Govt. School: ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು! ಇದು ಮಾದರಿ ಸರ್ಕಾರಿ ಪ್ರೌಢಶಾಲೆಯ ಹಿರಿಮೆ

ಈ ಶಾಲೆಯಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಎಲ್ಲರೂ ಮೆಚ್ಚುವಂತದ್ದು. ಅದನ್ನು ಶಾಲೆಯ ದಾಖಲೆಗಳು ಸಾಕ್ಷೀಕರಿಸುತ್ತವೆ. ಈ ನಡುವೆ ಕರೊನಾದಿಂದಾಗಿ ಹಳ್ಳಿ ಸೇರಿರುವವರು ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಪ್ರತಿಷ್ಠಿತ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ.

ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ

ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ

  • Share this:
ಮಂಡ್ಯ: ಲಕ್ಷಾಂತರ ಹಣ ನೀಡಿ ಹೈಫೈ ಶಾಲೆಯಲ್ಲಿ (School) ತಮ್ಮ ಮಕ್ಕಳನ್ನ ಓದಿಸಬೇಕು ಎಂಬ ಆಲೋಚನೆ ಬದಲಾಗ್ತಿದೆ. ಅದಕ್ಕೆ ಉದಾಹರಣೆ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲ್ಲೂಕಿನ ಮಾರಗೌಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ (Govt. High School). ಈ ಶಾಲೆಯಲ್ಲಿ ಬಹಳ ವರ್ಷದ ಹಿಂದಿನಿಂದಲೂ ದಾಖಲಾತಿಗೆ (Admission) ಡಿಮಾಂಡ್ (Demand) ಇದೆ. ಕಾರಣ ಈ ಶಾಲೆಯಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಎಲ್ಲರೂ ಮೆಚ್ಚುವಂತದ್ದು. ಶೈಕ್ಷಣಿಕ ಚಟುವಟಿಕೆಯಲ್ಲಿ ವಿಶೇಷತೆಗಳಿಂದಲೇ ರಾಜ್ಯದ ಗಮನಸೆಳೆದಿರುವ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸಲು ಪಾಲಕರು (Parents) ಮುಗಿಬಿದ್ದಿದ್ದಾರೆ. ಪರಿಣಾಮ ಈ ವರ್ಷದ ತರಗತಿ ಪ್ರಾರಂಭವಾಗುವ ಮುನ್ನವೇ ಬಹುತೇಕ ಸೀಟ್ ಭರ್ತಿಯಾಗಿವೆ.

ಖಾಸಗಿ ಹೈ ಫೈ ಶಾಲೆಗೆ ಗೇಟ್ ಪಾಸ್, ಸರ್ಕಾರಿ ಶಾಲೆಗೆ  ಡಿಮ್ಯಾಂಡ್

ಈ ಶಾಲೆಯಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಎಲ್ಲರೂ ಮೆಚ್ಚುವಂತದ್ದು. ಅದನ್ನು ಶಾಲೆಯ ದಾಖಲೆಗಳು ಸಾಕ್ಷೀಕರಿಸುತ್ತವೆ. ಈ ನಡುವೆ ಕರೊನಾದಿಂದಾಗಿ ಹಳ್ಳಿ ಸೇರಿರುವವರು ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಪ್ರತಿಷ್ಠಿತ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ.

ದಾಖಲಾತಿಗಾಗಿ ಶಿಫಾರಸು ಮಾಡಿಸುತ್ತಿರುವ ಪೋಷಕರು

ಕೆಲವರಂತೂ ಈ ಶಾಲೆ ದಾಖಲಾತಿಗಾಗಿ ಶಿಫಾರಸನ್ನು ಮಾಡಿಸುತ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ 137 ಮಕ್ಕಳು ದಾಖಲಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂಟನೇ ತರಗತಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮಕ್ಕೆ ತಲಾ 75 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಆದರೆ ಈಗಾಗಲೇ ಅಂದರೆ ಮೇ.20ರ ವೇಳೆಗೆ ಕನ್ನಡ ಮಾಧ್ಯಮಕ್ಕೆ 76 ಹಾಗೂ ಆಂಗ್ಲ ಮಾಧ್ಯಮಕ್ಕೆ 61 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಇನ್ನು 9ನೇ ತರಗತಿಯಲ್ಲಿ 206 ಹಾಗೂ 10ನೇ ತರಗತಿಯಲ್ಲಿ 190 ಮಕ್ಕಳು ಕಲಿಯುತ್ತಿದ್ದಾರೆ.

ಇದನ್ನೂ ಓದಿ:

8ನೇ ತರಗತಿ ದಾಖಲಾತಿಗೆ ಮುಗಿಬಿದ್ದ ಪೋಷಕರು

ಇನ್ನು 8ನೇ ತರಗತಿಗೆ ದಾಖಲಾತಿ ಮಾಡಿಸಲು ಪಾಲಕರು ಮುಗಿ ಬೀಳುತ್ತಿದ್ದಾರೆ. ಬೆಂಗಳೂರು, ರಾಮನಗರ ಸೇರಿದಂತೆ ಜಿಲ್ಲೆಯ ಮದ್ದೂರು ತಾಲೂಕು, ಹಲಗೂರಿನಿಂದ ಖಾಸಗಿ ಶಾಲೆಯಿಂದ ಮಕ್ಕಳನ್ನು ಕರೆತಂದು ಮಾರಗೌಡನಹಳ್ಳಿ ಶಾಲೆಗೆ ಸೇರಿಸುವ ಯತ್ನ ನಡೆಯುತ್ತಿದೆ.  ಆದರೆ ಎಲ್ಲರನ್ನೂ ದಾಖಲಾತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಲಾಗುತ್ತಿದೆ. ಕಾರಣ ಜಾಗ ಹಾಗೂ ಶಿಕ್ಷಕರ ಕೊರತೆ.

ಶಾಲೆಗೆ ಜಾಗದ ಕೊರತೆ

ಪ್ರತಿ ವಿಷಯದಲ್ಲಿಯೂ ಮೊದಲ ಸ್ಥಾನದಲ್ಲಿರುವ ಮಾರಗೌಡನಹಳ್ಳಿ ಶಾಲೆಗೆ ಸ್ಥಳಾವಕಾಶದ ಕೊರತೆ ಇದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಶಾಲೆಗೆ, ಇನ್ನಷ್ಟು ಜಾಗದ ಅವಶ್ಯಕತೆ ಇದೆ. ಸರ್ಕಾರ ಅನುದಾನ ನೀಡಲು ಒಪ್ಪಿದರೂ ಕಟ್ಟಡ ನಿರ್ಮಾಣ ಮಾಡಿಸಿಕೊಳ್ಳಲು ಜಾಗವಿಲ್ಲ. ಇದರಿಂದಾಗಿ ದಾಖಲಾತಿ ಕೊಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಈ ಸಮಸ್ಯೆ ಬಗೆಹರಿದರೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನು ಶಿಕ್ಷಕರ ಕೊರತೆ ಕಾಡುತ್ತಿದೆ. ಸಧ್ಯ 7 ಶಿಕ್ಷಕರಿದ್ದು, ಇನ್ನು 9 ಜನ ಶಿಕ್ಷಕರು ಬೇಕಾಗಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕಾಗಿದೆ.

ಈ ಶಾಲೆಯ ಶೈಕ್ಷಣಿಕ ಸಾಧನೆ

ಇನ್ನು ಅ1997ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 24 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಇಲ್ಲಿನ ಶಿಕ್ಷಣ ವ್ಯವಸ್ಥೆ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾ ಸಾಗಿತ್ತು. ಪರಿಣಾಮವೇ ಪ್ರಸ್ತುತ 533 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಾಗಿದೆ. ಇನ್ನು ಎಸ್ಸೆಸ್ಸೆಲ್ಸಿಯಲ್ಲಿ ಈ ಶಾಲೆಯ ಶೇ.90ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಉದಾಹರಣೆಗಳಿಲ್ಲ.

ಅತ್ಯುತ್ತಮ ಶಿಕ್ಷಕರನ್ನು ಹೊಂದಿರುವ ಶಾಲೆ

2016-17ನೇ ಸಾಲಿನಿಂದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಈ ಶಾಲೆಗೆ ಶಿಕ್ಷಕರೇ ದೊಡ್ಡ ಶಕ್ತಿ. ಪ್ರತಿಯೊಬ್ಬರೂ ಮಕ್ಕಳ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ತಮ್ಮ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದುಕೊಳ್ಳುವಂತೆ ತರಬೇತಿ ನೀಡುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ಮೂಲಕ ಪರೀಕ್ಷೆಗೆ ಸಜ್ಜುಗೊಳಿಸುತ್ತಾರೆ. ಖಾಸಗಿ ಶಾಲೆಗಳಿಂತಲೂ ಕಡಿಮೆ ಇಲ್ಲವೆಂಬಂತೆ ಪಾಲಕರ ಸಹಕಾರದೊಂದಿಗೆ ವಾರ್ಷಿಕೋತ್ಸವ ಆಚರಣೆ ಮಾಡಲಾಗುತ್ತದೆ. ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

ಹಲವು ವಿದ್ಯಾರ್ಥಿಗಳಿಂದ ಸಾಧನೆ

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅಭಿಷೇಕ್‌ಗೌಡ ಎಂಬುವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 275ನೇ ರ‌್ಯಾಂಕ್‌ನೊಂದಿಗೆ ಐಎಎಸ್ ಉತ್ತೀರ್ಣರಾಗಿದ್ದಾರೆ. ಶಾಲೆಯ ಮೊದಲ ಬ್ಯಾಚ್‌ನಲ್ಲಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಐಆರ್‌ಎಸ್ ಹುದ್ದೆ ಅಲಂಕರಿಸಿದ್ದರು. ಇನ್ನು ಕೇಂದ್ರ ಸರ್ಕಾರ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಕಮಾಲ್ ಮಾಡುತ್ತಾರೆ.

ಇದನ್ನೂ ಓದಿ:

ಈ ವರ್ಷ 8ನೇ ತರಗತಿಗೆ 137 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಇನ್ನು ಕೆಲವರಿಗಷ್ಟೇ ಅವಕಾಶ ಕೊಡಬಹುದು. ಹೊರ ಜಿಲ್ಲೆಯಿಂದಲೂ ಮಕ್ಕಳನ್ನು ದಾಖಲಿಸಲು ಬರುತ್ತಿದ್ದಾರೆ. ಹೊರ ಜಿಲ್ಲೆ ಹಾಗೂ ತಾಲೂಕಿನಿಂದ ಬರುವ ಮಕ್ಕಳಿಗಾಗಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗ್ತಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಒಟ್ಟಾರೆ, ಶಿಕ್ಷಣದ ಹೆಸರಿನಲ್ಲಿ ಲಕ್ಷ ಲಕ್ಷ ಪೀಕುವ ಖಾಸಗಿ ಸ್ಕೂಲ್ ಗಳಿಗೆ , ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ.
Published by:Annappa Achari
First published: