Uttara Kannada: ಉತ್ತರ ಕನ್ನಡದಿಂದ ಉತ್ತರ ಕರ್ನಾಟಕಕ್ಕೆ ಹರಿಯುತ್ತಾಳಾ ಕಾಳಿ? ಜಿಲ್ಲೆ ಜನರಿಂದ ಆಕ್ರೋಶ

ಕಾಳಿ ನದಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಮೊದಲು ನೀರು ಪೂರೈಕೆ ಮಾಡಿ, ನಂತರ ಬೇರೆ ಜಿಲ್ಲೆಗಳ ಬಗ್ಗೆ ಗಮನ ಹರಿಸಬೇಕಿದೆ. ಅಷ್ಟಕ್ಕೂ ಬೇರೆ ಜಿಲ್ಲೆಗಳಿಗೆ ಇಲ್ಲಿಂದ ನೀರು ಕೊಂಡೊಯ್ಯುವುದು ಕೂಡ ಹರಸಾಹಸದ ಕೆಲಸವೇ ಆಗಿದ್ದು, ಇದು ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ತಜ್ಞರು.

ಕಾಳಿ ನದಿ

ಕಾಳಿ ನದಿ

  • Share this:
ಉತ್ತರ ಕನ್ನಡ: ಜಿಲ್ಲೆಯ ಜೀವನದಿ (River) ಕಾಳಿ (Kali) ಪರವಾಗಿ ಉತ್ತರ ಕನ್ನಡದ (Uttara Kannada) ಜನರು ಮತ್ತೆ ದನಿಯೆತ್ತಿದ್ದಾರೆ. ಉತ್ತರ ಕರ್ನಾಟಕ (Uttara Karnataka) ಭಾಗದ ಐದು ಜಿಲ್ಲೆಗಳಿಗೆ ಕುಡಿಯುವ ನೀರು (Drinking Water) ಪೂರೈಸುವ ಕುರಿತು ಕಾಳಿ ನದಿ ಜೋಡಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ  ಬಾರಿ 2022-23ರ ರಾಜ್ಯ ಬಜೆಟ್‌ನಲ್ಲಿ (Budget) ಮುಖ್ಯಮಂತ್ರಿ (CM) ಬಸವರಾಜ್ ಬೊಮ್ಮಾಯಿ (Basavaraj Bomami) ಅವರು ಕಾಳಿ ನದಿಯನ್ನು ಉತ್ತರ ಕರ್ನಾಟಕ ಭಾಗದ ನದಿಗಳಿಗೆ ಜೋಡಣೆ ಮಾಡುವ ಬ್ಗಗೆ ಘೋಷಣೆ ಮಾಡಿದ್ದಾರೆ. ಇದು ಉತ್ತರ ಕನ್ನಡಿದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಳಿ ನದಿಯಿಂದ ಸರಿಯಾಗಿ ಉತ್ತರ ಕನ್ನಡಕ್ಕೇ ನೀರು ಪೂರೈಕೆಯಾಗದಿರುವ ಸಂದರ್ಭದಲ್ಲಿ ಏಕಾಏಕಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರು ಪೂರೈಸುವ ಬಗ್ಗೆ ಘೋಷಿಸಿರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

 ಏನಿದು ಜನಾಕ್ರೋಶ?

ಉತ್ತರ ಕನ್ನಡದ ಜೊಯಿಡಾದ ಡಿಗ್ಗಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ಕಾಳಿ ನದಿ, ಉತ್ತರ ಕನ್ನಡ ಜಿಲ್ಲೆಯ ಜೀವನದಿ. 184 ಕಿ.ಮೀ. ಉದ್ದದ ಈ ನದಿಯ ಹರಿವಿನುದ್ದಕ್ಕೂ ಸೂಪಾ, ಕೊಡಸಳ್ಳಿ, ಕದ್ರಾಗಳಲ್ಲಿ ಅಣೆಕಟ್ಟುಗಳನ್ನ ಕಟ್ಟಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿದು ಬರುವ ಈ ಕಾಳಿಯ ಮೇಲೆ ಲಕ್ಷಾಂತರ ಜನರು ಅವಲಂಬಿತರಾಗಿದ್ದಾರೆ. ಆದರೆ ಇದನ್ನೇ ಉತ್ತರ ಕರ್ನಾಟಕಕ್ಕೆ ಹರಿಸಿದರೆ ಏನು ಮಾಡುವುದು ಎನ್ನುವುದು ಇಲ್ಲಿನ ಜನರ ಚಿಂತೆ.

ಕೃಷಿಕರು, ಮೀನುಗಾರರಿಗೆ ಆಸರೆಯಾಗಿರುವ ಕಾಳಿ ನದಿ

ಮೀನುಗಾರರ ಕಸುಬಿಗೆ ಈ ನದಿ ಆಧಾರವಾಗಿದೆ. ಅದೆಷ್ಟೋ ಜಲಚರ, ಜೀವ- ಜಂತುಗಳಿಗೂ ಈ ಕಾಳಿ ಜೀವನಾಡಿ. ಈ ನಡುವೆ ಈಗಾಗಲೇ ದಾಂಡೇಲಿಯಿಂದ ಧಾರವಾಡದ ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ಪೈಪ್‌ಲೈನ್ ಕಾಮಗಾರಿ ಆರಂಭಿಸಿರುವುದರ ನಡುವೆ, ಮತ್ತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವುದು ಉತ್ತರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Farmer: ರೈತರಿಗೆ ಮರು 'JIVA' ಕೊಡಲು ಮುಂದಾದ ವಿಜ್ಞಾನಿ! ಅವರು ಸಂಶೋಧಿಸಿದ ಯಂತ್ರದಿಂದ ಕೃಷಿಕರಿಗೆ ಖುಷಿ!

ಕಾಳಿ ನದಿ ಪಾತ್ರದ ಹಳ್ಳಿಗಳಲ್ಲೇ ನೀರಿನ ಸಮಸ್ಯೆ

ಕಾಳಿ ನದಿ ಹುಟ್ಟುವ ಜೊಯಿಡಾ ತಾಲೂಕಿನ ಅದೆಷ್ಟೋ ಹಳ್ಳಿಗಳಿಗೆ ಈಗಲೂ ನೀರಿನ ತತ್ವಾರ ಇದೆ. ಕಾಳಿ ಅರಬ್ಬಿ ಸೇರುವ ಕಾರವಾರ- ಅಂಕೋಲಾದಲ್ಲಿ ಬೇಸಿಗೆ ಬಂತೆAದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ.

ಏಷ್ಯಾದ ಅತಿದೊಡ್ಡ ಯೋಜನೆಯಾದ ಸೀಬರ್ಡ್ ಗೆ ಅಘನಾಶಿನಿಯಿಂದ ನೀರು ಪೂರೈಕೆಯಾಗುವ ಕಾರಣ ಕಾರವಾರ- ಅಂಕೋಲಾ ತಾಲೂಕುಗಳಿಗೆ ನೀರು ಸಿಗುತ್ತಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಸೀಬರ್ಡ್ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನಷ್ಟು ನೀರಿನ ಅಭಾವ ಕೂಡ ಸೃಷ್ಟಿಯಾಗಲಿದೆ.

ದೀಪದ ಬುಡದಲ್ಲೇ ಕತ್ತಲು

ಈ ನಿಟ್ಟಿನಲ್ಲಿ ಕಾರವಾರದ ಕದ್ರಾ ಅಣೆಕಟ್ಟಿನಿಂದ ಕಾರವಾರ- ಅಂಕೋಲಾಕ್ಕೆ ನೀರು ಪೂರೈಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಇತ್ತೀಚಿಗೆ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದರು. ಆದರೆ ಇದೀಗ ಏಕಾಏಕಿ ಐದು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವುದು ಒಂದು ರೀತಿ ‘ದೀಪದ ಬುಡದಲ್ಲಿ ಕತ್ತಲು’ ಎಂಬಂತೆ ನದಿ ಹುಟ್ಟಿ ಹರಿಯುವ ಉತ್ತರಕನ್ನಡದಲ್ಲೇ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Kodagu: ಎರಡು ವರ್ಷಗಳ ಬಳಿಕ ಓಪನ್ ಆದ 'ಟಿಬೆಟಿಯನ್ ಧರ್ಮಶಾಲಾ' ಬಾಗಿಲು, ನೀವು ಬನ್ನಿ ಪ್ರವಾಸಕ್ಕೆ

ಪರಿಸರದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ

ಒಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಬೇಕಿದೆ. ಕಾಳಿ ನದಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಮೊದಲು ನೀರು ಪೂರೈಕೆ ಮಾಡಿ, ನಂತರ ಬೇರೆ ಜಿಲ್ಲೆಗಳ ಬಗ್ಗೆ ಗಮನ ಹರಿಸಬೇಕಿದೆ.

ಅಷ್ಟಕ್ಕೂ ಬೇರೆ ಜಿಲ್ಲೆಗಳಿಗೆ ಇಲ್ಲಿಂದ ನೀರು ಕೊಂಡೊಯ್ಯುವುದು ಕೂಡ ಹರಸಾಹಸದ ಕೆಲಸವೇ ಆಗಿದ್ದು, ಇದು ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ತಜ್ಞರು.
Published by:Annappa Achari
First published: