• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ತೇಜಸ್ವಿ ಸೂರ್ಯನನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಸಿದ್ದರಾಮಯ್ಯ ವ್ಯಂಗ್ಯ

Siddaramaiah: ತೇಜಸ್ವಿ ಸೂರ್ಯನನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಸಿದ್ದರಾಮಯ್ಯ ವ್ಯಂಗ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

ಕೊರೊನಾ ಕಾಲದಲ್ಲಿ ಖರೀದಿ ಮಾಡಿರುವ ವಸ್ತುಗಳಲ್ಲಿ ಭ್ರಷ್ಟಾಚಾರ ಮಾಡಿ ಸುಮಾರು 2,000 ಕೋಟಿ ಲಂಚ ತಿಂದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಜನರಿಗೆ ಆಸ್ಪತ್ರೆ, ಬೆಡ್‌, ಔಷಧಿ, ಆಕ್ಸಿಜನ್‌ ಕೊಡಲಾಗದೆ ಲಕ್ಷಾಂತರ ಜೀವಗಳ ಬಲಿ ಪಡೆದರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮುಂದೆ ಓದಿ ...
  • Share this:

ಕಲಬುರಗಿ: ತೇಜಸ್ವಿ ಸೂರ್ಯನನ್ನು (Tejaswi Surya) ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದ್ದಾರೆ. ಕಲಬುರಗಿ (Kalaburgi)ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ (Prajadhwani Yatra) ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ, ಇದಕ್ಕಾಗಿ ರೈತರ ಸಾಲ ಮನ್ನಾ ಮಾಡಬಾರದು ಎಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಂಡವಾಳಶಾಹಿಗಳು, ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದ ದೇಶಕ್ಕೆ ಲಾಭವಾಗಿದೆಯಾ? ಒಂದು ರಾಷ್ಟ್ರೀಯ ಪಕ್ಷದ ಯುವಮೋರ್ಚ ಅಧ್ಯಕ್ಷರಾಗಿ ಇಂಥಾ ಮಾತು ಹೇಳುತ್ತಾರೆ ಎಂದರೆ ಅವರನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಇದು ಅವರ ವೈಯಕ್ತಿಕ ಅಭಿಪ್ರಾಯವಲ್ಲ, ಬಿಜೆಪಿ ಪಕ್ಷದ ಆಂತರಿಕ ಅಭಿಪ್ರಾಯ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಯುಪಿಎ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರು 72,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ರು. ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ ಎಂದ ಸಿದ್ದರಾಮಯ್ಯ, ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಹೇಳಿರಲಿಲ್ಲ. ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಲಮನ್ನಾ ಮಾಡಿದ್ದೆ. ರೈತರ ಮಗ, ರೈತ ಹೋರಾಟಗಾರ ಎಂದು ಕರೆದುಕೊಳ್ಳುವ ಯಡಿಯೂರಪ್ಪ ಅವರಿಗೆ ಸಾಲಮನ್ನಾ ಮಾಡಿ ಎಂದು ಉಗ್ರಪ್ಪನವರು ಸದನದಲ್ಲಿ ಒತ್ತಾಯಿಸಿದ್ದಕ್ಕೆ ನಮ್ಮ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್ ಇಲ್ಲ ಎಂದಿದ್ದರು ಎಂದು ನೆನಪಿಸಿಕೊಂಡರು.


ಇದನ್ನೂ ಓದಿ: Siddaramaiah: ‘ನಾಯಿ ಕಾದಿತ್ತು, ಅನ್ನ ಹಳಸಿತ್ತು’ ಗಾದೆ ತರ ಬಿಜೆಪಿಯವರು ಒಬ್ಬೊಬ್ಬ ಶಾಸಕರನ್ನು 15-20 ಕೋಟಿ ನೀಡಿ ಖರೀದಿಸಿದ್ರು: ಸಿದ್ದರಾಮಯ್ಯ


ಇನ್ನು, 2017ರಲ್ಲಿ ಮೋದಿ ಅವರು 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದರು. 2023 ಬಂದಿದೆ, ಆದಾಯ ದುಪ್ಪಟ್ಟಾಗಿದೆಯಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಗೊಬ್ಬರ, ಬೀಜ, ರಾಸಾಯನಿಕ ಔಷಧಗಳ ಬೆಲೆ, ರೈತರ ಸಾಲ ದುಪ್ಪಟ್ಟಾಗಿದೆಯೇ ವಿನಃ ಆದಾಯ ದುಪ್ಪಟ್ಟಾಗಿಲ್ಲ. ಮೋದಿ ಅವರು ಈ ರೀತಿ ನಾಡಿನ ರೈತರಿಗೆ ಮೋಸ ಮಾಡಿದ್ದಾರೆ. ಕಲಬುರಗಿ ಭಾಗದ ತೊಗರಿ ಬೆಳೆಗೆ ನೆಟೆ ರೋಗ ಬಂದು ಸುಮಾರು 70% ಬೆಳೆ ನಷ್ಟವಾಗಿದೆ. ಸದನದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರನ್ನು ಕಲಬುರಗಿ, ಬೀದರ್‌, ಯಾದಗಿರಿಗೆ ಹೋಗಿ ರೈತರ ಕಷ್ಟ ಕೇಳಿದೇನ್ಯಪ್ಪ ಎಂದು ಪ್ರಶ್ನೆ ಮಾಡಿದರೆ ನನಗೆ ಖಾಯಿಲೆ ಬಂದಿತ್ತು, ಹೋಗಿಲ್ಲ ಎಂದು ಉತ್ತರಿಸಿದ್ರು. ಜನರ ಕಷ್ಟ ಕೇಳಲು ಆಗದಿದ್ರೆ ರಾಜೀನಾಮೆ ಕೊಟ್ಟುಬಿಡಪ್ಪ ಎಂದು ಸಲಹೆ ನೀಡಿದ್ದೆ. ಇವತ್ತಿನ ವರೆಗೆ ಸರ್ಕಾರದಿಂದ ರೈತರಿಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಹೆಕ್ಟೇರ್‌ಗೆ 10,000 ಪರಿಹಾರ ನೀಡುವುದಾಗಿ ಬಾಯಿ ಮಾತಿಗೆ ಸರ್ಕಾರ ಹೇಳಿದೆ, ಇದನ್ನು 2 ಹೆಕ್ಟೇರ್‌ಗೆ ಸೀಮಿತಗೊಳಿಸಲಾಗಿದೆ. ಫಸಲ್‌ ಬಿಮಾ ಯೋಜನೆಯಡಿ ಕೂಡ ಈ ಬೆಳೆ ನಷ್ಟಕ್ಕೆ ಪರಿಹಾರ ಸಿಗಲ್ಲ ಎಂದು ಹೇಳಿದರು.


ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು


ಇನ್ನು, ಭ್ರಷ್ಟ ಹಣದಿಂದ ಅಧಿಕಾರಕ್ಕೆ ಬಂದಿರುವ ಅನೈತಿಕ ಸರ್ಕಾರ ರಾಜ್ಯದಲ್ಲಿದೆ. ಲೂಟಿ ಮಾಡಿರುವುದೊಂದೇ ಈ ಸರ್ಕಾರದ ಸಾಧನೆ. ಇದನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳ ನಿಂದನೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಎಂದ ಸಿದ್ದರಾಮಯ್ಯ, ನನ್ನ ಮೇಲಿನ ಈ ಆರೋಪವನ್ನು ರಾಜ್ಯದ ಜನ ಒಪ್ಪುತ್ತಾರಾ? ವಿಧಾನಸೌಧದ ಗೋಡೆಗೆ ಹೋಗಿ ಕಿವಿ ಕೊಟ್ಟರೆ ಲಂಚ, ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಒಂದು ಗುತ್ತಿಗೆ ಕಾಮಗಾರಿಗೆ 40% ಲಂಚ ಕೊಡಲೇಬೇಕು. ಇದನ್ನು ಹೇಳಿರುವುದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು. ನರೇಂದ್ರ ಮೋದಿ ಅವರಿಗೆ ನಮ್ಮನ್ನು ಕಮಿಷನ್‌ ಕಿರುಕುಳದಿಂದ ಕಾಪಾಡಿ ಎಂದು ಪತ್ರ ಬರೆದು ಒಂದುವರೆ ವರ್ಷ ಆಯಿತು, ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಕ್ರಮ ಕೈಗೊಂಡಿಲ್ಲ? ಎಂದರು.


ಇದನ್ನೂ ಓದಿ: Siddaramaiah: ನಾನು ಸಿಎಂ ಆಗಿದ್ದಾಗ 15 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದೆ: ಸಿದ್ದರಾಮಯ್ಯ


ಬೊಮ್ಮಾಯಿಗೆ ಇದಕ್ಕಿಂತ ಒಳ್ಳೆ ದಾಖಲೆ ಬೇಕಾ?


ಇನ್ನು, ಬೆಳಗಾವಿಯ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು 40% ಕಮಿಷನ್‌ ನೀಡಿಲ್ಲ ಎಂದು ಸಚಿವರಾಗಿದ್ದ ಈಶ್ವರಪ್ಪ ಅವರು ಬಿಲ್‌ ಹಣ ನೀಡದೆ ಕಿರುಕುಳ ನೀಡಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್‌ ಪಾಟೀಲ್‌ ಸಾವಿಗೆ ಈಶ್ವರಪ್ಪ ಕಾರಣ ಎಂದು ಆತನ ಕುಟುಂಬದವರು ಹೇಳಿದ್ರು, ಸಾಯುವ ಮೊದಲು ಸಂತೋಷ್‌ ಪಾಟೀಲ್‌ ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದರು. ಇಂಥವರನ್ನು ಜೈಲಿಗೆ ಹಾಕುವ ಬದಲು ಮೂರೇ ತಿಂಗಳಲ್ಲಿ ಕ್ಲೀನ್‌ ಚಿಟ್‌ ಕೊಡಿಸಿದ್ದಾರೆ. ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುವ ಬೊಮ್ಮಾಯಿಗೆ ಇದಕ್ಕಿಂತ ಒಳ್ಳೆ ದಾಖಲೆ ಬೇಕಾ? ಎಂದು ಪ್ರಶ್ನಿಸಿದರು.


ರಾಜ್ಯ ಅಭಿವೃದ್ಧಿ ಆಗಬೇಕಾದರೆ ಈ ಸರ್ಕಾರ ತೊಲಗಬೇಕು


ಕೊರೊನಾ ಕಾಲದಲ್ಲಿ ಖರೀದಿ ಮಾಡಿರುವ ವಸ್ತುಗಳಲ್ಲಿ ಭ್ರಷ್ಟಾಚಾರ ಮಾಡಿ ಸುಮಾರು 2,000 ಕೋಟಿ ಲಂಚ ತಿಂದಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಜನರಿಗೆ ಆಸ್ಪತ್ರೆ, ಬೆಡ್‌, ಔಷಧಿ, ಆಕ್ಸಿಜನ್‌ ಕೊಡಲಾಗದೆ ಲಕ್ಷಾಂತರ ಜೀವಗಳ ಬಲಿ ಪಡೆದರು. ಇವೆಲ್ಲವುಗಳನ್ನು ಒಳಗೊಂಡ ಬಿಜೆಪಿ ಸರ್ಕಾರದ ಕರ್ಮಕಾಂಡಗಳು ಎಂಬ ಆರೋಪ ಪಟ್ಟಿಯನ್ನು ಸಿದ್ಧ ಮಾಡಿ ಜನರ ಮುಂದಿಟ್ಟಿದ್ದೇವೆ. ರಾಜ್ಯ ಅಭಿವೃದ್ಧಿ ಆಗಬೇಕಾದರೆ ಈ ಸರ್ಕಾರ ತೊಲಗಬೇಕು. ನಾವು ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಯಾವ ಆರೋಪಗಳು ಇರಲಿಲ್ಲ, ಗುತ್ತಿಗೆದಾರರ ಸಂಘದವರು ಪತ್ರ ಬರೆದಿರಲಿಲ್ಲ. ರಾಜ್ಯದ ಜನ ಮತ್ತೆ ನಮಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರ ರಹಿತವಾದ, ಪಾರದರ್ಶಕ ಆಡಳಿತವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು