ಉಡುಪಿ: ಕರಾವಳಿ ಹಿಂದುತ್ವದ (Hindutva) ಲ್ಯಾಬೋರೇಟರಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಉಡುಪಿಯಲ್ಲಿ (Udupi) ನಡೆದ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು, ಮನುವಾದ ಮಾಡುವವರನ್ನು ಕಂಡರೆ ಕೋಪ ಬರುತ್ತೆ. ನಾವು ಮನುಷ್ಯರನ್ನು ಪ್ರೀತಿಸುವ ಜನ. ಹಿಂದೂ ಕ್ರೈಸ್ತ ಮುಸ್ಲಿಂ ಯಾವ ಧರ್ಮದ ಮನುಷ್ಯರಿದ್ದರೂ ಪ್ರೀತಿಸುತ್ತೇವೆ ಎಂದು ಹೇಳಿದರು.
'ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು'
ಕರಾವಳಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು. ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದ ಹುಟ್ಟು ಹಾಕಿದವರೇ ಸಾವರ್ಕರ್. ಹಿಂದೂ ಬೇರೆ ಹಿಂದುತ್ವ ಬೇರೆ. ಭಯೋತ್ಪಾದನೆ ಯಾರು ಮಾಡಿದರು ತಪ್ಪು. ಭಯೋತ್ಪಾದನೆಯನ್ನು ನಾವು ಯಾವತ್ತೂ ಖಂಡಿಸುತ್ತೇವೆ. ಭಯೋತ್ಪಾದಕರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Siddaramaiah: ಮಹಿಳೆಯರನ್ನು ಅಡಿಯಾಳಾಗಿ ನೋಡುವ ಮನುಸ್ಮೃತಿ ಮೇಲೆ ಬಿಜೆಪಿಗೆ ಒಲವು! ಸಿದ್ದರಾಮಯ್ಯ ಆರೋಪ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಅವರಿಗೆ ಅಭಿವೃದ್ಧಿ, ಬಡವರ ಕಾರ್ಯಕ್ರಮದ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿಯಿಂದ ಕರಾವಳಿ, ಕರ್ನಾಟಕ, ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನಕ್ಕೆ ಅರ್ಥ ಆಗಿದೆ ಎಂದು ಕಿಡಿಕಾರಿದರು.
'ಮೋದಿಗೆ ಕರ್ನಾಟಕ ಗೆಲ್ಲಲು ಸಾಧ್ಯವಿಲ್ಲ'
ಇನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಸರ್ವಾಧಿಕಾರಿಗೆ ಹೋಲಿಸಿದ ಸಿದ್ದರಾಮಯ್ಯ, ಹಿಟ್ಲರ್ ಸ್ವಲ್ಪ ದಿನ ಮೆರೆದ, ಆಮೇಲೆ ಏನಾಯ್ತು? ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ? ಸ್ವಲ್ಪ ದಿನ ಮೆರೆಯುತ್ತಾರೆ, ಆಮೇಲೆ ಹಿಡಿಲೇಬೇಕು. ಜನ ಬುದ್ಧಿ ಕಳಿಸುತ್ತಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ರಾಜ್ಯಕ್ಕೆ ಬರಬಹುದು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅದು ಅಸಾಧ್ಯ. ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾಸ್ಟರ್ ಪ್ಲಾನ್, ಸಿದ್ದು ಸೋಲಿಸಲು &ದಲಿತಾಸ್ತ್ರ& ಪ್ರಯೋಗ!
ಇನ್ನು ಆಪರೇಷನ್ ಕಮಲದ ಬಗ್ಗೆಯೂ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಬಾಯಲ್ಲಿ ಹೇಳಿದ್ದೆಲ್ಲ ಆಗಿ ಬಿಡಲು ಸಾಧ್ಯವೇ? ವೆಸ್ಟ್ ಬೆಂಗಾಲಿಗೆ ಅಮಿತ್ ಶಾ ಎಷ್ಟು ಬಾರಿ ಹೋದರು ಅಲ್ಲಿ ಏನಾಯ್ತು? ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಯಿತಾ? ಕರ್ನಾಟಕಕ್ಕೆ ಬಂದರೂ ಅಮಿತ್ ಶಾಗೆ ಅದೇ ಗತಿ ಎಂದರು.
'ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ವಾ?'
ಡಿ ಪಾರ್ಟಿ ಎಸ್ ಪಾರ್ಟಿ ಎಂಬ ಆರ್. ಅಶೋಕ್ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಎಸ್ ಪಾರ್ಟಿ ಡೀ ಪಾರ್ಟಿ ಇದೆಲ್ಲಾ ಸುಮ್ಮನೆ ಹುಟ್ಟು ಹಾಕಿದ ಸುಳ್ಳು. ಶಾಸಕರಿಗೆ 500 - 600 ಕೋಟಿ ಕೊಡೋದು ಎಂದರೆ ನಂಬಲು ಸಾಧ್ಯವಿಲ್ಲ. ಆರೋಪಗಳನ್ನು ನಂಬಲು ಸಾಧ್ಯವಿಲ್ಲ. ಇದೆಲ್ಲ ಸುಳ್ಳು. ಬರಿ ಸುಳ್ಳು. ಆರ್ ಅಶೋಕ್ ಹೇಳಿಬಿಟ್ಟ ಕೂಡಲೆ ಗುಂಪುಗಾರಿಕೆ ಆಗಲು ಸಾಧ್ಯವೇ? ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
'ಮುಂದಿನ ಚುನಾವಣೆಯಲ್ಲಿ ಕನಿಷ್ಠ 130 ಸ್ಥಾನ ಗೆಲ್ಲುತ್ತೀವಿ'
ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 130, ಗರಿಷ್ಠ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದ ಸಿದ್ದರಾಮಯ್ಯ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ. ಕರಾವಳಿಯಲ್ಲಿ ಹೋದ ಸಲ ಉಡುಪಿಯಲ್ಲಿ ಒಂದು ಸ್ಥಾನವೂ ಗೆದ್ದಿರಲಿಲ್ಲ. ಈ ಬಾರಿ ಎರಡು ಅಥವಾ ಮೂರು ಸ್ಥಾನ ಗೆಲ್ಲುತ್ತೇವೆ. ದಕ್ಷಿಣ ಕನ್ನಡದಲ್ಲಿ ಎಂಟು ಕ್ಷೇತ್ರ ಇದೆ. ಐದು ಆದರೂ ಗೆಲ್ಲುತ್ತೇವೆ. ಹಿಂದೆ ದಕ್ಷಿಣ ಕನ್ನಡದಲ್ಲಿ ಏಳು ಗೆದ್ದಿದ್ದೆವು ಗೊತ್ತಾ? ಎಂದು ಪ್ರಶ್ನಿಸಿದರು. ಜೊತೆಗೆ ನಾನು ಕೋಲಾರದಿಂದಲೇ ಸ್ಪರ್ಧೆ ಎಂದು ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತಾರೆ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ