ಕೊಡಗಿಗೆ ಕೊಡುಗೆಗಾಗಿ ನಿರ್ಮಲಾನಂದ ಶ್ರೀಗಳ ನಡಿಗೆ

news18
Updated:September 2, 2018, 1:49 PM IST
ಕೊಡಗಿಗೆ ಕೊಡುಗೆಗಾಗಿ ನಿರ್ಮಲಾನಂದ ಶ್ರೀಗಳ ನಡಿಗೆ
news18
Updated: September 2, 2018, 1:49 PM IST
-ಶ್ರೀನಿವಾಸ  ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು,(ಸೆ.02): ಕೊಡಗು ಪ್ರವಾಹ ಪರಿಸ್ಥಿತಿ ಹಿನ್ನೆಲೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹಕ್ಕಾಗಿ ಬೆಂಗಳೂರಿನಲ್ಲಿ 'ಕೊಡಗಿಗೆ  ಕೊಡುಗೆಗಾಗಿ ನಮ್ಮ ನಡಿಗೆ' ಪಾದಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗಂಗಾಧರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.  ವಿಜಯನಗರದ ಶಾಖಾಮಠದ ಆವರಣದಿಂದ ಕಾರ್ಯಕ್ರಮ ಆರಂಭವಾಗಿ ಮಾರುತಿ ಮಂದಿರವರೆಗೂ ಪಾದಯಾತ್ರೆ ಹೊರಟಿತು.  ಮಠದದಿಂದ ಮಾರುತಿ ಮಂದಿರವರೆಗೂ ಪಾದಯಾತ್ರೆ ಮೂಲಕ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. ಪರಿಸರ ಜಾಗೃತಿ ಜಾಥಾ ಮತ್ತು ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮಿ, ಚಂದ್ರಶೇಖರನಾಥ ಸ್ವಾಮೀಜಿ, ವಿ. ಸೋಮಣ್ಣ ಉಪಸ್ಥಿತಿ ಇದ್ದರು.

ಆದಿಚುಂಚನಗಿರಿ ಮಠದ ಪರಿಹಾರ ನಿಧಿ ಸಂಗ್ರಹಕ್ಕೆ ರಾಜಕೀಯ ಮುಖಂಡರಾದ ಮಾಜಿ ಸಚಿವ ವಿ.ಸೋಮಣ್ಣ 20 ಲಕ್ಷ , ವಿಜಯನಗರ ಶಾಸಕ ಎಂ. ಕೃಷ್ಣಪ್ಪ 25 ಲಕ್ಷ , ಶಾಸಕ ಗೋಪಾಲಯ್ಯ 2 ಲಕ್ಷ ರೂ. ದೇಣಿಗೆ ನೀಡಿದರು.

ಕೊಡಗು ಈ ನಾಡಿಗೆ ಸಾಕಷ್ಟು ಕೊಟ್ಟಿದೆ. ಆದರೆ ಪ್ರಕೃತಿ ವಿಕೋಪದಿಂದ ಈಗ ಕೊಡಗು ಸಂಕಷ್ಟಕ್ಕೆ ಸಿಲುಕಿದೆ. ನಾವೆಲ್ಲರು ಈಗ ಕೊಡಗಿಗೆ ಸಹಾಯ ನೀಡಬೇಕಿದೆ. ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು.

ಶ್ರೀಗಳ ಪಾದಯಾತ್ರೆ ವಿಜಯನಗರದ ಮಾರುತಿ ಮಂದಿರ ತಲುಪಿತು. ಮಾರುತಿ ಮಂದಿರದಲ್ಲಿ ನಿರ್ಮಲಾನಂದ ಶ್ರೀಗಳು ಪೂಜೆ ಸಲ್ಲಿಸಿದರು. ಪಾದಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಉದಾರ ಮನಸ್ಸಿನಿಂದ ಧನ ಸಹಾಯ ಮಾಡಿದರು.


ನಂತರ ಪಾದಯಾತ್ರೆ ಸಂಕಷ್ಟಹರ ಗಣಪತಿ ದೇವಸ್ಥಾನ  ತಲುಪಿತು. ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಹಾಗೂ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.  ಸಾರಿಗೆ ಸಚಿವ ಡಿಸಿ ತಮ್ಮಣ್ಣ, ಮಾಜಿ ಸಚಿವ ಎಂ ಕೃಷ್ಣಪ್ಪ, ಬಿಬಿಎಂಪಿ ಕಾರ್ಪೋರೇಟರ್ಸ್​ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ವೀರ ಯೋಧರ ನಾಡು ಕೊಡಗು.  ಈಗ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದರು.

ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ. 20 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಕಾಣೆಯಾಗಿದ್ದಾರೆ. ಸಾವಿರಾರು ಹೆಕ್ಟರ್ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ ಮಠ ಎಂದರೆ ಅದು ಆದಿಚುಂಚನಗಿರಿ ಮಠ. ಕೊಡಗನ್ನು ಕಟ್ಟಲು ನಾವಿದ್ದೇವೆ ಎಂದು ನಿರ್ಮಲಾನಂದ ಶ್ರೀಗಳು ಹೇಳುವ ಮೂಲಕ ಕೊಡಗಿನ ಜನರಲ್ಲಿ ಆಶಾಭಾವನೆ ಮೂಡಿಸಿದ್ದಾರೆ ಎಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.

ಕೊಡಗಿನ ಜನರ ನೆರವಿಗೆ ನಾವೆಲ್ಲರೂ ಧಾವಿಸೋಣ. ಉತ್ತರ ಕರ್ನಾಟಕದ ಜನರು ನೆರೆಯಿಂದ ತತ್ತರಿಸಿದ ವೇಳೆ ನಿರ್ಮಲಾನಂದ ಶ್ರೀಗಳು ಸಹಾಯಹಸ್ತ ಚಾಚಿದ್ದರು. ಇದೀಗ ಕೊಡಗು ಜನರಿಗ ನೆರವಿಗಾಗಿ ಶ್ರೀಗಳು ಧಾವಿಸಿದ್ದಾರೆ. ಇದು ಸ್ಮರಣೀಯ. ಕೊಡಗಿನ ಜನ ಶಾಂತಪ್ರಿಯರು. ಆದಿಚುಂಚನಗಿರಿ ಶ್ರೀಗಳ ಬೆನ್ನಹಿಂದೆ ನಾವಿದ್ದೇವೆ ಎಂದು ನಾಗನೂರು ಶ್ರೀಗಳು ಅಭಯ ನೀಡಿದರು.

ನಿರ್ಮಲಾನಂದ ಶ್ರೀಗಳ ಈ ಕಾರ್ಯಕ್ರಮ ಶ್ಲಾಘನೀಯ. ಅಖಿಲ ಕರ್ನಾಟಕ ಸೂಫಿ ಸಂತರ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇಸ್ಲಾಂ ಧರ್ಮದ ಗುರು ಹೇಳಿದರು.

ಶ್ರೀಗಳು ಕೊಡಗಿನ ಜನರ ನೆರವಿಗಾಗಿ ಪಾದಯಾತ್ರೆ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಕೈಯಿಂದ ಎಷ್ಟಾಗುತ್ತೋ ಅಷ್ಟು ಸಹಾಯ ಮಾಡಿ ಸಿಖ್ ಸಮುದಾಯದ ಧಾರ್ಮಿಕ ಮುಖಂಡ ತಿಳಿಸಿದರು.
First published:September 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ