• Home
  • »
  • News
  • »
  • state
  • »
  • ಕುರುಬ ಸಮುದಾಯವನ್ನು ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ; ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

ಕುರುಬ ಸಮುದಾಯವನ್ನು ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ; ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

ಕಾಗಿನೆಲೆ ಶ್ರೀ

ಕಾಗಿನೆಲೆ ಶ್ರೀ

ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಅನಾಥವಾಗಲು ಬಿಡುವುದಿಲ್ಲ, ಏನೇ ಆಗಲಿ ಗುರಿ ಮುಟ್ಟುವತನಕ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

  • Share this:

ಚಿತ್ರದುರ್ಗ(ನ.06):  ಕುರುಬ ಸಮುದಾಯವನ್ನ ಎಸ್ ಟಿ ಮೀಸಲಾತಿ ಪಟ್ಟಿಗೆ ಸೇರಿಸುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಸಮುದಾಯ ಅನಾಥವಾಗಲು ಬಿಡುವುದಿಲ್ಲ. ಗುರಿ ಮುಟ್ಟುವ ತನಕ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಚಿತ್ರದುರ್ಗದಲ್ಲಿ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಕುರುಬ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಕೆಗೆ ರಾಜ್ಯ ಮಟ್ಟದ ಹೋರಾಟ ಹಾಗೂ ಪಾದಯಾತ್ರೆ ಕುರಿತು ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ, ಹಾಗೂ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಚಿತ್ರದುರ್ಗ ನಗರದ ಕುರುಬರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆ ಹಾಗೂ ಪಾದಯಾತ್ರೆ ಹೋರಾಟದ ರೂಪರೇಷೆ ಕುರಿತು ಮಾತನಾಡಿರುವ ನಿರಂಜನಾನಂದಪುರಿ ಸ್ವಾಮೀಜಿ, ಮೀಸಲಾತಿ ಪಡೆಯುವಲ್ಲಿ  ಹೋರಾಟಗಾರರು, ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ಕುರುಬ ಸಮುದಾಯ ಎಸ್‌ಟಿ ಮೀಸಲಾತಿಯಿಂದ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಇಷ್ಟೊತ್ತಿಗೆ ನಾವು ಎಸ್‌ಟಿ ಮೀಸಲಾತಿಗೆ ಸೇರಿರಬೇಕಿತ್ತು. ಆದರೆ ಸರ್ಕಾರದಲ್ಲಿ  ಜೇನು ಕುರುಬ, ಕಾಡು ಕುರುಬ ಸೇರಿದಂತೆ ಮತ್ತಿತರ ಐದು ಪದಗಳನ್ನು ಎಸ್‌ಟಿ ಮೀಸಲಾತಿ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕುರುಬ ಎಂಬ ಪದ ಮಾತ್ರ ಮೀಸಲಾತಿ ಪಟ್ಟಿಯಿಂದ ಕೈ ಬಿಟ್ಟುಹೋಗಿದೆ. ಈ ಪದವು ಎಸ್‌ಟಿ ಮೀಸಲಾತಿ ಪಟ್ಟಿಗೆ ಸೇರುವ ತನಕ ನಾವು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ.ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಅನಾಥವಾಗಲು ಬಿಡುವುದಿಲ್ಲ, ಏನೇ ಆಗಲಿ ಗುರಿ ಮುಟ್ಟುವತನಕ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.


ಇನ್ನು, ಅಧಿಕಾರದಲ್ಲಿ ಇರುವ ಕುರುಬ ಸಮುದಾಯದ ಹಲವು ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಎಸ್.ಟಿ. ಮೀಸಲಾತಿ ಹೋರಾಟವನ್ನು ಕಡೆಗಣಿಸುತ್ತಿರುವುದು ದೊಡ್ಡ ದುರಂತ. ನಾವು ಈ ಹೋರಾಟದಲ್ಲಿ ಭಾಗಿಯಾದರೆ ಪಕ್ಷದಲ್ಲಿ ಟಿಕೆಟ್ ಸಿಗುತ್ತೊ ಇಲ್ಲವೊ ಎಂಬ ಗೊಂದಲದಲ್ಲಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದೇ ವೇಳೆ ಚಿರೋಟಿ ತಿಂದವರು ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕುರುಬ ಸಮುದಾಯದ ಮೀಸಲಾತಿ ಹೋರಾಟದಿಂದ ದೂರ ಉಳಿದಿರುವ ರಾಜಕೀಯ ಮುಖಂಡರಿಗೆ ಅವರ  ಕರ್ತವ್ಯ ಹಾಗೂ ಸಮುದಾಯದ ಕಾಳಜಿ ಗೆ ಕಿವಿಗೊಡುವಂತೆ  ಮನವಿ ಮಾಡಿದರು.


ಗ್ರಾ.ಪಂ ಚುನಾವಣೆ: ದತ್ತ ಜಯಂತಿ ಹಿನ್ನಲೆ ಚಿಕ್ಕಮಗಳೂರಿನಲ್ಲಿ ಎರಡಲ್ಲ, ಒಂದೇ ಹಂತದಲ್ಲಿ ಚುನಾವಣೆ


ಇನ್ನೂ ನಮಗೆ ವ್ಯಕ್ತಿಗಿಂತ ಸಮಾಜ ಮುಖ್ಯ, ಮೀಸಲಾತಿ ಹೋರಾಟಗಳ ವಿಷಯಗಳಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬೇಡಿ. ನಮ್ಮ ನಡೆ ಸ್ಪಷ್ಟವಾಗಿದೆ. ಅಲ್ಲದೇ ಮೀಸಲಾತಿ ವಂಚಿತ  ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕೊಡಬೇಕು ಎಂಬುದು ಎಲ್ಲರ ನಾಡಿ ಮಿಡಿತ. ಆದರೆ, ನಮ್ಮ ಸಾಂವಿಧಾನಿಕ ಹಕ್ಕು ಕೇಳುವಲ್ಲಿ ನಾವೇ ಹಿಂದೆ ಬಿದ್ದಿದ್ದೇವೆ, ಹಾಗಾಗಿ ಈಗ ಈ ಹೋರಾಟ ಆಂದೋಲನ ಆಗಬೇಕು, ಆಗ ನಮಗೆ ನೂರಕ್ಕೆ ಇನ್ನೂರರಷ್ಟು ಎಸ್‌ಟಿ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ.


ಈ ಎಸ್‌ಟಿ ಮೀಸಲಾತಿಗಾಗಿ ನಾವು,  ಹೋರಾಟ ಎಂಬ ಸಮುದ್ರ ಮಂಥನದಲ್ಲಿ ಎಲ್ಲಾ ವಿಘ್ನಗಳನ್ನು ಎದುರಿಸಿ ಅಮೃತ ಸಿಗುವವರೆಗೂ ಸಾಗಬೇಕು. ನಮ್ಮ ಸಮುದಾಯ ಹೋರಾಟದಿಂದ ಮೀಸಲಾತಿ ಪಡೆದು ಇತಿಹಾಸ ಸೃಷ್ಟಿಸುವ ಕೆಲಸ ಆಗಬೇಕು ಎಂದಿದ್ದಾರೆ. ಅಷ್ಟೆ ಅಲ್ಲದೇ  ಈ ಹೋರಾಟ ಇತಿಹಾಸದ ಪುಟಗಳಲ್ಲಿ ಸೇರಬೇಕು ಎಂದು ಸಭೆಯ ಮೂಲಕ ಕುರುಬ ಸಮುದಾಯಕ್ಕೆ ಕರೆ ನೀಡಿದ್ದಾರೆ.


ಇನ್ನು, ಇದೇ ವಿಷಯ ಕುರಿತು ಮಾತನಾಡಿದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜ.15 ರಂದು ಕಾಗಿನೆಲೆ ಕನಕ ಗುರುಪೀಠದಿಂದ ಆರಂಭವಾಗುವ ಮೀಸಲಾತಿಗಾಗಿ ಪಾದಯಾತ್ರೆ ಬೆಂಗಳೂರಿನವರೆಗೆ ಸಾಗಿ  ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೋರಾಟ ಮುಂದುವರೆದು ಮೀಸಲಾತಿ ಪಡೆಯಲು ಫೆಬ್ರವರಿ 7ರಂದು ಬೆಂಗಳೂರಿನಲ್ಲಿ  ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.


ಆ ಸಮಾವೇಶದಲ್ಲಿ ಅಖಂಡ ಕುರುಬರ ಸಾಂಘಿಕ ಪ್ರಯತ್ನ ಮಾಡಿ ಶಕ್ತಿ ಪ್ರದರ್ಶನ ಮಾಡಬೇಕಿದೆ. ಆ ಸಮಾವೇಶದಲ್ಲಿ ಸುಮಾರು 10  ಲಕ್ಷಕ್ಕೂ ಹೆಚ್ಚು ಮಂದಿ ಸೇರಬೇಕು ಎಂದು ಹೇಳಿ ಕರೆ ಕೊಟ್ಟಿದ್ದಾರೆ‌. ಅಲ್ಲದೇ ಈ ಪಾದಯಾತ್ರೆ ಹಾಗೂ ಸಮಾವೇಶ ಮುಗಿದ ನಂತರವೂ ನಮ್ಮ ಹೋರಾಟ ನಿಲ್ಲಲ್ಲ, ಪ್ರತಿ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಸಭೆಗಳನ್ನು ನಡೆಸಿ ಹೋರಾಟ ಮುಂದುವರೆಸಲಾಗುತ್ತದೆ. ಎಸ್ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ, ದಿಲ್ಲಿಗೂ ಹೋಗಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

Published by:Latha CG
First published: