ಬಾಗಲಕೋಟೆ (ಫೆ.2) : 2ಎ ಮೀಸಲಾತಿಗೆ (2 A Reservation) ಆಗ್ರಹಿಸಿ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ಲಿಂಗಾಯತ ಪಂಚಮಾಸಲಿ ಸಮುದಾಯದಲ್ಲಿ ಈಗ ಮೂರನೇ ಪೀಠ (3rd Peeta) ಸ್ಥಾಪನೆ ವಿಚಾರ ಬೂದಿ ಮುಚ್ಚಿದ ಕೆಂಡವಾದಂತೆ ಕಾಣುತ್ತಿದೆ. ಪಂಚಮಸಾಲಿ (Panchamasali) ಸಮುದಾಯಕ್ಕೆ ಈಗಾಗಲೇ ಎರಡು ಪೀಠಗಳಿದ್ದು, ಈಗ ಮತ್ತೊಂದು ಪೀಠ ಸ್ಥಾಪನೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ಮೂರನೇ ಪೀಠಕ್ಕಾಗಿ ಒಂದು ಎಕರೆ ಜಾಗ ಕೂಡ ಖರೀದಿಸಲಾಗಿದೆ. ಮೂರನೇ ಪೀಠದ ಪೀಠಾಧ್ಯಕ್ಷರನ್ನಾಗಿ ಬಬಲೇಶ್ವರ ಬ್ರಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳನ್ನ ನೇಮಕ ಮಾಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ನೂತನ ಪೀಠಾಧ್ಯಕ್ಷರ ಪೀಠಾರೋಹಣ ಕಾರ್ಯಕ್ರಮದ ದಿನಾಂಕ ಬದಲು ಮಾಡಲಾಗಿದ್ದು ಫೆಬ್ರವರಿ 13ರಂದು ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಿದ್ಧತೆ ನಡೆದಿದ್ದು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಮಠಾಧೀಶರು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ.
ಮೂರನೇ ಪೀಠದ ಸ್ಥಾಪನೆ ಹಿನ್ನೆಲೆ ಏನು? ಸಮಾಜ ಒಗ್ಗಟ್ಟು ಮಾಡುವವರು ಯಾರು ಒಡೆಯುವವರು ಯಾರು.?
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಎಷ್ಟು ಕಾವು ಪಡೆದುಕೊಂಡಿತ್ತೋ, ಅಷ್ಟೇ ಭಿನ್ನಾಭಿಪ್ರಾಯ, ಗೊಂದಲ, ಆರೋಪ, ಪ್ರತ್ಯಾರೋಪಗಳು ಸದ್ದು ಮಾಡುತ್ತಿವೆ. ಈ ಬೆಳವಣಿಗಳು ಸಮುದಾಯದ ಜನರಿಗೆ ಗೊಂದಲ ಮೂಡಿಸಲು ಕಾರಣವಾಗಿವೆ. ಮೀಸಲಾತಿ ಹೋರಾಟದ ಆರಂಭದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಜೊತೆಗೆ ಪಕ್ಷಾತೀತವಾಗಿ ಸಮುದಾಯದ ರಾಜಕೀಯ ನಾಯಕರು ಕೈ ಜೋಡಿಸಿ ಬೆಂಬಲವಾಗಿ ನಿಂತಿದ್ದರು. ಹೀಗಾಗಿ ಸಮುದಾಯದ ಒಗ್ಗಟ್ಟಿನ ಹೋರಾಟ ಸರ್ಕಾರಕ್ಕೂ ಬಿಸಿ ತುಪ್ಪವಾಗಿತ್ತು.
ಪಾದಯಾತ್ರೆ ಹೋರಾಟದಲ್ಲಿ ಕೈ ಕೊಟ್ಟ ನಿರಾಣಿ? ಸಿಡಿದೆದ್ದ ಸ್ವಾಮೀಜಿ..!
ರಾಜ್ಯ ಸರ್ಕಾರ ಮೀಸಲಾತಿ ನೀಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದರು. ಸ್ವಾಮೀಜಿಗಳ ನಿರ್ಧಾರಕ್ಕೆ ಎಲ್ಲರೂ ಬೆಂಬಲವಾಗಿ ನಿಂತಿದ್ದರು. ಪಾದಯಾತ್ರೆ ಆರಂಭಿಸುವ ಹಿಂದಿನ ಎರಡು ದಿನಗಳಲ್ಲಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಲಭಿಸಿದ ಬಳಿಕ ನಿರಾಣಿ ತಮ್ಮ ನಿರ್ಧಾರವನ್ನ ಬದಲಿಸಿ, ಪಾದಯಾತ್ರೆ ಕುರಿತು ವ್ಯತಿರಿಕ್ತ ಹೇಳಿಕೆ ಕೊಟ್ಟು, ಸಮುದಾಯಕ್ಕಾಗಿ ಹೋರಾಟ ನಡೆಸುತ್ತಿದ್ದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದಿನಿಂದ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹಲವು ಆರೋಪಗಳು ಕೂಡ ಕೇಳಿಬಂದವು. ದಿನ ಕಳೆದಂತೆ ಹೋರಾಟದ ಮುಂಚೂಣಿಯಲ್ಲಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದರು.
ಇದನ್ನು ಓದಿ: ಕೊರೊನಾ ಕಡಿಮೆಯಾಗುತ್ತಿದ್ದಂತೆ ಮೇಕೆದಾಟು ಪಾದಯಾತ್ರೆ ಮತ್ತೆ ಸ್ಟಾರ್ಟ್ - ರಾಮಲಿಂಗಾರೆಡ್ಡಿ
ಸದ್ದಿಲ್ಲದೇ ಜಮಖಂಡಿಯಲ್ಲಿ ತಲೆ ಎತ್ತಿದ ಸ್ವಾಮೀಜಿಗಳ ಒಕ್ಕೂಟ: ಮನೆಯೊಂದು ಮೂರು ಬಾಗಿಲಿನಂತಾದ ಸಮುದಾಯ..!
:ಇನ್ನೇನು ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಯಶಸ್ಸು ಸಿಗುವ ಕಾಲ ಸನಿಹವಾಗುತ್ತಿದೆ ಎನ್ನುವ ಚರ್ಚೆಗಳು ನಡೆಯುತ್ತಿರುವಾಗಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹಲವು ಸ್ವಾಮೀಜಿಗಳು ಸಭೆಗಳ ಮೇಲೆ ಸಭೆ ನಡೆಸಿದರು. ನಂತರದಲ್ಲಿ ಪಂಚಮಸಾಲಿ ಸಮುದಾಯದ ಮಠಾಧೀಶರ ಒಕ್ಕೂಟ ರಚನೆ ಮಾಡಿಕೊಂಡು ಟ್ರಸ್ಟ್ ರಿಜಿಸ್ಟ್ರೇಶನ್ ಕೂಡ ಮಾಡಲಾಯಿತು. ಅಲ್ಲಿವರೆಗೆ ಸಮುದಾಯದ ಅಭಿವೃದ್ಧಿಗೆ ಒಕ್ಕೂಟ ಮತ್ತು ಟ್ರಸ್ಟ್ ಕೆಲಸ ಮಾಡಲಾಗುತ್ತಿದೆ ಎಂದು ಒಕ್ಕೂಟದ ಸ್ವಾಮೀಜಿಗಳು ಹೇಳಿದರೂ, ಇದು ಮೂರನೇ ಪೀಠ ಸ್ಥಾಪನೆಗೆ ಮುನ್ನುಡಿ ಎನ್ನುವುದು ಜಗಜ್ಜಾಹೀರಾಗಿತ್ತು.
ಇದನ್ನು ಓದಿ: ಲವರ್ಗಳ ದಿನದಂದು ನನಗೆ ಯಾವ ಪಕ್ಷದ ಮೇಲೆ ಲವ್ ಅಂತ ಹೇಳುತ್ತೇನೆ
ಎಲ್ಲರೂ ಅಂದುಕೊಂಡಂತೆ ಮೂರನೇ ಪೀಠ ಸ್ಥಾಪನೆ ವಿಚಾರ ಒಕ್ಕೂಟದ ಸ್ವಾಮೀಜಿಗಳಿಂದ ಹೊರಬಿದ್ದು, ಈಗ ಪೀಠಾರೋಹಣ ಕಾರ್ಯಕ್ರಮ ಕೂಡ ನಿಗದಿಯಾಗಿದೆ.
ಸಮಾಜ ಒಡೆದವರು ಯಾರು? ಒಗ್ಗೂಡಿಸುವವರು ಯಾರು?
ಮೂರನೇ ಪೀಠ ಸ್ಥಾಪನೆ ವಿಚಾರ ಬಹಿರಂಗವಾಗುತ್ತಲೇ ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಬಸವನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಇತ್ತ ಸಚಿವ ಮುರುಗೇಶ್ ನಿರಾಣಿ ಮೂರನೇ ಪೀಠ ಸ್ಥಾಪನೆ ಆದ್ರೆ ತಪ್ಪೇನು ಎಂದು ಒಕ್ಕೂಟದ ಸ್ವಾಮೀಜಿಗಳ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಸಮಾಜ ಒಡೆದವರು ಯಾರು? ಒಗ್ಗೂಡಿಸುವವರು ಯಾರು? ಎನ್ನುವ ಚರ್ಚೆ ಆರಂಭವಾಗಿದೆ.
ಸಮುದಾಯದ ಜನರಿಗೆ ಮೀಸಲಾತಿ ಕೊಡಿಸುವ ಉದ್ದೇಶದಿಂದ ಆರಂಭವಾಗಿದ್ದ ಹೋರಾಟಕ್ಕೆ ಜಯ ಸಿಗುವ ಮುನ್ನವೇ ಸಮುದಾಯದಲ್ಲಿ ಒಡಕು ಮೂಡಿದ್ದು ಒಡೆದ ಮನೆಯಂತಾಗಿದೆ. ಸದ್ಯ ಪಂಚಮಸಾಲಿ ಸಮುದಾಯದ ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾರ ಮೇಲೆ ಹೇಗೆ ಪರಿಣಾಮ ಬಿರುತ್ತವೆ ಅಂತ ಕಾದು ನೊಡಬೇಕಿದೆ.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ