ಇಲ್ಲಿ ವೀಸಾ ಅವಧಿ ಮುಕ್ತಾಯ, ಅಲ್ಲಿ ದೇಶವೇ ತಾಲಿಬಾನಿಗರ ಕೈಯಲ್ಲಿ: ಅತ್ತ ದರಿ ಇತ್ತ ಪುಲಿ, ನಡುವೆ ನಿಂತ ಅಫ್ಘಾನ್​ ವಿದ್ಯಾರ್ಥಿಗಳು

Afghanistan Students Visa Expires: ಇದು ಕೇವಲ ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಾಂಗ ಮಾಡುತ್ತಿರೋ ಆಫ್ಘನ್ ವಿದ್ಯಾರ್ಥಿಗಳ ಸಮಸ್ಯೆಯಲ್ಲ, ಬದಲಿಗೆ ದೇಶದಲ್ಲಿ 74 ಕೃಷಿ ಸಂಬಂಧಿತ ವಿವಿಗಳಲ್ಲಿ ವ್ಯಾಸಂಗ ಮಾಡುತ್ತಿರೋ 250 ವಿದ್ಯಾರ್ಥಿಗಳದ್ದು ಇದೇ ಕಥೆಯಾಗಿದೆ

ಧಾರವಾಡ ಕೃಷಿ ವಿವಿಯಲ್ಲಿ ಓದುತ್ತಿರುವ ಅಫ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳು

ಧಾರವಾಡ ಕೃಷಿ ವಿವಿಯಲ್ಲಿ ಓದುತ್ತಿರುವ ಅಫ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳು

  • Share this:
ಧಾರವಾಡ :  ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಗಳಿಗೆ ಹೋದರೆ ಅವರ ಕಲಿಕೆ ಮುಗಿಯುತ್ತಿದ್ದಂತೆ ಅವರ ವೀಸಾ ಅವಧಿಯು ‌ಸಹ ಮುಗಿಯುತ್ತದೆ. ಈಗ ಭಾರತಕ್ಕೆ ವ್ಯಾಸಂಗಕ್ಕಾಗಿ ಬಂದಿರುವ ಅಫ್ಘಾನಿಸ್ತಾನ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿಯುವ ಹಂತಕ್ಕೆ ಬಂದಿದೆ (Afghanistan Students VISA about to expire). ಇದರಿಂದ ತಮ್ಮ‌ದೇಶಕ್ಕೆ‌ಮರಳಿ ಹೋಗಲೂ ಆಗದೇ ಇಲ್ಲಿಯೂ ಇರದಂತಾ ತ್ರಿಶಂಕು ಸ್ಥಿತಿಯಲ್ಲಿ ಅಫ್ಘಾನಿಸ್ತಾನ ವಿದ್ಯಾರ್ಥಿಗಳು ಇದ್ದಾರೆ. ಹೌದು ಧಾರವಾಡದ ಕೃಷಿ ವಿಶ್ವವಿದ್ಯಾಯಕ್ಕೆ ಅಫ್ಘಾನಿಸ್ತಾನದಿಂದ ಬಂದ ಹತ್ತು ವಿದ್ಯಾರ್ಥಿಗಳ ವೀಸಾ ಅವಧಿ ಮುಕ್ತಾಯ ಹಂತಕ್ಕೆ‌ಬಂದಿದೆ. ಇದೀಗ ವೀಸಾ ಅವಧಿ ವಿಸ್ತರಿಸುವಂತೆ ಭಾರತ ಸರಕಾರಕ್ಕೆ‌ ಮನವಿ ಮಾಡಿದ್ದಾರೆ.

ಧಾರವಾಡದ ಕೃಷಿ ವಿವಿಯಲ್ಲಿ (Dharwad Agriculture University) ಅಧ್ಯಯನ ಮಾಡುತ್ತಿರೋ ವಿದ್ಯಾರ್ಥಿಗಳಲ್ಲಿ ಕೆಲವರ ಕೋರ್ಸ್ ಮುಕ್ತಾಯವಾಗುತ್ತಿದೆ. ಅದರೊಂದಿಗೆ ಕೆಲವರ ವೀಸಾದ ಅವಧಿಯೂ ಈ ಸೆಪ್ಟೆಂಬರ್ ಗೆ ಕೊನೆಗೊಳ್ಳಲಿದೆ. ಆ ಅವಧಿ ಮುಗಿಯುವ ಒಳಗೆ ಅವರು ತಮ್ಮ ದೇಶವನ್ನು ಸೇರಬೇಕು. ಇದೀಗ ಕೃಷಿ ವಿವಿಯ ಇಂಟರ್ ನ್ಯಾಷನಲ್ ಹಾಸ್ಟೆಲ್ ನಲ್ಲಿ ನೆಲಸಿರೋ ಇವರು ಕೋರ್ಸ್ ಅವಧಿ ಮುಗಿದ ಕೂಡಲೇ ಇಲ್ಲಿಂದ ಹೊರಗೆ ತೆರಳಲೇ ಬೇಕು. ಆದರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರೋ ಇವರೆಲ್ಲ ವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿವರಿಗೆ ಮನವಿ ಸಲ್ಲಿಸಿದ್ದು, ತಾವು ಇನ್ನೂ ಕೆಲ ದಿನ ಇಲ್ಲಿಯೇ ವ್ಯಾಸಂಗ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ ಭಾರತ ಸರಕಾರಕ್ಕೆ ಕೂಡ ಮನವಿ ಸಲ್ಲಿಸಿದ್ದು, ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಬಗ್ಗೆ ಸಭೆ ನಡೆಸಿರೋ ಕೃಷಿ ವಿವಿ ಕುಲಪತಿ ಡಾ. ಚೆಟ್ಟಿ ಅವರಿಗೆ ಸಾಧ್ಯವಾಗುವ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಈ ಬಗ್ಗೆ ನ್ಯೂಸ್​18 ಕನ್ನಡದ ಜತೆ ಮಾತನಾಡಿದ ಅಫ್ಘಾನಿಸ್ತಾನ ಮೂಲದ ವಿದ್ಯಾರ್ಥಿ ನುಸ್ರತ್​, ತಮ್ಮ ದೇಶದಲ್ಲಿ ನಡೆಯುತ್ತಿರುವ ಗಲಾಟೆಯಿಂದ ನಮ್ಮವರ ನೆಮ್ಮದಿ ಹಾಳಾಗಿದೆ. ನಿತ್ಯವೂ ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಫೋನ್‌ ಮೂಲಕ ನಮ್ಮ‌ ಕುಟುಂಬಸ್ತರೊಂದಿಗೆ ಮಾತನಾಡಿದ್ದೇವೆ. ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ, ತಾಲಿಬಾನಿಗರ ಅಟ್ಟಹಾಸಕ್ಕೆ ಮಾನಸಿಕವಾಗಿ - ದೈಹಿಕವಾಗಿ ಜರ್ಝರಿತರಾಗಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಸಹ ಹೆಚ್ಚಾಗಿದೆ. ನಮ್ಮ ಮನೆಯವರ ಸಂಬಳವನ್ನು ಸಹ ನೀಡಿಲ್ಲ. ಇದರಿಂದ ನಮ್ಮ ಕುಟುಂಬಗಳು ಸಂಕಷ್ಟದಲ್ಲಿವೆ. ಆದರೆ ಈಗ ನಮ್ಮ ವೀಸಾ ಮುಗಿಯುವ ಹಂತ ಬಂದಿದೆ. ನಮ್ಮ ಪರಿಸ್ಥಿತಿಯ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ವ್ಯಾಸಂಗ ಮುಂದುವರೆಸಲು ಹಾಗೂ ವೀಸಾ ಸಮಯ ಹೆಚ್ಚಳಕ್ಕೆ ಭಾರತ ಸರ್ಕಾರ ಹಾಗೂ ಕೃಷಿ ವಿವಿಯ ಕುಲಪತಿಗಳಿಗೆ ಮನವಿ ಮಾಡಿಕೊಂಡಿದ್ದೇವೆ, ಭಾರತ ಸರ್ಕಾರದ ಮೇಲೆ ನಮಗೆ ಭರವಸೆ ಇದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: ಬಲವಂತದ ರಾಜೀನಾಮೆ, ಪ್ರವಾಸಕ್ಕೆ ತಡೆ, ಮೂಲೆಗುಂಪಾಗುವ ಮುನ್ಸೂಚನೆ: ಬಿಎಸ್​ವೈ ಪ್ಲಾನ್​ ಬಿ ಏನು?

ಕೃಷಿ ವಿಶ್ವವಿದ್ಯಾಲಯಕ್ಕೆ ಒಟ್ಟು 15 ಆಫ್ಘನ್ ವಿದ್ಯಾರ್ಥಿಗಳು ವ್ಯಾಸಾಂಗಕ್ಕೆ ಬಂದಿದ್ದರು. ಅದರಲ್ಲಿ ಕಳೆದ ವರ್ಷ ಐವರು ರಜೆ ಹಿನ್ನೆಲೆಯಲ್ಲಿ ಮರಳಿ ಹೋಗಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆ ಅವರು ಮರಳಿ ಬರಲು ಸಾಧ್ಯವೇ ಆಗಲಿಲ್ಲ. ಹೀಗಾಗಿ ಇದೀಗ ಕೃಷಿ ವಿವಿಯ ಹಾಸ್ಟೆಲ್​ನಲ್ಲಿ ಹತ್ತು ವಿದ್ಯಾರ್ಥಿಗಳಷ್ಟೇ ಉಳಿದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಹಲವರ ಕೋರ್ಸ್ ಕೂಡ ಇದೀಗ ಮುಕ್ತಾಯವಾಗಿದ್ದು, ಇದೇ ತಿಂಗಳಲ್ಲಿ ವೀಸಾ ಅವಧಿಯೂ ಮುಕ್ತಾಯವಾಗಲಿದೆ.

ಇದನ್ನೂ ಓದಿ: ಅಫ್ಘನ್ ಬಂಡುಕೋರರಿಗೆ ಆಶ್ರಯ ಕೊಡಬೇಡಿ: ಭಾರತಕ್ಕೆ ‘ಕಾಬೂಲ್ ಹಂತಕ’ ಎಚ್ಚರಿಕೆ

ಅಫ್ಘಾನ ವಿದ್ಯಾರ್ಥಿಗಳು ಇಲ್ಲಿಯೇ ಹೆಚ್ಚಿನ ವ್ಯಾಸಂಗ ಮಾಡಲು ಭಾರತೀಯ ಕೃಷಿ ಅನುಸಂಧಾನ ಪರಿಷತ್​ನಿಂದ ಅನುಮತಿ ಮತ್ತು ಅನುದಾನದ ಅವಶ್ಯಕತೆ ಇದೆ. ಅಲ್ಲದೇ ಇವರ ವೀಸಾ ಅವಧಿ ವಿಸ್ತರಣೆಯಾಗಬೇಕೆಂದರೆ ಅದು ಭಾರತ ಸರಕಾರದ ಕೈಯಲ್ಲಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಕಚೇರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಕೃಷಿ ವಿವಿ ಕುಲಪತಿ ಚೆಟ್ಟಿ.

ಇದು ಕೇವಲ ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಾಂಗ ಮಾಡುತ್ತಿರೋ ಆಫ್ಘನ್ ವಿದ್ಯಾರ್ಥಿಗಳ ಸಮಸ್ಯೆಯಲ್ಲ, ಬದಲಿಗೆ ದೇಶದಲ್ಲಿ 74 ಕೃಷಿ ಸಂಬಂಧಿತ ವಿವಿಗಳಲ್ಲಿ ವ್ಯಾಸಂಗ ಮಾಡುತ್ತಿರೋ 250 ವಿದ್ಯಾರ್ಥಿಗಳದ್ದು ಇದೇ ಕಥೆಯಾಗಿದೆ. ಹೀಗಾಗಿ ಇವರೆಲ್ಲ ಭಾರತ ಸರಕಾರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಭಾರತದಲ್ಲಿರುವ ಅಫ್ಘಾನ ವಿದ್ಯಾರ್ಥಿಗಳ ವೀಸಾ ವಿಸ್ತರಣೆ ಆಗಲಿದೆಯಾ, ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.
Published by:Sharath Sharma Kalagaru
First published: