಜೆ ನೆರವೇರಿಸಲಾಯಿತು. ಮನೆಗಳ ಮುಂದೆ ಗೋವಿನ ಸೆಗಣಿಯಿಂದ ಪಾಂಡವರ ಕೋಟೆ ನಿರ್ಮಿಸಿ, ಸಮೃದ್ಧ ಜೀವನವನ್ನು ಬಿಂಬಿಸುವ ರೂಪಕಗಳನ್ನು ರಚಿಸಲಾಯಿತು. ಬೀಸುವ ಕಲ್ಲು, ಕುಟ್ಟುವ ಒರಳು, ಒನಕೆ, ಹಾಲು ಕಡೆಯುವ ಕಡಗೋಲು ಇತ್ಯಾದಿ ರೂಪಕಗಳನ್ನು ಸಮೃದ್ಧಿಯ ಸಂಕೇತವಾಗಿ ರಚಿಸಲಾಯಿತು. ನಂತರ ಕೋಟೆ ಬಾಗಿಲಿನಲ್ಲಿ ರಾಕ್ಷಸ ಅಥವಾ ಕಳ್ಳನನ್ನು ಪ್ರತಿಷ್ಠಾಪಿಸಲಾಯಿತು. ಪಾಂಡವರ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ ಕೌರವರ ಪ್ರತಿನಿಧಿ ರಾಕ್ಷಸನ ಹೊಕ್ಕಳಲ್ಲಿ ಪಟಾಕಿ ಇಟ್ಟು ಸಿಡಿಸುವ ಮೂಲಕ ಸಂಭ್ರಮಿಸಲಾಯಿತು. ಆ ಮೂಲಕ ಸಾಂಕೇತಿಕವಾಗಿ ದುಷ್ಟನ ಸಂಹಾರವನ್ನು ಮಾಡಲಾಯಿತು.

ಪಾಂಡವ ಪೂಜೆಯ ಜೊತೆಗೆ ಗೋವಿನ ಪೂಜೆಯನ್ನೂ ನೆರವೇರಿಸಲಾಯಿತು. ಮುತ್ತೈದೆಯರನ್ನು ಮನೆಗೆ ಕರೆಯಿಸಿ ಉಡಿ ತುಂಬುವ ಸಂಪ್ರದಾಯವೂ ನೆರವೇರಿತು. ಸುಖ-ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು. ದುಷ್ಟನನ್ನು ಸಂಹರಿಸಿದ ಸಂಭ್ರಮದಲ್ಲಿ ಸಿಹಿ ಹಂಚಲಾಯಿತು.

ಗೋವಿನ ಸೆಗಣಿಯಲ್ಲಿ ಲಕ್ಷ್ಮಿಯನ್ನು ಕಾಣುವ ಸಂಪ್ರದಾಯವಿದೆ. ಹೀಗಾಗಿ ಲಕ್ಷ್ಮಿ ಅಥವಾ ಸಿರಿಯ ಸಂಕೇತವಾಗಿ ಗೋವಿನಿಂದ ಪಾಂಡವರ ಕೋಟೆಯನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ಧನ-ಕನಕ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಗುತ್ತದೆ. ಅಲ್ಲದೆ ಭಾರತ ದೇಶದ ಎಲ್ಲ ನಿವಾಸಿಗಳಿಗೂ ಶುಭವಾಗಲಿ ಎಂದು ಈ ವೇಳೆ ಪ್ರಾರ್ಥಿಸಲಾಯಿತು. ಪುಟ್ಟ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಾಗಲಕೋಟೆಯಲ್ಲೂ ಸೆಗಣಿ ಪಾಂಡವರು:

ಬಾಗಲಕೋಟೆಯಲ್ಲೂ ಬಲಿಪಾಡ್ಯಮಿ ದಿನದಂದು ಮಹಾಭಾರತದ ಪಾಂಡವರಿಗೆ ಸೆಗಣಿಯಿಂದ ತಯಾರಿಸಿರುವ ವಿಶೇಷ ಖಾದ್ಯದ ನೈವೇದ್ಯ ನೀಡಲಾಯಿತು. ಅಂದು ವನವಾಸದಲ್ಲಿ ಪಾಂಡವರು ಕಲ್ಲಿನಿಂದ ಕಡಬು ಮತ್ತು ಮುಳ್ಳಿನಿಂದ ಶಾವಿಗೆಯನ್ನ ತಯಾರಿಸಿ ಊಟ ಮಾಡಿದರು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಸಗಣೆಯ ಪಾಂಡವರನ್ನ ರೂಪಿಸಿ ಸುತ್ತ ಬಿಳಿದಾರವನ್ನ ಸುತ್ತಿ, ಜೊತೆಗೆ ಪಾಂಡವರ ಛತ್ರಿ-ಚಾಮರ, ಕಿರೀಟಗಳಿದ್ದಂತೆ ಇಂದು ಉತ್ತರಾಣಿ ಕಡ್ಡಿ, ಬಿಳಿ ಹೊಣ್ಣೆ ಹೂವು, ಅನ್ನ ಮೊಸರಿನ ನೈವೇದ್ಯವನ್ನ ಈ ಸಗಣೆ ಪಾಂಡವರಿಗೆ ನೀಡಲಾಗುತ್ತೆ.
Loading...

ದೀಪಾವಳಿಯ ಪಾಡ್ಯಮೆ ದಿನದಂದು ಇಲ್ಲಿ ರೈತಾಪಿ ಜನ, ಒಕ್ಕಲಿಗ, ನೇಕಾರರು ಸೇರಿದಂತೆ ವಿವಿಧ ಪಂಗಡಗಳ ಜನತೆ ಗೋವಿನ ಸಗಣೆಯನ್ನ ತಂದು ಆ ಮೂಲಕ ಪಂಚ ಪಾಂಡವರನ್ನು ತಯಾರಿಸ್ತಾರೆ. ಅವುಗಳನ್ನ ತಮ್ಮ ಮನೆಯ ಬಾಗಿಲಿನ ಅಕ್ಕಪಕ್ಕದಲ್ಲಿ ಸುತ್ತುವರೆದು ಇಟ್ಟು ಅವುಗಳನ್ನ ಪೂಜಿಸುವ ಪರಿ ವಿಶೇಷ. ಇಂತಹ ಪದ್ದತಿ ಆಚರಣೆಯಿಂದ ನಮ್ಮ ಮನೆ ಮಕ್ಕಳಿಗೆ ಭವಿಷ್ಯದಲ್ಲಿ ಪಾಂಡವರ ರೀತಿಯಲ್ಲಿ ವನವಾಸ ಬರಬಾರದೆಂಬ ಉದ್ದೇಶದಿಂದ ಈ ಆಚರಣೆ ಮಾಡ್ತೀವಿ ಅಂತಾರೆ ಸ್ಥಳೀಯರು.ಸಾಯಂಕಾಲ ಪಂಚಪಾಂಡವರನ್ನು ಮನೆಯ ಮೇಲ್ಛಾವಣಿಯಲ್ಲಿಡುತ್ತಾರೆ.

ಒಟ್ಟಾರೆ ಬಲಿಪಾಡ್ಯಮಿಯ ದಿನದಂದು ಪಾಂಡವ ಪೂಜೆಯ ವಿಶಿಷ್ಟ ಆಚರಣೆಯ ಮೂಲಕ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯನ್ನು ಸಾಂಕೇತಿಕವಾಗಿ ಬಿಂಬಿಸಲಾಗುತ್ತದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ನೂರಾರು ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ