ಬೆಂಗಳೂರು(ಮೇ 14): ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೊದಲಿಗೆ ನಾಡಿನ ಜನತೆಗೆ ರಂಜಾನ್ ಹಾಗೂ ಬಸವ ಜಯಂತಿಯ ಶುಭಾಶಯಗಳನ್ನು ಹೇಳಿದರು. ರಂಜಾನ್ ಹಾಗೂ ಬಸವ ಜಯಂತಿ ಒಟ್ಟಿಗೆ ಬಂದಿವೆ. ನಿಮಗೆ ಮತ್ತು ನಾಡಿನ ಜನತೆಗೆ ಶುಭಾಶಯಗಳು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ನ ಕೊಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅನೇಕ ಬಾರಿ ಹೇಳಿದ್ದೇವೆ. ನಾವು ಹೇಳುವ ಜೊತೆಗೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೇಂದ್ರ ರಾಜ್ಯ ಸರ್ಕಾರಕ್ಕೆ ಛೀಮಾರಿಯನ್ನು ಹಾಕಿವೆ. ನಾನು ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ಬೇಜವಾಬ್ದಾರಿ ಸರ್ಕಾರವನ್ನು ನೋಡಿಲ್ಲ. ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲು ಈ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜನವರಿ 30ಕ್ಕೆ ಭಾರತಕ್ಕೆ ಕೊರೋನಾ ಕಾಲಿಟ್ಟಿತ್ತು. ಒಂದು ವರ್ಷಕ್ಕಿಂತ ಹೆಚ್ಚಾಗಿದೆ. ಎರಡನೇ ಅಲೆ ಬರುತ್ತೆ ಎಂದು ಮಾಹಿತಿ ಕೂಡಾ ಇದೆ. ಎಲ್ಲಾ ತಜ್ಞರು ಹೇಳುತ್ತಾರೆ ಅಂತಿಮವಾಗಿ ಈ ರೋಗ ಹೋಗಬೇಕು ಅಂದ್ರೆ ವ್ಯಾಕ್ಸಿನ್ ಮಾಡಬೇಕು ಎಂದು. ಇದು ಕೇಂದ್ರ , ರಾಜ್ಯ ಸರ್ಕಾರಕ್ಕೆ ಗೊತ್ತಿತ್ತು. ಆದರೆ ಅಲ್ಲಿ ಮೋದಿ, ಇಲ್ಲಿ ಯಡಿಯೂರಪ್ಪ ನಿದ್ರಾವಸ್ಥೆಯಲ್ಲಿ ಇದ್ದಾರೆ. ನವೆಂಬರ್ನಿಂದ ಸಿದ್ದತೆ ಮಾಡಿಕೊಂಡಿಲ್ಲ. ಈಗ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಚಂಡಮಾರುತಕ್ಕೆ ಸಿಲುಕಿದ್ದ ನೂರಾರು ಆಮೆಗಳ ರಕ್ಷಣೆ; ಅಮೆರಿಕದ ಸ್ವಯಂ ಸೇವಕರಿಂದ ಪುನರ್ಜನ್ಮ ಭಾಗ್ಯ!
ವ್ಯಾಕ್ಸಿನ್ ಬರೋದು ಇನ್ನೂ ತಿಂಗಳುಗಟ್ಟಲೆ ಆಗಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳುತ್ತಾರೆ. ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್(ಕೋವಿಶೀಲ್ಡ್) ಪಡೆಯಲು ಆರು ವಾರಗಳ ಅಂತರ ಇತ್ತು. ಕೋವ್ಯಾಕ್ಸಿನ್ ತೆಗೆದುಕೊಳ್ಳಲು 4 ವಾರಗಳ ಅಂತರ ಇತ್ತು. ಆದರೆ ಈಗ 12 ವಾರ ಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ತೀವ್ರತರವಾದ ಅನುಮಾನ ಶುರುವಾಗಿದೆ. ವ್ಯಾಕ್ಸಿನ್ ತಯಾರು ಮಾಡುವಾಗಲೇ ಸಮಯ ನೀಡಲಾಗಿರುತ್ತೆ. ಮೊದಲ ಡೋಸ್ ಯಾವಾಗ, ಎರಡನೇ ಡೋಸ್ ಯಾವಾಗ ಎಂದು. ಆದರೆ ಇವರು ಮೊದಲು ಒಂದು ರೀತಿ ಹೇಳಿದ್ರು. ಈಗ ಬೇರೆ ರೀತಿ ಹೇಳುತ್ತಿದ್ದಾರೆ. ಸರ್ಕಾರ ಜನರನ್ನ ದಾರಿ ತಪ್ಪಿಸುತ್ತಿದೆ ಎಂದು ಸರ್ಕಾರದ ಯಡವಟ್ಟುಗಳಿಗೆ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದರು.
45-60 ವರ್ಷದವರಿಗೆ ಕೇಂದ್ರ ವ್ಯಾಕ್ಸಿನ್ ಹಂಚಿಕೆ ಮಾಡುತ್ತೇನೆ ಎಂದಿದೆ. 18ರಿಂದ 45 ವರ್ಷದವರಿಗೆ ರಾಜ್ಯ ಸರ್ಕಾರಗಳು ಭರಿಸಬೇಕು. ಕೇಂದ್ರ ಸರ್ಕಾರವೇ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು. 138 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ರಾಜ್ಯದಲ್ಲಿ 18ರಿಂದ 45 ವರ್ಷದವರು ಹೆಚ್ಚಿದ್ದಾರೆ. 3 ಕೋಟಿ 20 ಲಕ್ಷ ಜನ ಈ ವಯೋಮಾನದವರಿದ್ದಾರೆ. ಕೇಂದ್ರ ಸರ್ಕಾರ ಅಕ್ಟೋಬರ್ ನಲ್ಲೇ ಲಸಿಕೆಗೆ ಸಿದ್ಧತೆ ಮಾಡಬೇಕಿತ್ತು. ಆಗ ಅವರು ಮಾಡಿಕೊಂಡಿದ್ದರೆ ಈಗ ಸಮಸ್ಯೆ ಬರ್ತಿರಲಿಲ್ಲ. ನಾಮಕಾವಸ್ಥೆಗೆ ಟೆಂಡರ್ ಕರೆದರು, ಸುಮ್ಮನಾದ್ರು. ಹೈಕೋರ್ಟ್ 1 ಪರ್ಸೆಂಟ್ ಹಾಕಿಲ್ಲ ಎಂದು ಗರಂ ಆಗಿದೆ. ರಾಜ್ಯ ಸರ್ಕಾರವೂ ಲಸಿಕೆ ವ್ಯವಸ್ಥೆ ಮಾಡಲಿಲ್ಲ. ಈ ಸರ್ಕಾರ ಜನರನ್ನು ರಕ್ಷಣೆ ಮಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
225 ಎಂಎಲ್ಎ, 75 ಎಂಎಲ್ ಸಿಗಳಿಗೆ 2 ಕೋಟಿ ಬರುತ್ತೆ. ಏರಿಯಾ ಡೆವಲಪ್ ಮೆಂಟ್ ಹಣ ಕೊಡ್ತಾರೆ. ನಮ್ಮ 100 ಜನಪ್ರತಿನಿಧಿಗಳು ಡಿಸೈಡ್ ಮಾಡಿದ್ದೇವೆ. ಪ್ರತಿಯೊಬ್ಬರೂ 1 ಕೋಟಿಯನ್ನ ವ್ಯಾಕ್ಸಿನ್ ಗೆ ನೀಡ್ತೇವೆ. 100 ಕೋಟಿಗಳನ್ನು ಲಸಿಕೆ ಖರೀದಿಗೆ ಕೊಡ್ತೇವೆ. ನಮ್ಮ ಪಕ್ಷದ ಜನಪ್ರತಿನಿಧಿಗಳಿಗೆ ನಾವು ಸೂಚಿಸಿದ್ದೇವೆ. ಇದು ನಮ್ಮಕಾಂಗ್ರೆಸ್ ಪಕ್ಷದ ನಿರ್ಧಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಟೆಸ್ಟ್ ಮಾಡೋದನ್ನೇ ಕೆಲವು ಕಡೆ ನಿಲ್ಲಿಸಿದ್ದಾರೆ. ರೋಗ ಲಕ್ಷಣ ಇರುವವರಿಗೆ ಮಾತ್ರ ಟೆಸ್ಟ್ ಮಾಡ್ತಿದ್ದಾರೆ. ಇದು ಸರಿಯಲ್ಲ, ಎಲ್ಲರ ಟೆಸ್ಟ್ ಮಾಡಬೇಕು. ಟೆಸ್ಟ್ ಹೆಚ್ಚು ಮಾಡಿದರೆ ಮಾತ್ರ ಪತ್ತೆ ಸಾಧ್ಯ ಎಂದರು.
ಜನರಿಗೆ 10 ಕೆ.ಜಿ.ಅಕ್ಕಿ ಕೊಡಬೇಕು. ಈಗ ಕೇಂದ್ರ ಸರ್ಕಾರ 5 ಕೆ.ಜಿ ಕೊಡ್ತಿದೆ ಅದರ ಜೊತೆ 10 ಕೆ.ಜಿ ಅಕ್ಕಿ ಕೊಡಬೇಕು. ಇಂದಿರಾ ಕ್ಯಾಂಟೀನ್ ಗೆ ನಿರ್ಬಂಧ ಯಾಕೆ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ