ಉತ್ತರ ಕನ್ನಡ: ರಾಜ್ಯದ ಕಬ್ಬಿಣದ ಅದಿರನ್ನು (Iron Ore) ರಫ್ತು (Export) ಮಾಡುವುದಕ್ಕೆ ಇದ್ದ ನಿರ್ಬಂಧಗಳನ್ನು ಸುಪ್ರೀಂಕೋರ್ಟ್ (Supreme Court) ತೆರವುಗೊಳಿಸಿದ ಬೆನ್ನಲ್ಲೇ ಮುಂದಿನ ಮೂರು ತಿಂಗಳೊಳಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ಬಂದರಿಗೆ (Karwar Port) ಅದಿರು ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಅದಾನಿ (Adani) ಸೇರಿದಂತೆ ಪ್ರಮುಖ ಕಂಪನಿಗಳ (Company) ಪ್ರತಿನಿಧಿಗಳು ಈ ಬಂದರಿನ ಮೂಲಕ ರಫ್ತು ಚಟುವಟಿಕೆ ನಡೆಸಲು ಮಾತುಕತೆ ನಡೆಸಿ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಅಂಕೋಲಾ (Ankola) ಬೇಲೆಕೇರಿ (Belekeri) ಬಂದರಿನಲ್ಲಿ ಅದಿರು ವಹಿವಾಟು ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲವೆಂದು ಹೇಳಲಾಗುತ್ತಿದೆ.
ಅದಿರು ರಫ್ತಿನ ಮೇಲಿನ ನಿಷೇಧ ತೆರವು ಮಾಡಿದ ಸುಪ್ರೀಂ ಕೋರ್ಟ್
ಹಿಂದೆ ಕಬ್ಬಿಣದ ಅದಿರನ್ನು ರಾಜ್ಯದ ನವಮಂಗಳೂರು ಬಂದರು, ಬೇಲೇಕೇರಿ ಮತ್ತು ಕಾರವಾರ ಬಂದರು ಗಳಿಂದ ಚೀನ ಮತ್ತಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆಗ ಕರಾವಳಿಗೆ ಸಾವಿರಾರು ಕಬ್ಬಿಣದ ಅದಿರು ಸಾಗಾಟ ಟ್ರಕ್‌ಗಳು ಬಳ್ಳಾರಿ, ಹೊಸಪೇಟೆ ಕಡೆಯಿಂದ ಬರುತ್ತಿದ್ದವು. ಈ ಹಿಂದೆ ರಾಜ್ಯ, ಕೇಂದ್ರ ಸರಕಾರಗಳು ಕಬ್ಬಿಣದ ಅದಿರು ಗಣಿಗಾರಿಕೆಗೆ ನಿಷೇಧ ಹೇರಿದ್ದಷ್ಟೇ ಅಲ್ಲದೆ ಗಣಿಗಾರಿಕೆ ನಡೆಸಲಾಗಿದ್ದ ಅದಿರನ್ನೂ ರಫ್ತು ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ ಸುಪ್ರೀಮ್ ಕೋರ್ಟ್ ನಿರ್ಬಂಧ ತೆರವು ಮಾಡಿದೆ.
ದಾಸ್ತಾನಿನಲ್ಲಿರುವ ಕಬ್ಬಿಣದ ಅದಿರು ರಫ್ತಿಗೆ ಗ್ರೀನ್ ಸಿಗ್ನಲ್
ದಾಸ್ತಾನಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಕಾರವಾರ ಬಂದರು ಮತ್ತೆ ಅದಿರು ಚಟುವಟಿಕೆಗೆ ತೆರೆದುಕೊಳ್ಳಲಿದೆ. ಲಕ್ಷಗಟ್ಟಲೆ ಟನ್ ಅದಿರು ಇನ್ನೂ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿದ್ದು, ಸೂಕ್ತ ಮಾರುಕಟ್ಟೆ ಲಭ್ಯವಾದರೆ ರಫ್ತು ಆರಂಭವಾಗುವ ಸಾಧ್ಯತೆಯಿದೆಯಲ್ಲದೇ ಬಳ್ಳಾರಿಯಿಂದ ರಸ್ತೆ ಮೂಲಕ ಸರಕು ಸ್ವೀಕರಿಸಬಹುದು. ಕಾರವಾರ ಬಂದರಿನಲ್ಲಿ ಅದಿರು ಇಳಿಸಿ ಬಳಿಕ ರಫ್ತು ಮಾಡುವುದಕ್ಕೆ ಅವಕಾಶಗಳಿವೆ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: Rock Garden: ಬಣ್ಣವೂ ಇಲ್ಲ, ನಿರ್ವಹಣೆಯೂ ಇಲ್ಲ! ಸೊರಗುತ್ತಿದೆ ಕಾರವಾರದ ರಾಕ್ ಗಾರ್ಡನ್
ಇನ್ನೂ ಮೂರು ತಿಂಗಳು ಬೇಕಾಗಬಹುದು
ಸುಪ್ರೀಂಕೋರ್ಟ್ ಆದೇಶ ಈಗಷ್ಟೇ ಹೊರಬಿದ್ದಿದೆ. ಅದನ್ನು ಅಧ್ಯಯನ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಈಗಿನ ಮಾಹಿತಿಯ ಅನ್ವಯ ಎಲ್ಲ ಪ್ರಕ್ರಿಯೆ ಮುಗಿದು, ರಫ್ತು ಆರಂಭವಾಗಲು ಇನ್ನು ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಅಂತಾರೆ ಅಧಿಕಾರಿಗಳು
ಕೃಷ್ಣಪಟ್ಟಣಂನತ್ತ ರಫ್ತುದಾರರ ಚಿತ್ತ
ಕಾರವಾರ ಬಂದರಿನಲ್ಲಿ ದೊಡ್ಡ ಹಡಗು ನಿರ್ವಹಣೆ ಅಸಾಧ್ಯ. ಬೆಲೆಕೇರಿಯಲ್ಲಿ ಆಳ ಕಡಿಮೆ ಇರುವುದೇ ಸಮಸ್ಯೆಯಾಗಿದೆ. ಹೀಗಾಗಿ ಇದು ದೊಡ್ಡ ಹಡಗು ಬರುವುದಕ್ಕೆ ಅಡ್ಡಿಯಾಗಬಹುದು ಎನ್ನುತ್ತಾರೆ ಕೆಲವು ರಫ್ತುದಾರರು. ಈ ಅಂಶಗಳನ್ನು ಗಮನಿಸಿದರೆ ರಫ್ತುದಾರರು ಕಾರವಾರ ಸೇರಿದಂತೆ ರಾಜ್ಯದ ಕರಾವಳಿಯ ಬಂದರು ಹೊರತಾಗಿ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರು ಕಡೆಗೆ ಹೋಗುವ ಸಾಧ್ಯತೆ ಅಧಿಕವೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bridge: ಸೇತುವೆ ನಿರ್ಮಾಣವಾದ್ರೂ ತಪ್ಪಿಲ್ಲ ಜನರ ಸಂಕಷ್ಟ, ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟ ಕಷ್ಟ!
ಬೇಲೇಕೇರಿಯಲ್ಲಿ ಸದ್ಯಕ್ಕಿಲ್ಲ ಬಂದರು
ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಬೇಲೆಕೇರಿ ಬಂದರಿನಲ್ಲಿ ಅದಿರು ರಫ್ತು ಚಟುವಟಿಕೆ ಸದ್ಯಕ್ಕೆ ನಡೆಯುವ ಸಾಧ್ಯತೆ ಕಡಿಮೆ. ಅದಿರು ಸಂಬಂಧಿಸಿ ಹೈಕೋರ್ಟ್ ನಲ್ಲಿ ಪ್ರಕರಣ ಬಾಕಿಯಿದೆ. ಅದು ಇತ್ಯರ್ಥವಾಗುವವರೆಗೂ ಬೇಲೆಕೇರಿ ಬಂದರಿನಲ್ಲಿರುವ ಅದಿರು ರಫ್ತು ಮಾಡುವಂತಿಲ್ಲ. ಅಲ್ಲದೇ ಅಕ್ರಮ ಅದಿರು ರಫ್ತು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಬೇಲೆಕೇರಿ ಬಂದರಿನ ಹೊರತಾಗಿ ಬೇರೆ ಬಂದರಿನ ಮೂಲಕ ಕಬ್ಬಿಣದ ಅದಿರು ರಫ್ತು ಚಟುವಟಿಕೆ ನಡೆಯವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ