ಬೆಳಗಾವಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ (Agricultural University) ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೆದುಳು ನಿಷ್ಕ್ರೀಯಗೊಂಡಿದೆ (Brain Dead) . ಎತ್ತಿನಗುಡ್ಡ ಗ್ರಾಮದ 48 ವರ್ಷದ ಕಮಲವ್ವ ಕೆಲಗೇರಿ ಅವರ ಅಂಗಾಂಗಳನ್ನು ಕುಟುಂಬದವರು ದಾನ ಮಾಡಲು ಅನುಮತಿ ನೀಡುವ ಮೂಲಕ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣೆ ಆಗಿದ್ದಾರೆ. ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಸಿ ಮಾಡಲು ಧಾರವಾಡದಿಂದ ರಸ್ತೆ ಮೂಲಕ ತೆಗೆದುಕೊಂಡು ಬರಲಾಯಿತು. ಇನ್ನೊಂದು ಕಿಡ್ನಿಯನ್ನು ಎಸಡಿಎಂ ಆಸ್ಪತ್ರೆಯಲ್ಲಿರುವ ರೋಗಿಗೆ ಕಸಿ ಮಾಡಿದರೆ, ಲೀವರ ಅನ್ನು ಬೆಂಗಳೂರಿನ ಆರ್ ಆರ್ ನಗರದ ಸ್ಪರ್ಶ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಜೀರೋ ಟ್ರಾಫಿಕ್ನಲ್ಲಿ ಅಂಗಾಂಗ ರವಾನೆ
ಬೆಳಗಾವಿ ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಅಥವಾ ಗ್ರೀನ ಕಾರಿಡಾರ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು. ಮೆದಳು ನಿಷ್ಕ್ರಿಯಗೊಂಡಿದ್ದರೂ ಕೂಡ ಅಂಗಾಂಗಳು ಕಾರ್ಯ ನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರಿಯಗೊಂಡ ಮಹಿಳೆ ಪತಿ ಹಾಗೂ ಮೂವರು ಮಕ್ಕಳಿಗೆ, ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನೀವು ನೀಡುವ ಅಂಗಾಂಗ ಇನ್ನೊಬ್ಬರ ಜೀವ ಉಳಿಸುತ್ತದೆ ಎಂದು ಹೇಳಿದಾಗ ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.
ಮೂವರ ಬಾಳಿಗೆ ಬೆಳಗಾದ ಮಹಿಳೆ
ಮೆದುಳು ನಿಷ್ಕ್ರೀಯಗೊಂಡ ಮಹಿಳೆಯ ಕಿಡ್ನಿಯನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳಗಾವಿಯ 52 ವರ್ಷದ ವ್ಯಕ್ತಿಗೆ ಕಸಿ ಮಾಡುವಲ್ಲಿ ಡಾ. ಆರ್ ಬಿ ನೇರಲಿ, ಡಾ. ವಿಕ್ರಮ ಪ್ರಭಾ, ಡಾ. ರಿತೇಶ ವೆರ್ನೆಕರ ಅವರ ತಂಡವು ನಿರತರಾದರು. ಮೃತಪಟ್ಟ ಬಳಿಕವೂ 3 ಜನರ ಜೀವ ಉಳಿಸಿ ಸಾರ್ಥಕತೆ ಮೆರೆದ ಮಹಿಳೆ, ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯವಾದ್ದು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ತೀವ್ರವಾದ ಮಳೆಯಲ್ಲಿಯೇ ನೆನೆಯುತ್ತ ಅವಕಾಶ ಕಲ್ಪಿಸಿಕೊಟ್ಟರು.
ಇದನ್ನೂ ಓದಿ: BJP MLA: ದೇವಸ್ಥಾನಕ್ಕೆ ರಥ ನೀಡುವ ಹರಕೆ ಕೈ ಬಿಟ್ಟ ಶಾಸಕ ಎಂ ಪಿ ಕುಮಾರಸ್ವಾಮಿ
ಅಂಗಾಂಗಳನ್ನು ದಾನ ಮಾಡಿದ ಮಹಿಳೆ ಹಾಗೂ ಅವಳ ಕುಟುಂಬ ಸದಸ್ಯರು, ಪೋಲಿಸರ ಕಾರ‍್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ,ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಧಾರವಾಡದಿಂದ ಬೆಳಗಾವಿ ಹೃದಯ ತಂದು ಕಸಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಗ್ರೀನ್ ವೇ ಮಾಡಿದ್ದರು. ಈಗ ಮತ್ತೊಮ್ಮೆ ಸಂಚಾರ ವ್ಯವಸ್ಥೆ ಮಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದ್ದಾರೆ.
ಅಂಗಾಂಗ ದಾನದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ
ಕಳೆದ ವರ್ಷ ಕನ್ನಡದ ನಟ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರು ನಿಧನದ ನಂತರ ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರೀತಿಯ ಅಪ್ಪು ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದಂತೆ ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿ ಸಹಿ ಹಾಕುವವರ ಸಂಖ್ಯೆ ಕರ್ನಾಟಕದಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆ ಮೂಲಕ ನೆಲ್ಮೆಯ ನಟ ಸಾವಿರಾರು ಅಭಿಮಾನಿಗಳ ಆದರ್ಶ ಕಾರ್ಯದ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರೆ ತಪ್ಪಾಗಲಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ