ಬೆಳಗಾವಿ: ಪ್ರಬಲ ಸಮುದಾಯಕ್ಕೆ ಪ್ರ-ವರ್ಗ ಸೃಷ್ಟಿಸಿ ಸಿಎಂ ಬೊಮ್ಮಾಯಿ ರಿಲ್ಯಾಕ್ಸ್ ಆಗಿದ್ರು. ಆದರೆ ಸರ್ಕಾರದ ನಿರ್ಧಾರವನ್ನೇ ಪಂಚಮಸಾಲಿ ಸಮಾಜ ತಿರಸ್ಕರಿಸಿದೆ. ಜೊತೆಗೆ ಎರಡನೇ ಹಂತದ ಹೋರಾಟಕ್ಕೂ ಅಣಿಯಾಗ್ತಿದೆ. ಚುನಾವಣೆ ಹೊಸ್ತಿಲಲ್ಲಿ ಬಿಸುವ ಡೊಣ್ಣೆಯಿಂದ ಪಾರಾದೇ ಎಂಬ ಖುಷಿಯಲ್ಲಿದ್ದ ಸರ್ಕಾರಕ್ಕೆ ಪಂಚಮಸಾಲಿ ಸಮಾಜ ಶಾಕ್ ಕೊಟ್ಟಿದೆ. ಪ್ರವರ್ಗ 2D ಒಪ್ಪದ ಸಮಾಜ ಮತ್ತೇ 2Aಗೆ ಬೇಡಿಕೆಯಿಟ್ಟಿದೆ. ಅದಕ್ಕಾಗಿ ಜ. 13 ರಂದು ಸಿಎಂ ಮನೆ ಎದುರು ಧರಣಿ ನಡೆಸಲು ನಿರ್ಧಾರ ತೆಗೆದುಕೊಂಡಿದೆ.
ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ರಾಜ್ಯ ಕಾರ್ಯಕಾರಣಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆ ಬಳಿಕ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ತಾಯಿ ಮೇಲೆ ಆಣೆ ಮಾಡಿ ಹೇಳಿದರು. ಸಂಪುಟದ ನಿರ್ಣಯ ರಾಜ್ಯ ಕಾರ್ಯಕಾರಿಣಿ ಸಭೆ ತಿರಸ್ಕಾರ ಮಾಡಿದೆ. ಮುಂದಿನ 24 ಗಂಟೆಯಲ್ಲಿ ಮೀಸಲಾತಿ ನೀಡ್ತಿರೋ ಇಲ್ವೋ ಹೇಳಬೇಕು. ಜನವರಿ 12ರೊಳಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದ್ರೆ ಜ.13ರಂದು ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನ್ಯಾಯ ಮಾಡಿದ್ದಾರೆ. ತಾಯಿ ಮೇಲೆ ಆಣೆ ಮಾಡಿ ವಚನಭ್ರಷ್ಟರಾಗಿದ್ದಾರೆಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ನೀವು ತಾಯಿ ಮೇಲೆ ಏನು ಆಣೆ ಮಾಡಿ ಹೇಳಿದೀರಿ ಆ ತರಹ ನಡೆದುಕೊಳ್ಳಿ. ನಡೆದುಕೊಳ್ಳದೇ ಇದ್ದರೇ ಇದರ ಪರಿಣಾಮ ಪಕ್ಷದ ಮೇಲೂ ಆಗುತ್ತೆ, ನಿಮ್ಮ ಮೇಲೂ ಆಗುತ್ತೆ.
ನಾನು ಪಕ್ಷ ಉಳಿಯಬೇಕು, ಪಕ್ಷದ ಭವಿಷ್ಯ ದೃಷ್ಟಿಯಿಂದ ಮಾತನಾಡ್ತಿದೀನಿ. ನೀವು ಹೀಗೆ ಮೋಸ ಮಾಡಿದ್ರೆ ನಮ್ಮ ಪಕ್ಷಕ್ಕೆ ಹೊಡೆತ ಬೀಳುತ್ತೆ ಅಂತಿದೀನಿ. ಇಷ್ಟು ದಿವಸ ಕೋಣೆಯೊಳಗೆ ಹೇಳುತ್ತಿದ್ದೆ. ಅದಕ್ಕೆ ಬೊಮ್ಮಾಯಿಯವರು ಟೂತ್ ಪಾಲಿಶ್ ಮಾಡಿದ್ದಾರೆ. ಇನ್ನು ಮೇಲೆ ಓಪನ್ ಆಗಿ ಹೇಳ್ತೀನಿ. ಎರಡು ವರ್ಷ ಹಿಂದುಳಿದ ಆಯೋಗ ದವರು ಏನ್ ಮಾಡಿದ್ರಿ? ಮತ್ತೊಂದು ಸಮುದಾಯಕ್ಕೆ ಮೀಸಲಾತಿ ನೀಡಲು ವಿರೋಧ ಇಲ್ಲ.
ಹಾಲುಮತದವರಿಗೆ ಎಸ್ಟಿಗೆ ಸೇರಿಸಿ ಅಂದಿದ್ದೀನಿ. ಉಪ್ಪಾರ ಸಮಾಜ ಸೇರಿ ಎಲ್ಲರಿಗೂ ಕೊಡಿ ಎಂದಿದ್ದೇವೆ. ನೀವು ನಮಗೆ ಮೀಸಲಾತಿ ನೀಡೋದಾಗಿ ತಾಯಿ ಆಣೆ ಮಾಡಿದ್ದೀರಿ. ಇಷ್ಟೆಲ್ಲ ಹೇಳಿ ಎಲ್ಲ ಗೊಂದಲದಲ್ಲಿ ಇಟ್ಟೀರಿ. ನಿಮ್ಮ ಕಾನೂನು ಮಂತ್ರಿ ಬೇರೆ ಹೇಳ್ತಾರೆ, ಅವರ ಪಕ್ಕ ಕುಳಿತ ಮಂತ್ರಿ ಬೇರೆ ಹೇಳ್ತಾನೆ. ಆತ ಏನ್ ಹೋರಾಟ ಮಾಡಿದವನಲ್ಲ. ರೊಕ್ಕ ಕೊಟ್ಟ ಮಂತ್ರಿ ಆದಂವ, ಮತ್ತೇನೇನೋ ಕೊಟ್ಟ ಮಂತ್ರಿ ಆದಾಂವ. ಅವನಿಂದ ಏನ್ ನಿರೀಕ್ಷೆ ಮಾಡಕ್ಕಾಗುತ್ತೆ. ಅವನಿಗೆ ಏನು ನೈತಿಕತೆ ಐತ್ರಿ? ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ ಯತ್ನಾಳ ಮೀಸಲಾತಿ ಕೊಡದಿದ್ರೆ ಬೊಮ್ಮಾಯಿಯವರೇ ಬಿಜೆಪಿಯ ಕೊನೆಯ ಸಿಎಂ ಆಗಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ