2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರಿಂದ ಮಾರ್ಚ್ 4ರವರೆಗೆ ಧರಣಿ

ಮುಖ್ಯಮಂತ್ರಿಗಳು ಮನಸು ಮಾಡಿದ್ದರೆ ಪಂಚಮಸಾಲಿ ಸಮಾಜದವರಿಗೆ ಇಷ್ಟೊತ್ತಿಗೆ ನೀಡಬಹುದಿತ್ತು. ಈಗ ಸಿಗದಿದ್ದರೆ ಮತ್ಯಾವತ್ತೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ, ಮಾರ್ಚ್ 4ರವರೆಗೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಲಿಂಗಾಯತರ ಪ್ರತಿಭಟನೆ

ಪಂಚಮಸಾಲಿ ಲಿಂಗಾಯತರ ಪ್ರತಿಭಟನೆ

  • Share this:
ಬೆಂಗಳೂರು(ಫೆ. 22): ಪಂಚಮಸಾಲಿ ಲಿಂಗಾಯತ ಸಮುದಾಯದವರಿಗೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮತ್ತೊಂದು ಹಂತ ತಲುಪಿದೆ. ಜನವರಿ 14ರಿಂದ ಕೂಡಲಸಂಗಮದಿಂದ ಆರಂಭವಾದ ಸಮುದಾಯ ಜನಗಳ ಪಾದಯಾತ್ರೆ ನಿನ್ನೆ ಭಾನುವಾರ ಫ್ರೀಡಂಪಾರ್ಕ್​ನಲ್ಲಿ ಬೃಹತ್ ಸಮಾವೇಶದಲ್ಲಿ ಅಂತ್ಯಗೊಂಡಿತು. ಇದೀಗ ಮಾರ್ಚ್ 4ರವರೆಗೆ ಸರ್ಕಾರಕ್ಕೆ ಗಡುವು ನೀಡಿದೆ. ಅಲ್ಲಿಯವರೆಗೆ ಮೌರ್ಯ ಸರ್ಕಲ್​ನಲ್ಲಿ ಧರಣಿ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಸಾಕಷ್ಟು ಜನರು ಈಗಾಗಲೇ ಮೌರ್ಯ ವೃತ್ತದತ್ತ ಬಂದು ಸೇರತೊಡಗುತ್ತಿದ್ದಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ. ಮೌರ್ಯ ಸರ್ಕಲ್​ನಲ್ಲಿ ಧರಣಿ ನಡೆಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಪ್ರತಿಭಟನಾಕಾರರನ್ನ ಫ್ರೀಡಂ ಪಾರ್ಕ್​ಗೆ ಹೋಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದಲ್ಲೇ ಇಂದಿನಿಂದ ಮಾರ್ಚ್ 4ರವರೆಗೆ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.

ಪಂಚಮಸಾಲಿಗಳ ಹೋರಾಟದ ನೇತೃತ್ವ ವಹಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಮನಸ್ಸಿದ್ದರೆ ಇಷ್ಟೊತ್ತಿಗೆಲ್ಲಾ ಪಂಚಮಸಾಲಿಗಳ ಬೇಡಿಕೆ ಈಡೇರಿಸಬಹುದಿತ್ತು. ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜವನ್ನ ಕಡೆಗಣಿಸುತ್ತಿದ್ದಾರೆ. ಭಾನುವಾರ ನಮ್ಮ ಶಕ್ತಿ ಪ್ರದರ್ಶನ ನೋಡಿಯೂ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ರಾಜಕೀಯ ಪ್ರತಿನಿಧಿಗಳಿಗೆ ಹೈಕಮಾಂಡ್​ನಿಂದ ನೋಟೀಸ್ ಕೊಡಿಸಿದ್ದಾರೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಕಾವೇರಿ ನೀರು ಬಳಕೆಗೆ ತಮಿಳುನಾಡು ಯೋಜನೆ; ಕರ್ನಾಟಕ ಆತಂಕ – ಶೀಘ್ರದಲ್ಲೇ ಸರ್ವಪಕ್ಷ ಸಭೆ

ಮುಖ್ಯಮಂತ್ರಿಗಳು ತಪ್ಪು ಮಾಡುತ್ತಿದ್ದಾರೆ. ನಾವೇನು ಸಚಿವಗಿರಿ ಕೊಡಿ, ಅನುದಾನ ಕೊಡಿ ಎಂದು ಕೇಳುತ್ತಿಲ್ಲ. ನ್ಯಾಯಬದ್ಧವಾಗಿ ನಮಗೆ ಸಿಗಬೇಕಾದ ಹಕ್ಕನ್ನು ಕೊಡಿ ಎಂದು ಕೇಳುತ್ತಿದ್ದೇವೆ. 2ಎ ಮೀಸಲಾತಿ ಸಿಗುವವರೆಗೂ ನಾನು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ. ಸರ್ಕಾರಕ್ಕೆ ಗಡುವು ಕೊಡೋಣ ಎಂದು ಚಿಂತಿಸಿ ನಿನ್ನೆ ಚರ್ಚೆ ಮಾಡಿದ್ದೆವು. ಆದರೆ, ಇದು ಕೊನೆಯ ಅವಕಾಶವಾಗಿದ್ದು, ಈಗ ಮೀಸಲಾತಿ ಸಿಗಲಿಲ್ಲವೆಂದರೆ ಮತ್ಯಾವತ್ತೂ ಸಿಗುವುದಿಲ್ಲ ಎಂದು ಜನರು ಮನವಿ ಮಾಡಿಕೊಂಡರು. ಹೀಗಾಗಿ ಇವತ್ತು ಧರಣಿ ಮುಂದುವರಿಸಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರು ಕೂಡ ಪಂಚಮಸಾಲಿಗಳ ಮೀಸಲಾತಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರನ್ನ ತರಾಟೆಗೆ ತೆಗೆದುಕೊಂಡಿದ್ದರು. ಆ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದವರು ಭಾಗವಹಿಸಿದ್ದರು.

ಇದನ್ನೂ ಓದಿ: Schools Reopen: ಇಂದಿನಿಂದ 6ರಿಂದ 8ನೇ ತರಗತಿ ಶಾಲೆ ಆರಂಭ; ಬೆಂಗಳೂರು, ಕೇರಳ ಗಡಿಯಲ್ಲಿ ವಿದ್ಯಾಗಮ ಮುಂದುವರಿಕೆ

ಇದೇ ವೇಳೆ, ಪಂಚಮಸಾಲಿ ಸಮುದಾಯದವರ 2ಎ ಮೀಸಲಾತಿ ಹೋರಾಟದ ಬಗ್ಗೆ ಸಿಎಂ ಯಡಿಯೂರಪ್ಪ ನಿರಂತರ ನಿಗಾ ಇರಿಸಿದ್ದಾರೆ. ಈ ಹೋರಾಟ ಸರ್ಕಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಿಭಾಯಿಸುವಂತೆ ಮುರುಗೇಶ್ ನಿರಾಣಿ ಸೇರಿದಂತೆ ಸಮುದಾಯದ ನಾಯಕರಿಗೆ ಸಿಎಂ ಹೊಣೆ ಕೊಟ್ಟಿದ್ದಾರೆ. ಇಂದು ಸಚಿವರ ಮುರುಗೇಶ್ ನಿರಾಣಿ ಮೊದಲಾದವರು ಸುದ್ದಿಗೋಷ್ಠಿ ಕರೆದು ಹೇಳಿಕೆ ನೀಡುವ ನಿರೀಕ್ಷೆ ಇದೆ.

ಹಾಗೆಯೇ, ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟವನ್ನು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಹಾಗೂ ತಮ್ಮ ಕುಟುಂಬದ ಮೇಲೆ ನಿರಂತರವಾಗಿ ಹರಿಹಾಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಛಾಟಿಸುವಂತೆ ಯಡಿಯೂರಪ್ಪ ಅವರು ಹೈಕಮಾಂಡ್​ಗೆ ಮನವಿಯನ್ನೂ ಮಾಡಿದ್ದಾರೆ. ಆದರೆ, ಇದೆಲ್ಲವನ್ನೂ ನಿರೀಕ್ಷಿಸಿರುವ ಯತ್ನಾಳ ತಮ್ಮ ಹೆಜ್ಜೆ ಹಿಂದಿಡುವ ಸಾಧ್ಯತೆ ತೀರಾ ಕಡಿಮೆ ಆಗಿದೆ.

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: