HOME » NEWS » State » OVER FIVE DEAD FOR THUNDERBOLT AS HEAVY RAINFALL LASHES ACROSS KARNATAKA SNVS

ರಾಜ್ಯಾದ್ಯಂತ ಭಾರೀ ಮಳೆ; ಸಿಡಿಲಿಗೆ ಐವರು ರೈತರು, ಹತ್ತಾರು ಜಾನುವಾರು ಬಲಿ

ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರಿನ ಅನೇಕ ಭಾಗಗಳಲ್ಲಿ ಇಂದೂ ಕೂಡ ಧಾರಾಕಾರ ಮಳೆಯಾಗಿದೆ. ಹಾವೇರಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಇಂದು ಸಿಡಿಲಿಗೆ ಐವರು ಮಂದಿ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

news18-kannada
Updated:October 20, 2020, 7:40 PM IST
ರಾಜ್ಯಾದ್ಯಂತ ಭಾರೀ ಮಳೆ; ಸಿಡಿಲಿಗೆ ಐವರು ರೈತರು, ಹತ್ತಾರು ಜಾನುವಾರು ಬಲಿ
ಮಳೆಯಿಂದಾಗಿ ಹಾನಿಗೊಂಡ ಈರುಳ್ಳಿ ಬೆಳೆ
  • Share this:
ಬೆಂಗಳೂರು(ಅ. 20): ರಾಜ್ಯದ ಹಲವೆಡೆ ಇಂದೂ ಭಾರೀ ಮಳೆ ಮುಂದುವರಿದಿದೆ. ಉತ್ತರ ಕರ್ನಾಟಕದ ಅನೇಕ ಕಡೆ ಮಳೆಯ ಆರ್ಭಟ ಹೆಚ್ಚಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ ಮೊದಲಾದ ದಕ್ಷಿಣ ಭಾಗದಲ್ಲೂ ಭರ್ಜರಿ ಮಳೆಯಾಗಿದೆ. ಹಾವೇರಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ಐವರು ರೈತರು ಸಾವನ್ನಪ್ಪಿದ್ಧಾರೆ. ವಿಜಯಪುರ ಮತ್ತು ರಾಯಚೂರಿನಲ್ಲಿ ಒಂಬತ್ತು ಕುರಿ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ರಾಯಚೂರಿನಲ್ಲಿ ಸಿಡಿಲಿಗೆ ನಾಲ್ಕು ಎಕರೆ ಕಬ್ಬಿನ ತೋಟ ಸುಟ್ಟು ಕರಕಲಾಗಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಭೈರಾಪುರ ಕ್ರಾಸ್​ನ ಹೊಲದಲ್ಲಿದ್ದ ಕವಿತಾ(27) ಮತ್ತು ಗಂಗಮ್ಮ(45) ಅವರು ಸಿಡಿಲಿಗೆ ಬಲಿಯಾದವರು. ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಸ್ಥಳಕ್ಕೆ ಧಾವಿಸಿ ಬಂದು, ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಘೋಷಣೆ ಮಾಡಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಹೊರವಲಯದ ದೇವರಗುಡ್ಡದಲ್ಲಿ ದಯಾನಂದಗೌಡ ಪಾಟೀಲ್ (58) ಮತ್ತು ಪರಮೇಶಪ್ಪ ಕಾಳಮ್ಮನವರ (48) ಅವರು ಸಿಡಿಲಿಗೆ ಬಲಿಯಾಗಿದ್ಧಾರೆ. ಜಮೀನಿನ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಮರದ ಕೆಳಗೆ ಅವರು ನಿಂತಿದ್ದಾಗ ಸಿಡಿಲು ಬಡಿಯಿತೆನ್ನಲಾಗಿದೆ. ಇನ್ನು, ವಿಜಯಪುರದ ಚಡಚಳ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಧರೆಪ್ಪ ಬಿರಾದಾರ ಅವರೂ ಸಿಡಿಲಿಗೆ ಬಲಿಯಾಗಿದ್ದಾರೆ. ಚಡಚಣ ತಾಲೂಕಿನಾದ್ಯಂತ ಇಂದು ಗುಡುಗು, ಸಿಡಿಲುಗಳೊಂದಿಗೆ ಮಳೆ ಅಬ್ಬರಿಸುತ್ತಿದೆ. ವಿಜಯಪುರದ ನಿಡಗುಂದಿ ತಾಲೂಕಿನ ಕೂಡಗಿ ಬಳಿ ದ್ಯಾಮಣ್ಣ ಮನಗೂಳಿ ಎಂಬ ರೈತ ಹೊಲದಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದ ಪರಿಣಾಮ ಮೂರು ಕುರಿಗಳು ಸಾವನ್ನಪ್ಪಿವೆ. ಮತ್ತೊಂದೆಡೆ, ರಾಯಚೂರಿನ ಲಿಂಗಸುಗೂರು ತಾಲೂಕಿನ ಚಿತ್ತಾಪುರದಲ್ಲಿ ಬಸಪ್ಪ ಎಂಬ ರೈತರಿಗೆ ಸೇರಿದ ಆರು ಮೇಕೆಗಳೂ ಕೂಡ ಸಿಡಿಲು ಬಡಿದು ಮೃತಪಟ್ಟಿವೆ. ಜಮೀನಿನಲ್ಲಿ ಈ ಮೇಕೆಗಳು ಮೇಯುತ್ತಿದ್ದವೆನ್ನಲಾಗಿದೆ.

ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ; ಇನ್ನು ಎರಡು ದಿನ ಮಳೆ ಸಾಧ್ಯತೆ

ಭೀಮಾ ನದಿ ಪ್ರವಾಹದ ಸಂಕಷ್ಟ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಗೆ ಗಾಯದ ಮೇಲೆ ಬರೆ ಎಳೆದಂತೆ ಮಳೆಯ ಕಾಟ ಬಂದಿದೆ. ಶಹಾಪುರ, ಸುರಪುರ, ಯಾದಗಿರಿ ಮೊದಲಾದೆಡೆ ಇವತ್ತು 2-3 ಗಂಟೆ ಕಾಲ ಧಾರಾಕಾರ ಮಳೆಗೆ ಜನರು ತತ್ತರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಜಮಖಂಡಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ.

ಧಾರವಾಡದಲ್ಲಿ ಮಳೆಯಿಂದಾಗಿ ಹಾರೋಬೆಳವಡಿ ಎಂಬಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು ಧಾರವಾಡ-ಸವದತ್ತಿ ರಸ್ತೆ ಸಂಚಾರ ಬಂದ್ ಆಗಿದೆ. ಧಾರವಾಡದ ಹಾವೇರಿಪೇಟ, ಸಿಬಿ ನಗರ ಮೊದಲಾದ ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಸೇರಿದಂತೆ ಅನೇಕ ಕಡೆ ವರುಣನ ಆರ್ಭಟವಾಗುತ್ತಿದೆ. ಗುಡುಗು, ಮಿಂಚು, ಸಿಡಿಲಿನ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಹಲವು ಕಡೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಬಂದ್ ಮಾಡಿದರು. ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿಯಂತಾಗಿದೆ. ಗದಗ ಜಿಲ್ಲೆಯ ಅನೇಕ ಕಡೆಯೂ ಭರ್ಜರಿ ಮಳೆಯಾಗುತ್ತಿದೆ.

ಇನ್ನು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು ಮತ್ತು ನಾಗಮಂಗಲ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಮೊದಲಾದ ಕಡೆಯೂ ಜೋರು ಮಳೆಯಾಗಿದೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ದೇವನಹಳ್ಳಿ ಭಾಗಗಳಲ್ಲಿ ಮಳೆಯಾಗಿದೆ.
Published by: Vijayasarthy SN
First published: October 20, 2020, 7:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories