ಬಾಗಲಕೋಟೆ (ಫೆ. 12): ಇಂದು ಸ್ವ ಕ್ಷೇತ್ರದಲ್ಲಿ ಎರಡನೇ ದಿನ ಸುತ್ತು ಹಾಕಿದ ಸಿದ್ದರಾಮಯ್ಯ, ಡಿಸಿಎಂ ಗೋವಿಂದ ಕಾರಜೋಳ ಜೊತೆ ತಿರುಗಾಟ ನಡೆಸಿದರು. ಗೋವಿಂದ ಕಾರಜೋಳ ಅವರ ಹೆಗಲ ಮೇಲೆ ಕೈ ಹಾಕಿ ಸುತ್ತಾಡುವ ಮೂಲಕ ಅವರು ಗಮನಸೆಳೆದರು. ಇದೇ ವೇಳೆ ಅವರು ಬರೋಬ್ಬರಿ 70ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಾದಾಮಿ ಕ್ಷೇತ್ರದ ಬನಶಂಕರಿ ದೇಗುಲಕ್ಕೆ ಡಿಸಿಎಂ ಗೋವಿಂದ ಕಾರಜೋಳ ಜೊತೆಗೆ ತೆರಳಿ ಆಶೀರ್ವಾದ ಪಡೆದ ಬಳಿಕ ಅವರು ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಿದರು. ಸಿದ್ದರಾಮಯ್ಯ ಮುಷ್ಠಿಗೇರಿ ಗ್ರಾಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೆಗಲ ಮೇಲೆ ಕೈ ಹಾಕಿ ಹೆಜ್ಜೆ ಹಾಕಿದ್ರು. ಈ ವೇಳೆ ಹಿಂದೆ ಇದ್ದ ಸಚಿವ ರಾಮುಲು ಎಂದು ಕರೆದರು. ಆಗ ಶ್ರೀರಾಮುಲು ಬಂದೇ ಅಣ್ಣಾ ಎಂದು ಮುಂದೆಬಂದರು.
ನಿನ್ನೆಯಷ್ಟೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ಸರ್ಕಾರದಲ್ಲಿ ದುಡ್ಡಿಲ್ಲ. ಸಚಿವರನ್ನು ನಂಬಿಕೊಂಡರೆ ಮೂರು ಕಾಸಿನದು ಆಗೋಲ್ಲ ಎಂದಿದ್ದರು. ಇಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಿಜೆಪಿ ಸಚಿವರ ಜೊತೆ ಕೈಕುಲಕಿ, ಹೆಗಲ ಮೇಲೆ ಕೈಹಾಕಿಕೊಂಡು ಬಿಜೆಪಿ ಸಚಿವರ ಬಗ್ಗೆ ಮೆಚ್ಚುಗೆ ಮಾತನಾಡಿ, ಬೆನ್ನು ತಟ್ಟಿ, ಜೊತೆಗೂಡಿ ಕೋಟಿ ಕೋಟಿ ರೂ ಅನುದಾನದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿದರು.
ಇಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸರಣಿ ಗುದ್ದಲಿ ಪೂಜೆ ಮಾಡಿದರು. ಸಂಜೆ ಆರು ಗಂಟೆಗೆ ವಿಮಾನ ನಿಗದಿಯಾದ ಹಿನ್ನಲೆ ಅವಸರದಲ್ಲಿ ಪದೇ ಪದೇ ಟೈಮ್ ನೋಡಿಕೊಳ್ಳುತ್ತಲೆ ಬನನಶಂಕರಿ, ಮುಷ್ಠಿಗೇರಿ, ಮುಷ್ಠಿಗೇರಿ ಹೊರವಲಯ, ಪಟ್ಟದಕಲ್ಲು, ಬಾದಾಮಿ ಹೀಗೆ ಕ್ಷೇತ್ರದ ಹಲವು ಕಡೆಗಳಲ್ಲಿ ಅಂದಾಜು 70 ಕೋಟಿ ರೂ. ಅಧಿಕ ಹೆಚ್ಚು ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿದರರು.
ಮುಖಾಮುಖಿಯಾದ ಶ್ರೀರಾಮುಲು- ಸಿದ್ದರಾಮಯ್ಯ
ವಿಶೇಷವಾಗಿ ಬಾದಾಮಿ ಚುನಾವಣೆಯಲ್ಲಿ ಸಿದ್ದು ಎದುರಾಳಿಯಾಗಿದ್ದ ಶ್ರೀರಾಮುಲು ಇದೇ ಮೊದಲ ಬಾರಿಗೆ ಬಾದಾಮಿ ಕ್ಷೇತ್ರದಲ್ಲಿ ಜೊತೆಯಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ ವಿಪಕ್ಷ ನಾಯಕರ ವಿರುದ್ಧ ಟೀಕಿಸಿದ ಶ್ರೀರಾಮುಲು, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾರೆ. ನಮ್ಮ ಸರ್ಕಾರ, ನಮ್ಮ ಸಿಎಂ ವಿರುದ್ಧ ಟೀಕೆ ಮಾಡದೇ ಇದ್ದರೆ ಅವರು ಕಾಣುತ್ತಿರುವ ಕನಸು ಸಿಎಂ ಕುರ್ಚಿಗೆ ಕನವರಿಕೆ ಮಾಡುತ್ತಿದ್ದಾರೆ. ನಮ್ಮ ರಾಜಕಾರಣ ದೃಷ್ಟಿ ಅದಲ್ಲ. ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇವೆ ಎಂದು ಸಿದ್ದು ಟೀಕೆಗೆ ಗುದ್ದು ನೀಡಿದರು.
ಇದನ್ನು ಓದಿ: ಐಶ್ವರ್ಯಾ ಶಿವಕುಮಾರ್ ಅರಿಶಿಣ ಶಾಸ್ತ್ರದ ಮತ್ತಷ್ಟು ಎಕ್ಸ್ಕ್ಲೂಸಿವ್ ಚಿತ್ರಗಳು ಇಲ್ಲಿವೆ
ಇದೇ ವೇಳೆ ಹೆಸ್ಕಾಂ ಉಪ ವಿಭಾಗ ಕಚೇರಿ, ರಸ್ತೆಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದನ್ನು ಹಾಗೂ ಎರಡೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ತಂದಿರುವ ಅನುದಾನದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಗೋವಿಂದ ಕಾರಜೋಳರನ್ನು ಹೊಗಳಿದರು, ನಾನು ಯಾವಾಗ ದುಡ್ಡು ಕೇಳಿದ್ರೂ ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಾನು ಕಾರಜೋಳ ಜನತಾ ಪರಿವಾರದಿಂದ ಬಂದವರು. ನಮ್ಮಿಬ್ಬರ ಮಧ್ಯೆ ಬಾಂಧವ್ಯ ಇನ್ನೂ ಇದೆ ಎಂದರು.
ಇದೇ ವೇಳೆ ಮಾರ್ಚ್ ಒಳಗೆ ಇನ್ನಷ್ಟು ದುಡ್ಡು ಕೊಡಿ, ನಾನು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗಾಗಿ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಿರುತ್ತದೆ ಎಂದರು. ಎರಡನೆ ದಿನದ ಕಾರ್ಯಕ್ರಮ ಮುಗಿಸಿ ತರಾತುರಿಯಲ್ಲಿ ಹೊರಟಿದ್ದ ಸಿದ್ದರಾಮಯ್ಯ, ಕರ್ನಾಟಕ ಟ್ರಂಪ್ ಎಂದಿದ್ದ ಎಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ