ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ (Pakistan) ಮೂಲದ 19 ವರ್ಷದ ಯುವತಿಯನ್ನು (Women) ಬೆಳ್ಳಂದೂರು ಪೊಲೀಸರು (Bellandur Police) ಬಂಧನ ಮಾಡಿದ್ದಾರೆ. ಜೊತೆಗೆ ಈಕೆ ಭಾರತಕ್ಕೆ ಬರಲು ಕಾರಣವಾಗಿದ್ದ ಉತ್ತರ ಪ್ರದೇಶದ (Uttar Pradesh) ಮೂಲದ ಸೆಕ್ಯೂರಿಟಿ ಗಾರ್ಡ್ನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ (Central Intelligence Agency) ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಜುನ್ನಸಂದ್ರದ ಲೇಬರ್ಸ್ ಕ್ವಾರ್ಟರ್ಸ್ ನಲ್ಲಿ ವಾಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ (Security Guard) ಹಾಗೂ ಯುವತಿಯನ್ನು ಪತ್ತೆ ಮಾಡಿದ್ದರು. ಸ್ಥಳೀಯರ ನೆರವು ಪಡೆದು ಯುವತಿಯನ್ನು ಪತ್ತೆ ಮಾಡಿದ್ದ ಪೊಲೀಸರು ಸದ್ಯ ಆಕೆಯನ್ನು ಮಹಿಳಾ ಸಂತ್ವಾನ ಕೇಂದ್ರದಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಯುವತಿಯನ್ನು ಪಾಕಿಸ್ತಾನ ಹೈದರಾಬಾದ್ ಮೂಲಕ ಇಕ್ರಾ ಜೀವನಿ (19) ಎಂದು ಗುರುತಿಸಲಾಗಿದೆ. ಇನ್ನು, ಉತ್ತರ ಪ್ರದೇಶದ ಮುಲಾಯಂ ಸಿಂಗ್ಗೆ (25) ಈಕೆ ಲುಡೋ ಗೇಮ್ ಆಡುವ ವೇಳೆ ಪರಿಚಯವಾಗಿ ಇಬ್ಬರ ನಡುವೆ ಲವ್ ಆಗಿತ್ತಂತೆ.
ಹೇಗಾದ್ರು ಮಾಡಿ ತಾನು ಪ್ರೇಮಿಸಿದ ಯುವತಿಯನ್ನು ಮದುವೆಯಾಗ ಬೇಕು ಎಂದುಕೊಂಡಿದ್ದ ಮುಲಾಯಂ ಸಿಂಗ್, ಆಕೆಗೆ ಮದುವೆಯಾಗುವುದಾಗಿ ಹೇಳಿ ನೇಪಾಳದ ಕಠ್ಮಂಡುಗೆ ಬರುವಂತೆ ಮಾಡಿದ್ದನಂತೆ. ಕಳೆದ ಸೆಪ್ಟೆಂಬರ್ನಲ್ಲಿ ಕಠ್ಮಂಡುಗೆ ತೆರಳಿದ್ದ ಆರೋಪಿ, ಅಲ್ಲಿ ಇಕ್ರಾ ಜೀವನಿಗೆ ರಾವಾ ಯಾದವ್ ಎಂದು ಹೆಸರು ಬದಲಿಸಿ ನಕಲಿ ದಾಖಲೆ ಸೃಷ್ಟಿ ಮಾಡಿ ಭಾರತಕ್ಕೆ ಕರೆ ತಂದಿದ್ದನಂತೆ.
ಭಾರತಕ್ಕೆ ಬಂದ ಬಳಿಕ ಬೆಂಗಳೂರಿಗೆ ಯುವತಿಯನ್ನು ಕರೆತಂದಿದ್ದ ಮುಲಾಯಂ ಆಕೆಯನ್ನು, ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಮದುವೆಯಾಗಿದ್ದನಂತೆ. ಬಳಿಕ ಹೆಚ್ ಎಸ್ ಆರ್ ಲೇಔಟ್ನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿ, ಜುನ್ನಸಂದ್ರದ ಲೇಬರ್ಸ್ ಕ್ವಾರ್ಟರ್ಸ್ ನಲ್ಲಿ ಸಂಸಾರ ಆರಂಭಿಸಿದ್ದನಂತೆ.
ಕೇಂದ್ರ ಗುಪ್ತಚರ ಇಲಾಖೆಗೆ ಸಿಕ್ಕಿ ಬಿದ್ದಿದ್ದು ಹೇಗೆ?
ಭಾರತಕ್ಕೆ ಬಂದ ಬಳಿಕ ಸಂಸಾರಿಕ ಜೀವನ ಆರಂಭ ಮಾಡಿದ್ದ ಯುವತಿ, ಪಾಕಿಸ್ತಾನದಲ್ಲಿರುವ ತನ್ನ ತಾಯಿಯನ್ನು ಸಂಪರ್ಕ ಮಾಡಲು ಯತ್ನಿಸಿದ್ದಳು. ಈ ವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯನ್ನು ಪತ್ತೆ ಮಾಡಿದ್ದಾರೆ.
ಸದ್ಯ ಯುವತಿಯನ್ನು ಎಫ್ ಆರ್ ಆರ್ ಒ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ಮಹಿಳಾ ಸಂತ್ವಾನ ಕೇಂದ್ರದಲ್ಲಿ ಇರಿಸಿದ್ದಾರೆ. ಇನ್ನು, ಮುಲಾಯಂ ಸಿಂಗ್ನನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ. ಈ ವೇಳೆ ಹೆಸರು ಬದಲಾಯಿಸಿಕೊಂಡು ಪಾಸ್ ಪೋರ್ಟ್ಗೆ ಅರ್ಜಿ ಹಾಕಿರುವುದು ಬೆಳಕಿಗೆ ಬಂದಿದೆ.
ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕರ ಮೇಲೆ ಕೇಸ್ ದಾಖಲು
ಉಳಿದಂತೆ ಸೆಕ್ಯೂರಿಟಿ ಗಾರ್ಡ್ ಹಾಗೂ ಪಾಕಿಸ್ತಾನ ಮೂಲದ ಯುವತಿ ವಾಸಿಸಲು ಬಾಡಿಗೆ ಮನೆ ಕೊಟ್ಟಿದ್ದ ಮಾಲೀಕರ ಮೇಲೂ ಪೊಲೀಸರು ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆ ಮಾಲೀಕ ಗೋವಿಂದರೆಡ್ಡಿ ಮೇಲೂ ಬೆಳ್ಳಂದೂರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಕ್ ಮೂಲದ ಮಹಿಳೆ ಹಾಗೂ ಮುಲಾಯಂ ಸಿಂಗ್ ಪೂರ್ವಪರ ಮಾಹಿತಿ ಪಡೆದುಕೊಳ್ಳದೆ ಮನೆ ಬಾಡಿಗೆ ನೀಡಿದ ಆರೋಪ ಮೇರೆಗೆ ದೂರು ದಾಖಲಿಸಲಾಗಿದೆ.
ಇನ್ನು, ನೇಪಾಳದ ಕಂಠ್ಮಡುವಿಗೆ ಯುವತಿ ಬರುತ್ತಿದ್ದಂತೆ ಆಕೆಯನ್ನು ಮದುವೆಯಾಗಿರುವಂತೆ ದಾಖಲೆ ಸೃಷ್ಟಿಸಿದ್ದ ಮುಲಾಯಂ ಸಿಂಗ್, ನೇಪಾಳದಿಂದ ಬಿಹಾರದ ಬಿರ್ ಗಂಜ್ ಎಂಬಲ್ಲಿ ಅನಧಿಕೃತವಾಗಿ ಭಾರತಕ್ಕೆ ಪ್ರವೇಶ ಮಾಡಿಸಿದ್ದನಂತೆ. ಅಲ್ಲಿಂದ ಇಬ್ಬರು ಪಾಟ್ನಾಗೆ ಬಂದು ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದರಂತೆ.
ಸೆಪ್ಟೆಂಬರ್ 28ರಂದು ಬೆಂಗಳೂರಿಗೆ ಬಂದಿದ್ದ ಇಬ್ಬರು, ಭಾರತದ ನಾಗರೀಕ ಸೌಲಭ್ಯ ಪಡೆದುಕೊಳ್ಳಲು ನಕಲಿ ಹೆಸರಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದನಂತೆ. ಸದ್ಯ ಆಧಾರ್ ಕಾರ್ಡ್ ಹೇಗೆ ಸಿದ್ಧಪಡಿಸಲಾಗಿದೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಫಾರಿನರ್ ಆಕ್ಟ್, ಐಪಿಸಿ 420, 465, 468, 471 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ