ರಾಯಚೂರು (ಜ. 12): ಇವತ್ತಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ. ನಾವೆಲ್ಲಾ ಶೂದ್ರರು, ನಾವು ಸ್ವಾಭಿಮಾನಿಗಳಾಗಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಾವು ಶಿಕ್ಷಣ ಪಡೆಯಬೇಕು. ಹೀಗಾದಾಗ ಮಾತ್ರ ನಾವು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ. ನಾನು ಯಾರಿಗೂ ಸಲಾಂ ಹೊಡೆಯದೇ 40 ವರ್ಷಗಳಿಂದ ರಾಜಕೀಯದಲ್ಲಿದ್ದೀನಿ. ದೇವರಾಜು ಅರಸು ನಂತರ ಯಶಸ್ವಿ 5 ವರ್ಷ ಮುಖ್ಯಮಂತ್ರಿಯಾಗಿದ್ದೀನಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಿಮ್ಮೆಲ್ಲರ ಗೌರವವನ್ನ ಎತ್ತಿ ಹಿಡಿದಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿರುವ "ಹಾಲುಮತ ಸಂಸ್ಕೃತಿ ವೈಭವ" ಉತ್ಸವಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಕನಕದಾಸರ ಜಯಂತಿಯನ್ನೇ ಮಾಡುತ್ತಿರಲಿಲ್ಲ. ನಾನು ಕನಕದಾಸರ 500ನೇ ಜಯಂತ್ಯೋತ್ಸವವನ್ನ ಮಾಡಿದೆ. ಇವತ್ತು ಕುರುಬರು ಕರ್ನಾಟಕದಲ್ಲಿ ಒಟ್ಟಾಗಿರಲು 500ನೇ ಜಯಂತ್ಸೋತ್ಸವವೇ ಕಾರಣ. ಇದಾದ ಬಳಿಕವೇ ಕನಕಗುರುಪೀಠ ಸ್ಥಾಪನೆಯಾಗಿದ್ದು ಎಂದರು.
ನನ್ನ ವಿರುದ್ಧ ಅಪಪ್ರಚಾರ:
ಇವತ್ತು ಬಹಳ ಜನ ನನ್ನ ಮೇಲೆ ಅಪ ಪ್ರಚಾರ ಮಾಡುತ್ತಿದ್ದಾರೆ. ಬೀದರ್, ಗುಲ್ಬರ್, ಯಾದಗಿರಿ ಹಾಗೂ ಕೊಡಗು ಜಿಲ್ಲೆಯ ಕುರುಬರನ್ನು ಎಸ್ಟಿಗೆ ಸೇರಿಸಲು ಎರಡು ಬಾರಿ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸಿದೆ. ಐದು ವರ್ಷಗಳಿಂದ ಆ ಶಿಫಾರಸ್ಸು ಬಾಕಿ ಉಳಿದಿದೆ. ಆದರೂ ಕೇಂದ್ರ ಸರ್ಕಾರ ಆ ಫೈಲ್ ಅನ್ನು ನೋಡಿಲ್ಲ. ಇವತ್ತು ಹೋರಾಟ ಮಾಡ್ತಿರುವವರು ಯಾರಾದರೂ ಅವತ್ತು ಮಾತನಾಡಿದ್ದರಾ ಎಂದು ಪ್ರಶ್ನಿಸಿದರು.
ಕುಲಶಾಸ್ತ್ರಿಯ ಅಧ್ಯಯನವಿಲ್ಲದೇ ಮೀಸಲಾತಿ?
ಕುಲಶಾಸ್ತ್ರೀಯ ಅಧ್ಯಯನ ಇಲ್ಲದೇ ಯಾವುದೇ ಸಮುದಾಯವನ್ನ ಎಸ್ಟಿಗೆ ಸೇರಿಸಲು ಸಾಧ್ಯವಿಲ್ಲ. ಮೊದಲು ಕುಲಶಾಸ್ತ್ರೀಯ ಅಧ್ಯಯನ ಮುಗಿಯಬೇಕು. ಹಾಗಾದಾಗ ಮಾತ್ರ ಹೋರಾಟಕ್ಕೆ ಅರ್ಥ ಬರುತ್ತದೆ. ಇದುವರೆಗೂ ಯಾಕೆ ಕುಲಶಾಸ್ತ್ರೀಯ ಅಧ್ಯಯನವನ್ನ ಪೂರ್ಣಗೊಳಿಸಲಿಲ್ಲ. ಯಾರು ಮೀಸಲಾತಿಗೆ ವಿರೋಧಿಸಿದವರು ಈಗ ಪಾಠ ಮಾಡುತ್ತಾರೆ. ನಾನು ಯಾವತ್ತೂ ಕುರುಬರನ್ನು ಎಸ್ಟಿ ಗೆ ಸೇರಿಸಲು ವಿರೋಧ ಮಾಡಿಲ್ಲ. ಅದನ್ನ ನಿಯಮಾವಳಿ ಪ್ರಕಾರ ಮಾಡಿ ಎನ್ನುತ್ತಿದ್ದೇನೆ. ಅದನ್ನು ಮಾಡೋದಕ್ಕೆ ಧಮ್ ಇಲ್ಲ ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರು.
ನೀವೇ ನನ್ನ ದೇವರು:
ನಾನು ಯಾವತ್ತೂ ಅಧಿಕಾರಕ್ಕಾಗಿ ರಾಜಕೀಯ ಮಾಡುವವನಲ್ಲ. ನಿಮಗೋಸ್ಕರ ನಾನು ಇರುವುದು. ಬಿಜೆಪಿಯವರು ಪ್ರಧಾನಿ ಮಾಡುತ್ತೇನೆ ಎಂದರೂ ನಾನು ಬಿಜೆಪಿಗೆ ಹೋಗುವವನಲ್ಲ. ಅಧಿಕಾರವಿರಲಿ, ಇಲ್ಲದಿದ್ದರೆ ನಾನು ಸಾಮಾಜಿಕ ಪರವಾಗಿದ್ದವನು.
ರಾಜಕೀಯದಲ್ಲಿ ಹೆದರಿಕೊಂಡು, ಯಾರಿಗೂ ಬಗ್ಗಿ ರಾಜಕೀಯ ಮಾಡಿಲ್ಲ. ನಾನು ಹುಬ್ಬಳ್ಳಿಯಲ್ಲಿ ಅಹಿಂದ ಮಾಡಿದಾಗ ದೇವೇಗೌಡರು ಬೇಡ. ಮಂತ್ರಿ ಸ್ಥಾನ ಕಳೆದುಕೊಳ್ಳುತ್ತಿಯಾ ಎಂದರು. ಆದರೂ ನಾನು ಜನರಿಗಾಗಿ ಅಹಿಂದ ಸಮಾವೇಶ ಮಾಡಿದೆ. ಆಗ ನನ್ನ ಪಕ್ಷದಿಂದ ಹೊರಗೆ ಹಾಕಿದರು. ಕೊನೆ ತನಕ ನಾನು ಸ್ವಾಭಿಮಾನದಿಂದಲೇ ಬದುಕುತ್ತೇನೆ. ಎಲ್ಲಿಯವರೆಗೆ ನಿಮ್ಮ ರಕ್ಷಣೆ ಇರುತ್ತದೆ. ಅಲ್ಲಿಯವೆಗೆ ಯಾರೂ ನನ್ನ ಏನೂ ಮಾಡುವುದಕ್ಕೆ ಆಗುವುದಿಲ್ಲ. ಡಾ ರಾಜಕುಮಾರ್ ಹೇಳಿದಂತೆ ನೀವೇ ನನ್ನ ದೇವರು ಎಂದರು.
ಜನಜಾತ್ರೆಯಾದ ಹಾಲುಮತ ಸಂಸ್ಕೃತಿ ಉತ್ಸವ
ಸಿದ್ದರಾಮಯ್ಯ ವೇದಿಕೆಯಲ್ಲಿದ್ದಾಗ ಅವರನ್ನು ಕಾಣಲು ಜನರು ವೇದಿಕೆ ಮೇಲೆ ಮುಗಿ ಬಿದ್ದರು. ಈ ವೇಳೆ ಕೊರೋನಾ ನಿಯಮಾವಳಿ ಪಾಲನೆ ಗಾಳಿ ತೂರಲಾಯಿತು. ಸಾಮಾಜಿಕ ಅಂತರವಿಲ್ಲದೇ ಜನರು ಭಾಗಿಯಾಗಿದ್ದರು. ಉತ್ಸವ ಉದ್ಘಾಟನಾ ಸಮಾರಂಭ ಕಾಂಗ್ರೆಸ್ ಕಾರ್ಯಕ್ರಮವಾದಂತೆ ಕಂಡು ಬಂದಿತು. ವೇದಿಕೆಯಲ್ಲಿದ್ದವರು ಬಹುತೇಕ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರು ಹಾಗೂ ಈಶ್ವರಪ್ಪ ಬಗ್ಗೆ ಟೀಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ