ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ತೆರೆ: ಸರ್ಕಾರಕ್ಕೆ ಆರು ತಿಂಗಳ ಗುಡುವು

ಸಿಎಂ ಮಾತನಾಡಿ ಮೀಸಲಾತಿ ಕೊಡಿಸುವುದಾಗಿ ಹೇಳಿದ್ದಾರೆ. ಸಿಎಂ ಮೌಖಿಕವಾಗಿ ಹೇಳಿದ್ದಾರೆ, ಅವರು ಮಾತು ತಪ್ಪುವವರಲ್ಲ ಎಂದು ನಂಬಿದ್ದೇವೆ. ಒಂದು ವೇಳೆ ಮಾತು ತಪ್ಪಿದರೆ ಆರು ತಿಂಗಳ ಬಳಿಕ ಹೋರಾಟ ತೀವ್ರಗೊಳಿಸಲಿದ್ದೇವೆ. 20 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲಿದ್ದೇವೆ ಎಂದು ಜಯಬಸವ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ.

 • Share this:
  ಬೆಂಗಳೂರು: ಕಳೆದ 23 ದಿನಗಳಿಂದ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ತಾತ್ಕಾಲಿಕ  ಬ್ರೇಕ್ ಸಿಕ್ಕಿದೆ. 2A ಮೀಸಲಾತಿಗೆ ಸೇರಿಸಿ ಎಂಬ ಕೂಗಿನೊಂದಿಗೆ ಆರಂಭವಾದ ಹೋರಾಟ ಹಲವು ಮಹತ್ವದ ಘಟ್ಟಗಳನ್ನು ದಾಟಿಕೊಂಡು ಬಂದಿದೆ. ಇದೀಗ ಇಂದಿನ ಅಧಿವೇಶನದಲ್ಲಿ ಈ ಬಗ್ಗೆ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ.

  712 ಕಿಲೋಮೀಟರ್, 23 ದಿನಗಳ ನಿರಂತರ ಹೋರಾಟ, ಮೀಸಲಾತಿ ಎಂಬ ಕೂಗು. ಹೌದು, ಲಿಂಗಾಯತ ಪಂಚಮಸಾಲಿ ಸಮುದಾಯ ಕಳೆದ ಹಲವು ದಿನಗಳಿಂದ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಿಕೊಂಡು ಬಂದಿತ್ತು. ಆದರೀಗ ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆಯಿಂದಾಗಿ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಸಿಎಂ ಯಡಿಯೂರಪ್ಪ ಅಧಿವೇಶನದಲ್ಲೇ ಮೀಸಲಾತಿ ಬೇಡಿಕೆ ಈಡೇರಿಸಲು ಬದ್ಧ, ಸಮಯಾವಕಾಶ ಕೊಡಿ ಅಂತ ಕೇಳಿಕೊಂಡ ಹಿನ್ನೆಲೆ ಪಂಚಮಸಾಲಿ ಹೋರಾಟಗಾರರು ಆರು ತಿಂಗಳ ಗುಡುವು ಕೊಟ್ಟು ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.

  ಪಾದಯಾತ್ರೆ ಮಾಡಿಕೊಂಡು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಆರಂಭಿಸಿದ್ದ ಪಂಚಮಸಾಲಿ ಸ್ವಾಮೀಜಿ ಜಯ ಮೃತ್ಯುಂಜಯ ಶ್ರೀಗಳು ಬೇಡಿಕೆ ಈಡೇರಿಸುವಂತೆ ನಿರಂತರವಾಗಿ ಹೋರಾಟ ಮಾಡಿದ್ದರು. ಆದರೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡದ ಹಿನ್ನೆಲೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ ಇಂದು ಅಧಿವೇಶನದಲ್ಲಿ ವಿಷಯ ಪ್ರಸ್ತಾಪವಾಗಿ ಸಮುದಾಯದ ರಾಜಕೀಯ ನಾಯಕ ಯತ್ನಾಳ್ ಮೀಸಲಾತಿ ಕೊಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟರು. ಈ ವೇಳೆ ಸಮಯಾವಕಾಶ ಕೇಳಿದ ಹಿನ್ನೆಲೆ ಜಯ ಮೃತ್ಯುಂಜಯ ಸ್ವಾಮೀಜಿ ಜೊತೆ ಚರ್ಚಿಸಿ ಆರು ತಿಂಗಳ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ.

  ಇದನ್ನು ಓದಿ: ಮತ್ತೊಮ್ಮೆ ಲಾಕ್‌ಡೌನ್ ಆಗಬಾರದು ಎಂದರೆ ಜನರೇ ಹೆಚ್ಚಿನ ಸುರಕ್ಷತೆ ವಹಿಸಬೇಕು: ಸಿಎಂ ಬಿಎಸ್​ವೈ ಎಚ್ಚರಿಕೆ

  ಈ ವೇಳೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಸರ್ಕಾರದ ನಿರ್ಧಾರದಿಂದ ನಮಗೆ ಸಂತಸವಾಗಿದೆ. ನಮ್ಮ ರಾಜಕೀಯ ನಾಯಕರ ಹೋರಾಟದಿಂದ ಈ ಕೆಲಸ ಆಗಿದೆ. ಸರ್ಕಾರ ನಮ್ಮ ಆರು ತಿಂಗಳ ಗುಡುವು ತೆಗೆದುಕೊಂಡಿದೆ.  22 ದಿನಗಳ ನಿರಂತರ ಯಾತ್ರೆ, 712 km ಪಾದಯಾತ್ರೆ ಮಾಡಿದ್ದೇವೆ. ಸೌಧದಲ್ಲಿ ಈ ಬಗ್ಗೆ ಸಿಎಂ ಮಾತನಾಡಿ ಮೀಸಲಾತಿ ಕೊಡಿಸುವುದಾಗಿ ಹೇಳಿದ್ದಾರೆ. ಸಿಎಂ ಮೌಖಿಕವಾಗಿ ಹೇಳಿದ್ದಾರೆ, ಅವರು ಮಾತು ತಪ್ಪುವವರಲ್ಲ ಎಂದು ನಂಬಿದ್ದೇವೆ. ಒಂದು ವೇಳೆ ಮಾತು ತಪ್ಪಿದರೆ ಆರು ತಿಂಗಳ ಬಳಿಕ ಹೋರಾಟ ತೀವ್ರಗೊಳಿಸಲಿದ್ದೇವೆ. 20 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲಿದ್ದೇವೆ. ಅಥವಾ ಸಿಎಂ ಮಾತು ಕೊಟ್ಟಂತೆ ಆರು ತಿಂಗಳೊಳಗಡೆ ಬೇಡಿಕೆ ಈಡೇರಿಸಿದರೆ ಕೂಡಲಸಂಗಮದಲ್ಲಿ ವಿಜಯೋತ್ಸವ ಆಚರಿಸಲಿದ್ದೇವೆ ಅಂತ ಹೇಳಿದರು.

  ಒಟ್ಟಾರೆಯಾಗಿ ಫ್ರೀಡಂ ಪಾರ್ಕ್ ನಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಪಂಚಮಸಾಲಿ ಮೀಸಲಾತಿ ಹೋರಾಟ ಸದ್ಯಕ್ಕೆ ನಿಂತಿದೆ. ಆದರೆ ಮತ್ತೆ ಸರ್ಕಾರ ಕೊಟ್ಟ ಮಾತೇನಾದರು ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಈ ವೇಳೆ ಕೊಡಲಾಗಿದೆ.

  ವರದಿ: ಆಶಿಕ್ ಮುಲ್ಕಿ 
  Published by:HR Ramesh
  First published: