• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Nandini Products: ಬ್ಯಾಂಕ್‌ಗಳನ್ನು ತಿಂದು ಮುಕ್ಕಿದ್ದಾಯಿತು, ಈಗ ‘ನಂದಿನಿ’ಯ ಆಪೋಶನಕ್ಕೆ ಮುಂದಾಗಿದ್ದಾರೆ! ಸಿಡಿದ ಸಿದ್ದರಾಮಯ್ಯ

Nandini Products: ಬ್ಯಾಂಕ್‌ಗಳನ್ನು ತಿಂದು ಮುಕ್ಕಿದ್ದಾಯಿತು, ಈಗ ‘ನಂದಿನಿ’ಯ ಆಪೋಶನಕ್ಕೆ ಮುಂದಾಗಿದ್ದಾರೆ! ಸಿಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore, India
 • Share this:

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಹಾಲು ಉತ್ಪನ್ನ ಸಂಸ್ಥೆ (KMF) ನಂದಿನಿಯ ಹಾಲು, (Nandini Milk Products) ಮೊಸರು ಸೇರಿದಂತೆ ಇನ್ನಿತರ ವಸ್ತುಗಳ ಮಾರುಕಟ್ಟೆಯಲ್ಲಿ ಸಿಗದೇ ಗುಜರಾತ್ ಮೂಲದ ಅಮೂಲ್‌ (Amul) ಸಂಸ್ಥೆಯ ಉತ್ಪನ್ನಗಳೇ ಹೆಚ್ಚಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಇದರ ವಿರುದ್ಧ ಧ್ವನಿಯೆತ್ತಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ...!! ಎಂದು ಸಂದೇಶ ರವಾನಿಸಿದ್ದಾರೆ.


ಇದನ್ನೂ ಓದಿ: Curd: ಇನ್ಮೇಲೆ ಕರ್ನಾಟಕದಲ್ಲಿ ದಹಿ ಸಿಗಲ್ಲ, ಬರೀ ಮೊಸರು ಮಾತ್ರ!


ನಂದಿನಿ ಉತ್ಪನ್ನ ಮಾಯವಾಗಿ ಅಮೂಲ್ ಬರುತ್ತಿದೆ


ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ  ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ ಎಂದು ಪ್ರಸ್ತುತ ಸ್ಥಿತಿಯನ್ನು ಸಿದ್ದರಾಮಯ್ಯ ಹೇಳಿದ್ದಾರೆ.


ಅನೇಕ ಕಡೆ ಕಡಿಮೆ ಹಾಲು ಉತ್ಪನ್ನ ಆಗ್ತಿದೆ!


ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ ಎಂದಿರುವ ಸಿದ್ದರಾಮಯ್ಯ, ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ, ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್‌ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.


ನಮ್ಮ ಸರ್ಕಾರ ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿದ್ದೆವು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣ ಏನು ಎಂದು ಬಿಜೆಪಿಯನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರವು ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ 2020 -21 ರಲ್ಲಿ 1186 ಕೋಟಿ ಖರ್ಚು ಮಾಡಿದ್ದರೆ, 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: Hindi Imposition: ನಂದಿನಿ ಕನ್ನಡಿಗರ ಸ್ವಾಭಿಮಾನ; ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಹೆಚ್​​ಡಿಕೆ


ಇನ್ನು, ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ನಾಡಿನ ರೈತರು, ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್‌ನ ಕಬಳಿಕೆಯ ವಿರುದ್ಧ ಕನ್ನಡಿಗರೆಲ್ಲರೂ ಒಮ್ಮತದಿಂದ ವಿರೋಧಿಸಬೇಕಾಗುತ್ತದೆ. ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಕನ್ನಡಿಗರೆಲ್ಲರೂ ಪ್ರತಿಜ್ಞೆ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹಸಚಿವರಾದ ಅಮಿತ್‌ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹದ ಚಿಂತನೆಯನ್ನು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

top videos
  First published: