ಬೆಳಗಾವಿ: ಚುನಾವಣೆಯ ಹೊಸ್ತಿನಲ್ಲಿ ಎಸ್ಟಿ/ಎಸ್ಸಿ ಮೀಸಲಾತಿಯನ್ನು ಹೆಚ್ಚಳ ಮಾಡಿ ಬೆನ್ನುತ್ತಟ್ಟಿಕೊಂಡಿದ್ದ ರಾಜ್ಯ ಬಿಜೆಪಿ ಸರ್ಕಾರಕ್ಕೆ, ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟ ನುಗ್ಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪಂಚಮಸಾಲಿಗೆ 2ಎ ಮೀಸಲಾತಿಯನ್ನು ನೀಡುವಂತೆ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಬೆಳಗಾವಿಯ ಸುವರ್ಣ ಸೌಧದ ಬಳಿ ನಾಯಕರು ಸರ್ಕಾರದ ಘೋಷಣೆಗಾಗಿ ಕಾದು ಕುಳಿತ್ತಿದ್ದಾರೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡುವ ಕುರಿತಂತೆ ಇರುವ ಕಾನೂನು ತೊಡಕುಗಳ ಬಗ್ಗೆ ಚರ್ಚೆ ನಡೆಸಲು ಇಂದು ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿದ್ದು, ಆ ವೇಳೆ ಮುಂದಿನ ಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಕುರಿತಂತೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆಯಂತೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ
ಮೀಸಲಾತಿ ಘೋಷಣೆ ಕುರಿತಂತೆ ಒತ್ತಡ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಹಾಗೂ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಸೇರಿಂದತೆ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದರು.
ಪಂಚಮಶಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಬಳಿ ವರದಿಯನ್ನು ಕೇಳಿದ್ದು, ಈ ಕುರಿತ ಮಧ್ಯಮ ವರದಿ ಸಿಎಂ ಅವರ ಕೈ ಸೇರಿದೆ ಎನ್ನಲಾಗಿದೆ.
ಇದರಂತೆ ಸಿಎಂ ಅವರು ಮೀಸಲಾಯಿ ಬಗ್ಗೆ ತುರ್ತು ಘೋಷಣೆ ಮಾಡುತ್ತಾರೆ ಎಂಬ ಮಾತು ಕೂಡ ಸಭೆಗೂ ಮುನ್ನ ಕೇಳಿ ಬಂದಿತ್ತು. ಆದರೆ ಕಾನೂನು ತೊಡಕುಗಳ ಕಾರಣ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಿಎಂ ಅವರು, ಮುಖಂಡರ ಬಳಿ 10 ದಿನಗಳ ಕಾಲಾವಕಾಶ ಕೇಳಿದ್ದಾರಂತೆ. ಸಿಎಂ ಅವರ ಅಭಿಪ್ರಾಯವನ್ನು ಹೋರಾಟಗಾರರು ಒಪ್ಪಿಕೊಂಡಿಲ್ಲ ಎನ್ನಲಾಗಿದ್ದು, ತಮ್ಮ ಅಭಿಪ್ರಾಯವನ್ನು ತಿಳಿಸಲು ಸಮಯ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಿಎಂ, ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಏನಿದೆ?
ಪಂಚಮಸಾಲಿ 2ಎ ಮೀಸಲಾತಿ ನೀಡುವ ಶಾಶ್ವತ ಹಿಂದುಳಿದ ವರ್ಗದ ಮಧ್ಯಂತರ ವರದಿಯಲ್ಲಿ, ಪಂಚಮಸಾಲಿಗೆ ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯ ಅರ್ಹರು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು. ಆದರೆ 2ಎ ಗೆ ಸೇರಿಸಿದರೆ ಇತರೆ ಸಮುದಾಯ ಆಕ್ಷೇಪ ಎತ್ತಬಹುದು. ಆದ್ದರಿಂದ 2ಎ ಸೇರ್ಪಡೆ ಬದಲು ಪ್ರತ್ಯೇಕ ಪ್ರವರ್ಗ ಸೃಷ್ಟಿಗೆ ಶಿಫಾರಸು ಮಾಡಲಾಗಿದೆ.
ಈ ಬಗ್ಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಬಹುದು. ಪ್ರತ್ಯೇಕ ಪ್ರವರ್ಗ ಸೃಷ್ಟಿಸಿದರೆ ಕಾನೂನು ತೊಡಕು ಎದುರಾಗುವುದಿಲ್ಲ. EWSಗೆ ಸೇರ್ಪಡೆ ಬಗ್ಗೆಯೂ ಸಾಧಕ-ಬಾಧಕ ಚರ್ಚೆ ಅಗತ್ಯವಿದೆ. ಪಂಚಮಸಾಲಿಗಳಿಗೆ 2ಎ ಬದಲಾಗಿ 2ಡಿ ಅಥವಾ ಯಾವುದೇ ಪ್ರವರ್ಗಕ್ಕೆ ಸೇರ್ಪಡೆ ಮಾಡೋದು ಒಳ್ಳೆಯದು ಅಂತ ಮಧ್ಯಂತರ ಶಿಫಾರಸಿನಲ್ಲಿ ಉಲ್ಲೇಖ ಮಾಡಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಇಂದು ಮುಖ್ಯಮಂತ್ರಿ @BSBommai ಅವರನ್ನು ಭೇಟಿ ಮಾಡಿ ಮಧ್ಯಂತರ ವರದಿ ಸಲ್ಲಿಸಿದರು. pic.twitter.com/WmgcseeCfn
— CM of Karnataka (@CMofKarnataka) December 22, 2022
2ಎ ಮೀಸಲಾತಿಗಾಗಿ ಪಂಚಮಸಾಲಿ ನಾಯಕರು ನಡೆಸುತ್ತಿರುವ ಹೋರಾಟದ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಮೀಸಲಾತಿಗೆ ಘೋಷಣೆಗೆ ನೀಡಿದ್ದ ಗಡುವು ಇಂದೇ ಅಂತ್ಯವಾಗ್ತಿದ್ದು, ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಎಂಬ ಘೋಷ ವಾಕ್ಯದಡಿ ಯಾತ್ರೆ ನಡೆದಿದೆ. ಕಮಕಾರಹಟ್ಟಿ ಗ್ರಾಮದ ರಾಘವೇಂದ್ರ ಲೇಔಟ್ನಲ್ಲಿ ಸಮಾವೇಶ ನಡೆಯುತ್ತಿದ್ದು, ಶಾಸಕರಾದ ಯತ್ನಾಳ್, ಅರವಿಂದ ಬೆಲ್ಲದ, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ದೊಡ್ಡಗೌಡರ, ಮಹೇಶ್ ಕುಮಟಳ್ಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಪಂಚಮಸಾಲಿ ಸಮುದಾಯದವನ್ನು 2ಎ ಗೆ ಸೇರಿಸಲು ವಿರೋಧ
ಇತ್ತ, ಪಂಚಮಸಾಲಿ ಹೋರಾಟ ತೀವ್ರಗೊಂಡಿದ್ದರೆ, ಹಿಂದುಳಿದ ಜಾತಿಗಳ ಒಕ್ಕೂಟದ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಂದುವರಿದ ಜಾತಿಗಳನ್ನು 2ಎ ಗೆ ಸೇರಿಸಬಾದರು. ಮುಂದುವರಿದ ಜಾತಿಗಳನ್ನು 2ಎ ಸೇರಿಸಿದರೆ ಹಿಂದುಳಿದ ಜಾತಿಗಳ ಕಥೆ ಏನಾಗಬೇಕು. ಸಿಎಂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಪಂಚಮಸಾಲಿಯನ್ನು 2ಎ ಸೇರಿಸಿದರೆ ರಾಜ್ಯದಲ್ಲಿ ರಕ್ತ ಕ್ರಾಂತಿ ಆಗುತ್ತೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಹೋರಾಟ ಮಾಡಲಾಗುತ್ತಿದೆ ಎಂದು ನಗರದಲ್ಲಿ ಹೋರಾಟಗಾರ ಮಾಹಾಂತೇಶ ಎಸ್ ಕೌಲಗಿ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ