ಬೆಂಗಳೂರು: ಚುನಾವಣೆ ಹತ್ತಿರ (Karnataka Assembly Election 2023) ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ನಾಯಕರ ಮಧ್ಯೆ ಪರಸ್ಪರ ಕೆಸರೆರಚಾಟ ಮುಂದುವರಿಯುತ್ತಲೇ ಇದೆ. ಸದ್ಯ ಒಂದು ಕಾಲದಲ್ಲಿ ಗುರು ಶಿಷ್ಯರಾಗಿದ್ದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಸಚಿವ ಡಾ ಕೆ ಸುಧಾಕರ್ (Dr K Sudhakar) ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ. ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ವಿರುದ್ಧ (Political Allegation) ಆರೋಪಗಳ ಸುರಿಮಳೆಗೈದಿದ್ದಾರೆ.
'ಸುಧಾಕರ್ ಎಂಬಿಬಿಎಸ್ ಓದ್ಕೊಂಡಿದ್ದಾರೆ ಅಂದ್ಕೊಂಡಿದ್ದೆ'
ನಮ್ಮ ಪಕ್ಷದಿಂದಲೇ 2013ರಲ್ಲಿ ಸುಧಾಕರ್ ಅವರಿಗೆ ಟಿಕೆಟ್ ಕೊಟ್ಟಿದ್ದೆವು ಎಂದ ಸಿದ್ದರಾಮಯ್ಯ, ಈಗ ಸುಧಾಕರ್ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಹೋಗಿ ಮಂತ್ರಿಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಮೂಲಕ ಸುಳ್ಳು ಹೇಳಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆಫೀಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪಾಪಾ ಸುಧಾಕರ್ ಎಂಬಿಬಿಎಸ್ ಓದ್ಕೊಂಡಿದ್ದಾರೆ ಅಂದ್ಕೊಂಡಿದ್ದೆ. ಅವರು ಎಜಿ ವರದಿಯನ್ನು ಓದಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಎಜಿ ವರದಿಯಲ್ಲಿ ರಿಕನ್ಸಿಲೇಶನ್ ಇದೆ. ಜಮಾ, ಖರ್ಚು ಸೇರಿಸಿ ಆ ವರದಿಯನ್ನು ಕೊಟ್ಟಿರುತ್ತಾರೆ ಎಂದು ಹೇಳಿದರು.
'ಆಲಿಬಾಬಾ ಮತ್ತು 40 ಕಳ್ಳರು'
ಆಲಿಬಾಬಾ ಮತ್ತು ಈ 40 ಕಳ್ಳರು ಇದ್ದಾರಲ್ಲ? ಹಾಗೇ ಈ ಬಿಜೆಪಿಯವರು. ಅದರಲ್ಲಿ ಈ ಸುಧಾಕರ್ ಕೂಡ ಒಬ್ಬ. ಕೊರೊನಾ ಸಂದರ್ಭದಲ್ಲಿ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಅದರ ಮಾಸ್ಟರ್ ಡಾ. ಕೆ ಸುಧಾಕರ್ ಎಂದ ಸಿದ್ದರಾಮಯ್ಯ, ಈ ಬಗ್ಗೆ ವಿಶೇಷ ಆಡಿಟ್ ಆಗಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಆದರೆ ವಿಶೇಷ ಅಡಿಟ್ ಮಾಡಿಲ್ಲ. ವಿಶೇಷ ಅಡಿಟ್ಗೆ ಅವಕಾಶವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಜಾವೇದ್ ಅಕ್ತರ್ ಹೇಳಿದ್ದಾರೆ. ಎಚ್ ಕೆ ಪಾಟೀಲ್ ಮಾಡಿದ್ದ ವಿಶೇಷ ಅಡಿಟ್ ಆಗ್ರಹವನ್ನು ಅಖ್ತರ್ ಒಪ್ಪಿಲ್ಲ. ಒಂದು ವೇಳೆ ಭ್ರಷ್ಟಾಚಾರ ಆಗಿರದಿದ್ದರೆ ಸ್ಪೆಶಲ್ ಅಡಿಟ್ ಮಾಡಿಸಲು ಯಾಕೆ ಒಪ್ಪಿಲ್ಲ ಎಂದು ಪ್ರಶ್ನಿಸಿದರಲ್ಲದೇ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಾನು ಇನ್ನೂ ಆರ್ ಎಸ್ ಎಸ್ ನಲ್ಲಿದ್ದೇನೆ ಎಂದು ಕೊಂಡಿದ್ದಾರೆ ಎಂದು ಟೀಕಿಸಿದರು.
'3 ವರ್ಷದಿಂದ ಕಡ್ಲೆಪುರಿ ತಿಂತಿದ್ರಾ?'
ಇನ್ನು ತನ್ನ ವಿರುದ್ಧ ಹಾಗೂ ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೆ ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸುಮ್ಮನೆ ಏಕೆ ಇತ್ತು ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ನಾವು ಆಡಳಿತದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಆಗ ಕಡ್ಲೆಪುರಿ ತಿಂತಿದ್ರಾ? ಆಗೇನು ಅವರ ಬಾಯಲ್ಲಿ ಕಡುಬು ಸಿಕ್ಕಿ ಹಾಕಿಕೊಂಡಿತ್ತಾ ಎಂದರಲ್ಲದೇ, ನಾನು ಮುಖ್ಯಮಂತ್ರಿಯಾಗಿದ್ದಾಗ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಆದರೆ ಈ ಬಿಜೆಪಿ ಸರ್ಕಾರದವರು ಒಂದು ಪ್ರಕರಣವನ್ನಾದರೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಿದೆಯಾ ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ