Panchamasali - ಬ್ರಿಟಿಷರ ಕಾಲದಲ್ಲಿ ಶೂದ್ರರ ಪಟ್ಟಿಯಲ್ಲಿ ಪಂಚಮಸಾಲಿ; ಹಿಂದುಳಿದ ಆಯೋಗಕ್ಕೆ ದಾಖಲೆ ಸಲ್ಲಿಕೆ

ಇದೀಗ ಮುಂದುವರಿದವರ ಪಟ್ಟಿಯಲ್ಲಿರುವ ಪಂಚಮಸಾಲಿ ಸಮುದಾಯದವರು ಬ್ರಿಟಿಷರ ಕಾಲದಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿತ್ತು ಎಂಬ ದಾಖಲೆ ಸಿಕ್ಕಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ದಾಖಲೆಗಳನ್ನ ಕೊಡಲಾಗಿದೆ.

ಜಯಮೃತ್ಯುಂಜಯ ಶ್ರೀಗಳು

ಜಯಮೃತ್ಯುಂಜಯ ಶ್ರೀಗಳು

  • Share this:
ರಾಯಚೂರು: ಲಿಂಗಾಯತ, ವೀರಶೈವರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ್ ಪಂಚಮಸಾಲಿ ಸಮಾಜವು ಈಗ ಮುಂದುವರಿದ ಜನಾಂಗದವರ ಪಟ್ಟಿಯಲ್ಲಿದೆ. ಇದೇ ಸಮಾಜ ಈ ಹಿಂದೆ ಶೂದ್ರ ವರ್ಗಕ್ಕೆ ಸೇರಿತ್ತು, ಈ ಕುರಿತ ದಾಖಲೆಗಳನ್ನು ಪಂಚಮಸಾಲಿ ಸಮಾಜದ ಹರಿಹರದ ಜಗದ್ಗುರು ಪೀಠದ ಶ್ರೀವಚನಾನಂದ ಸ್ವಾಮಿಗಳ ನೇತೃತ್ವದಲ್ಲಿ ಕೊಪ್ಪಳ ಹಾಗು ಗದಗ ಜಿಲ್ಲೆಯ ಹಿರಿಯ ವಕೀಲರ ತಂಡವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ವಾದ ಮಂಡಿಸಿದೆ. 

ಕೃಷಿಯನ್ನೇ ನಂಬಿಕೊಂಡಿರುವ ಪಂಚಮಸಾಲಿ ಸಮಾಜವು ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಇದೆ ಎನ್ನಲಾಗಿದೆ. ಈ ಸಮಾಜದಿಂದ ಈಗ ರಾಜ್ಯದಲ್ಲಿ ಒಬ್ಬ ಸಂಸದ, ಇಬ್ಬರು ಸಚಿವರು ಹಾಗು 23 ಜನ ಶಾಸಕರಿದ್ದಾರೆ. ಆದರೂ ಸಹ ಪಂಚಮಸಾಲಿಗಳು ತೀರ ಹಿಂದುಳಿದಿದ್ದು ಆರ್ಥಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜವನ್ನು 2A ಮೀಸಲಾತಿಗೆ ಸೇರಿಸಬೇಕೆಂದು ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರುವರೆಗೂ ಪಾದಯಾತ್ರೆ ನಡೆಯಿತು. ಫೆಬ್ರುವರಿ 22 ರಂದು ಬೃಹತ್ ಸಮಾವೇಶ ನಡೆಯಿತು. ಸಮಾವೇಶದ ನಂತರವು ಫ್ರೀಡಂ ಪಾರ್ಕ್​ನಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು. ಈ ಮಧ್ಯೆ ಸಮಾಜಕ್ಕೆ 2A ಮೀಸಲಾತಿಯನ್ನು ಆರು ತಿಂಗಳೊಳಗಾಗಿ ವರದಿ ತರಿಸಿಕೊಂಡು ಕೇಂದ್ರ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದ್ದರಿಂದ ಜಯಮೃತ್ಯುಂಜಯ ಸ್ವಾಮಿಗಳು ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.

ತೀವ್ರ ಚರ್ಚೆಗೆ ಒಳಗಾಗಿರುವ ಪಂಚಮಸಾಲಿ ಸಮಾಜವು ಈ ಹಿಂದಿನ ಕಾಲದಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿತ್ತು ಎಂಬ ದಾಖಲೆಗಳು ಈಗ ಸಮಾಜದವರಿಗೆ ಸಿಕ್ಕಿವೆ. 1871 ರ ಜನಗಣತಿಯಲ್ಲಿ ಪಂಚಮಸಾಲಿ ಸಮಾಜವು ಶೂದ್ರ ಉಪಪಂಗಡಕ್ಕೆ ಸೇರಿತ್ತು. ಈ ಸಮಾಜವನ್ನು 1887 ರಲ್ಲಿ ಶೂದ್ರ ವರ್ಗದಿಂದ ಕೈ ಬಿಡಬೇಕೆಂದು ಹೋರಾಟ ಮಾಡಲಾಯಿತು. ಹೋರಾಟದ ಫಲವಾಗಿ  1891 ಜು 5 ರಂದು ಶೂದ್ರ ಉಪಪಂಗಡದ 22 ಜಾತಿಯವರನ್ನು ಶೂದ್ರ ಯಾದಿಯಿಂದ ಕೈ ಬಿಡಲಾಯಿತು. ಈ ಮಧ್ಯೆ 1891 ರಲ್ಲಿ ಮೈಸೂರು ಸರಕಾರ ಮಿಲ್ಲರ್ ಆಯೋಗವನ್ನು ರಚಿಸಿದ್ದು ಆಯೋಗವು ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದರು. ಇದಾದ ನಂತರ ಮೈಸೂರು ರಾಜ್ಯವು 1961 ರಲ್ಲಿ ನಾಗನಗೌಡ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿತ್ತು. ಆಗ ಸಮಿತಿಯ ಬಗ್ಗೆ ಸುಪ್ರೀಂಕೋರ್ಟ್​ಗೆ ಹೋಗಿದ್ದರಿಂದ ನಾಗನಗೌಡ ಸಮಿತಿ ವರದಿ ನೀಡಲಿಲ್ಲ. ಮುಂದೆ ಎಲ್ ಜಿ ಹಾವನೂರು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಹಾವನೂರು ಸಮಿತಿಯು ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗದಿಂದ ಕೈ ಬಿಡಲಾಗಿತ್ತು. ಈ ಕುರಿತು ಸುಪ್ರೀ ಕೋರ್ಟ್​ನಲ್ಲಿ ಪ್ರಶ್ನಿಸಲಾಯಿತು. ಈ ಹಿನ್ನೆಲೆಯಲ್ಲಿ ಹಾವನೂರು ವರದಿ ರದ್ದಾಯಿತು.

ಇದನ್ನೂ ಓದಿ: Tamil Nadu Elections - ತಮಿಳುನಾಡು ಚುನಾವಣೆ: ಕಾಂಗ್ರೆಸ್​​ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೇರಿ ರಾಜ್ಯದ ಐವರು

ಈ ಮಧ್ಯೆ ವೆಂಕಟಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಈ ಸಮಿತಿಯು ಹಿಂದುಳಿದ ವರ್ಗಗಳಲ್ಲಿದ್ದ 200 ಜಾತಿಗಳಲ್ಲಿ 30 ಜಾತಿಗಳನ್ನು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿಸಲಾಯಿತು. ಇದರ ನಂತರ ಚಿನ್ನಪ್ಪರಡ್ಡಿ ವರದಿ ತಯಾರಿಸಿದ್ದು ಹಿಂದುಳಿದ ವರ್ಗಗಳಲ್ಲಿ ಐದು ವಿಭಾಗ ಮಾಡಿದ್ದು ಅದರಲ್ಲಿಯೂ ಪಂಚಮಸಾಲಿ ಸಮಾಜವನ್ನು ಕೈ ಬಿಡಲಾಯಿತು. ಅಲ್ಲಿಂದ ಪಂಚಮಸಾಲಿ ಸಮಾಜದವರು ಜಾತಿ ಕಾಲಂ ನಲ್ಲಿ ಭಾರತೀಯ ಲಿಂಗಾಯತ್ ಅಥವಾ ವೀರಶೈವ ಲಿಂಗಾಯತ್ ಎಂದು ಬರೆಸುತ್ತಿದ್ದರು.

ಪಂಚಮಸಾಲಿ 2008 ರಲ್ಲಿ ಜಗದ್ಗುರು ಪೀಠಗಳು ಹರಿಹರ ಹಾಗು ಕೂಡಲಸಂಗಮದಲ್ಲಿ ಆರಂಭವಾದ ನಂತರ ಪಂಚಮಸಾಲಿ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂಬ ಹೋರಾಟ ನಡೆಯಿತು. ಈ ಪರಿಣಾಮವಾಗಿ ಈಗ ರಾಜ್ಯದ ಜಾತಿ ಪಟ್ಟಿಯಲ್ಲಿ ಲಿಂಗಾಯತ್ ಪಂಚಮಸಾಲಿ ಜಾತಿ ಇದೆ. ಈಗ ಪಂಚಮಸಾಲಿಗಳಿಗೆ ಆರ್ಥಿಕ ಹಿಂದುಳಿದವರಿಗೆ ನೀಡುವ 3B ಮೀಸಲಾತಿ ಇದೆ. ಮಹತ್ವದ. ದಾಖಲೆಗಳನ್ನು ಶ್ರೀವಚನಾನನಂದ ಸ್ವಾಮಿಗಳ ನೇತೃತ್ವದಲ್ಲಿ ಹಿರಿಯ ಸಿವಿಲ್ ಕೋರ್ಟ್ ಅಭಿಯೋಜಕರಾದ ಬಿ ಎಸ್ ಪಾಟೀಲ, ಬಸವರಾಜ ದಿಂಡೂರು, ಮಾಜಿ ಸಂಸದ ಶಿವರಾಮಗೌಡ, ಶ್ಯಾಗೋಟಿ, ಸಿ ಎಚ್ ಪಾಟೀಲ ಸೇರಿದಂತೆ ಹಲವರ ತಂಡ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ವಾದ ಮಂಡಿಸಿ ತಮ್ಮ ಸಮಾಜಕ್ಕೆ 2A ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲಿ ಆಯೋಗ ಹಾಗು ಸರಕಾರ ಏನು ಕ್ರಮ ಕೈಗೊಳ್ಳುತ್ತದೋ ಕಾದು ನೋಡಬೇಕು.

ವರದಿ: ಶರಣಪ್ಪ ಬಾಚಲಪುರ
Published by:Vijayasarthy SN
First published: