ಕೆಳ ಮತ್ತು ಅಧೀನ ನ್ಯಾಯಾಲಯಗಳಲ್ಲಿ 3.93 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಯಿತು. ಲಿಖಿತ ಉತ್ತರದ ಮೂಲಕ ಕಾನೂನು ಸಚಿವ ಕಿರಣ್ ರಿಜಿಜು ಅವರು ನ್ಯಾಷನಲ್ ಜ್ಯುಡಿಶಿಯಲ್ ಡಾಟಾ ಗ್ರಿಡ್ (NJDG) ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವರ್ಷ ಜುಲೈ 30 ರವರೆಗೆ, ಒಟ್ಟು 3,93,21,607 ಪ್ರಕರಣಗಳು ಕೆಳ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಮಾಹಿತಿ ನೀಡಿದರು.
ಇವುಗಳಲ್ಲಿ 1,05,10,012 ಸಿವಿಲ್ ಪ್ರಕರಣಗಳು ಮತ್ತು 2,88,11,595 ಕ್ರಿಮಿನಲ್ ಪ್ರಕರಣಗಳು ಸೇರಿವೆ. ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಒಟ್ಟು ಪ್ರಕರಣಗಳಲ್ಲಿ 1,02,001 ವಿಲೇವಾರಿಯು 30 ವರ್ಷಗಳಿಂದ ಬಾಕಿ ಉಳಿದಿದೆ. ಇವುಗಳಲ್ಲಿ 37,423 ಸಿವಿಲ್ ಮತ್ತು 64,578 ಕ್ರಿಮಿನಲ್ ಪ್ರಕರಣಗಳು ಸೇರಿವೆ.
ಜುಲೈ 12, 2021 ರ ಹೊತ್ತಿಗೆ, ಈ ನ್ಯಾಯಾಲಯಗಳು 75 ಲಕ್ಷ ಪ್ರಕರಣಗಳನ್ನು ಇತ್ಯರ್ತ ಪಡಿಸಿವೆ ಮತ್ತು 160.05 ಕೋಟಿ ದಂಡವನ್ನು ವಿಧಿಸಿವೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನ್ಯಾಯಾಲಯಗಳಿಗೆ ವರದಾನವಾಗಿ ಪರಿಣಮಿಸಿದ್ದು ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆ ಎಂದು ಸಚಿವರು ಹೇಳಿದರು. ಕೋವಿಡ್ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ, ಜಿಲ್ಲಾ ನ್ಯಾಯಾಲಯಗಳು 74,15,989 ಪ್ರಕರಣಗಳನ್ನು ಆಲಿಸಿದರೆ, ಹೈಕೋರ್ಟ್‌ಗಳು 40,43,300 ಪ್ರಕರಣಗಳನ್ನು (ಒಟ್ಟು 1.14 ಕೋಟಿ) ಜೂನ್ 30, 2021 ರವರೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆಲಿಸಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಆರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 680 ಸಿಎಪಿಎಫ್ ಸಿಬ್ಬಂದಿ: ರಾಜ್ಯಸಭೆಗೆ ಮಾಹಿತಿ ನೀಡಿದ ಸರ್ಕಾರ
ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅತ್ಯಂತ ನಿಧಾನವಾಗಿ ಈ ರೀತಿಯ ಬೆಳವಣಿಗೆ ಆಗುತ್ತಿರುವ ಕಾರಣ ನ್ಯಾಯಧೀಶರು ಒತ್ತಡಕ್ಕೆ ಒಳಗಾಗಿ ತೀರ್ಪು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಏನೆಲ್ಲ ಕ್ರಮ ತೆಗೆದುಕೊಂಡರು ಸಹ ಭಾರತದಂತಹ ದೇಶದಲ್ಲಿ ನ್ಯಾಯದಾನದ ವಿಳಂಬ ತಡೆಯಲು ಬೇರೆಯದೇ ರೀತಿಯಲ್ಲಿ ದಾರಿ ಕಂಡುಕೊಳ್ಳಬೇಕೆಂಬುದು ಪರಿಣಿತರ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ