‘ಕಾಂಗ್ರೆಸ್ಸಿಗೆ ಆಡಳಿತ ನಡೆಸಿ ಸಾಕಾಗಿದೆ, ಈಗ ಬಿಜೆಪಿ ಸರದಿ ಮುಂದುವರೆಸಿ‘: ಮಾಜಿ ಸಿಎಂ ಸಿದ್ದರಾಮಯ್ಯ

ಇನ್ನು, ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಚುನಾವಣೆಗೆ ನಿಲ್ಲಬಾರದು ಎಂದುಕೊಳ್ಳುತ್ತೇನೆ. ಆದರೆ, ಅಷ್ಟೊತ್ತಿಗೆ ಯಾವುದಾದರೂ ಒಂದು ರಾಜಕೀಯ ಬೆಳವಣಿಗೆ ನಡೆಯುತ್ತೆ. ಆಗ ಹೈಕಮಾಂಡ್​​ ಒತ್ತಡ ಮೇರೆಗೆ ನಿಲ್ಲಲೇಬೇಕಾಗುತ್ತದೆ ಎಂದು ತಪರಾಕಿ ಬಾರಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬೆಂಗಳೂರು(ಮಾ.19): "ನಮಗೆ ಆಡಳಿತ ನಡೆಸಿ ಸಾಕಾಗಿದೆ, ನೀವು ಮುಂದುವರೆಸಿ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಹೇಳಿದ್ದಾರೆ. ಇಂದು ಸದನದಲ್ಲಿ ಬಜೆಟ್​​ ಮಂಡನೆ ವೇಳೆ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ಸಿಗರಿಗೆ ಆಡಳಿತ ನಡೆಸಿ ಸಾಕಾಗೋಗಿದೆ. ಇದೀಗ ನಿಮ್ಮ ಸರದಿ, ಆಡಳಿತ ಮುಂದುವರೆಸಿ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪಗೆ ತಿಳಿಸಿದರು.

  ಮಾಜಿ ಸಿಎಂ ಸಿದ್ದರಾಮಯ್ಯನವರ ಭಾಷಣದ ವೇಳೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಸಚಿವ ಕೆ.ಎಸ್​ ಈಶ್ವರಪ್ಪ ಸಿದ್ದರಾಮಯ್ಯರನ್ನು ಕಾಲೆಳೆಯುವ ಪ್ರಯತ್ನ ಮಾಡಿದ ರೀತಿ ಇಡೀ ಸದನವನ್ನು ನಗೆಯಲ್ಲಿ ತೇಲಿಸಿತ್ತು. ಸಿದ್ದರಾಮಯ್ಯ ಆಗ್ಗಾಗ ಚುನಾವಣಾ ನಿವೃತ್ತಿ ಘೋಷಿಸಿದರೂ ಮತ್ತೆ ಮತ್ತೆ ಎಲೆಕ್ಷನ್​​ನಲ್ಲಿ ನಿಲ್ಲುತ್ತಾರೆ, ಇದೆಂಥಾ ಧೋರಣೆ ನಿಮ್ಮದು? ಎಂದು ಈಶ್ವರಪ್ಪ ಹಳೆಯ ವಿಷಯ ಕೆದಕಿದರು.

  ಇನ್ನು, ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಚುನಾವಣೆಗೆ ನಿಲ್ಲಬಾರದು ಎಂದುಕೊಳ್ಳುತ್ತೇನೆ. ಆದರೆ, ಅಷ್ಟೊತ್ತಿಗೆ ಯಾವುದಾದರೂ ಒಂದು ರಾಜಕೀಯ ಬೆಳವಣಿಗೆ ನಡೆಯುತ್ತೆ. ಆಗ ಹೈಕಮಾಂಡ್​​ ಒತ್ತಡ ಮೇರೆಗೆ ನಿಲ್ಲಲೇಬೇಕಾಗುತ್ತದೆ ಎಂದು ತಪರಾಕಿ ಬಾರಿಸಿದರು.

  ಇದನ್ನೂ ಓದಿ: ಕೊರೋನಾ ಭೀತಿ: ಅಂತಾರಾಷ್ಟ್ರೀಯ ವಿಮಾನಗಳು ಒಂದು ವಾರ ಭಾರತದಲ್ಲಿ ಲ್ಯಾಂಡ್​ ಆಗುವಂತಿಲ್ಲ; ಕೇಂದ್ರ ಸರ್ಕಾರ ಆದೇಶ

  ಎಸ್​​ಸಿ ಮತ್ತು ಎಸ್​​ಟಿ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದರು ಸಿದ್ದರಾಮಯ್ಯ. ಇದಕ್ಕೆ ದನಿಗೂಡಿಸಿದ ಈಶ್ವರಪ್ಪ, ಈ ತನಿಖೆಗೆ ನಮ್ಮ ಆಕ್ಷೇಪ ಇಲ್ಲ. ಇಲ್ಲವಾದರೆ ಕೇವಲ ಚಟಕ್ಕೋಸ್ಕರ ಭಾಷಣ ಮಾಡಿದಂತಾಗುತ್ತದೆ. ಹೀಗಾಗಿ ನಾನು ವೈಯ್ಯಕ್ತಿಕವಾಗಿ ಲ್ಯಾಪ್​​ಟಾಪ್ ಖರೀದಿ ಅಕ್ರಮದ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

  ಇನ್ನು, ಮಹದಾಯಿಗೆ 500 ಕೋಟಿ ರೂಪಾಯಿ ನೀಡಿದ್ದೀರಾ. ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಕೆಲಸ ಮಾಡಬೇಕು. ನಾನು ಸಾಲಮನ್ನಾ ಮಾಡಿದಾಗ ಯಾವುದೇ ನಿಬಂಧನೆಗಳಿರಲಿಲ್ಲ. ಎಚ್.ಡಿ ಕುಮಾರಸ್ವಾಮಿ ಸಾಲಮನ್ನಾ ಯೋಜನೆಯಡಿ ಸಹಕಾರ ಬ್ಯಾಂಕ್​​ಗಳ 1,60,000 ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ. ಅವುಗಳನ್ನು ಮಾತ್ರ ಇತ್ಯರ್ಥ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

  ಹೀಗೆ ಮಾತು ಮುಂದುವರಿಸಿದ ಅವರು, ರಾಷ್ಟ್ರೀಯ ಬ್ಯಾಂಕ್​​ಗಳ ವ್ಯಾಪ್ತಿಯಲ್ಲಿ 35,000 ಅರ್ಜಿಗಳು ವಿಲೇವಾರಿ ಆಗಿಲ್ಲ. ಅದನ್ನೂ ಇತ್ಯರ್ಥ ಪಡಿಸಬೇಕು. ಮೇಕೆದಾಟು ಯೋಜನೆಗಿರುವ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಬಾದಾಮಿ ಕ್ಷೇತ್ರದಲ್ಲಿ 525 ಕೋಟಿ ರೂ. ಯೋಜನೆಯ ಪ್ರಸ್ತಾಪ ಇತ್ತು. ಅದನ್ನು ಬಜೆಟ್​​ನಲ್ಲಿ ಪ್ರಸ್ತಾಪಿಸಿಲ್ಲ. ವಲಯವಾರು ಬಜೆಟ್ ಮಂಡನೆಯಿಂದ ಪಾರದರ್ಶಕತೆಯಿಂದ ಕೂಡಿಲ್ಲ. ಬಜೆಟ್ ಗೌಪ್ಯವಾಗಿದೆ. ಇದು ನಿರಾಶಾದಾಯಕವಾದ ಬಜೆಟ್. ಯಾವುದೇ ವರ್ಗದ ಜನರಿಗೆ ನ್ಯಾಯ ಕೊಟ್ಟಿಲ್ಲ. ಇದು ಅಭಿವೃದ್ಧಿ ಪೂರಕವಾದ ಬಜೆಟ್ ಅಲ್ಲ. ಈ ಆಯವ್ಯಯವನ್ನು ಒಪ್ಪಬೇಕಾದರೆ, ಯಾವುದೇ ಕಾರ್ಯಕ್ರಮ ನಿಲ್ಲಿಸಬಾರದು ಎಂದು ಕುಟುಕಿದರು.
  First published: