ಬೆಂಗಳೂರು(ಮಾ. 15): ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ನಿರೀಕ್ಷೆಯಂತೆ ತೀಕ್ಷ್ಣ ದಾಳಿ ನಡೆಸಿ ಕಂಗೆಡಿಸಿದರು. ಕಳೆದ ವಾರ ಮಂಡನೆಯಾದ ರಾಜ್ಯ ಬಜೆಟ್ ಅನ್ನ ಕಟುವಾಗಿ ಟೀಕಿಸಿದ ಅವರು ರಾಜ್ಯ ಇತಿಹಾಸದಲ್ಲಿ ಇಂತಹ ಅಭಿವೃದ್ದಿ ವಿರೋಧಿ ಬಜೆಟ್ ಯಾವತ್ತೂ ಮಂಡನೆಯಾಗಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಯಡಿಯೂರಪ್ಪ ಮಂಡಿಸಿದ ಬಜೆಟ್ನಲ್ಲಿ ಯಾವುದೇ ಆರ್ಥಿಕ ಶಿಸ್ತು ಕಾಯ್ದುಕೊಲ್ಳಲಾಗಿಲ್ಲ. ವಿತ್ತೀಯ ನಿಯಮಗಳನ್ನ ಗಾಳಿಗೆ ತೂರಲಾಗಿದೆ ಎಂದು ಲೇವಡಿ ಮಾಡಿದರು.
ಇದನ್ನ ಒಳ್ಳೆಯ ಬಜೆಟ್ ಅಂದು ಯಾವ ಆರ್ಥಿಕ ತಜ್ಞನೂ ಕರೆಯಲು ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ ಯಡಿಯೂರಪ್ಪ ಮಧ್ಯ ಮಾತನಾಡಿ, ಈ ವೇಳೆ ನೀವು ಬಜೆಟ್ ಮಂಡನೆ ಮಾಡಿದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನೆ ಹಾಕಿದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, “ನಾನು ಅಲ್ಲಿ ಇದಿದ್ದರೆ ಏನು ಮಾಡುತ್ತಿದ್ದೆ ಎಂದು ಮಾಡಿ ತೋರಿಸುತ್ತಿದ್ದೆ. ನನಗೆ ಆ ಸೀಟು ಬಿಟ್ಟುಕೊಡಿ, ಅಲ್ಲಿದ್ದು ನಾನು ಹೇಳುತ್ತೇನೆ” ಎಂದು ಕಿಚಾಯಿಸಿದರು.
ತನ್ನನ್ನ ಖಾಯಂ ಆಗಿ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸುತ್ತೇನೆಂದು ಯಡಿಯೂರಪ್ಪ ನೀಡಿದ್ದ ಹೇಳಿದೆಗೆ ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1947ರಿಂದಲೂ ಒಬ್ಬರೇ ಕುರ್ಚಿಗೆ ಅಂಟಿ ಕೂತಿಲ್ಲ. ನಾವು ವಾಪಸ್ ಅಧಿಕಾರಕ್ಕೆ ಬಂದೇ ಬರುತ್ತೇವೆ. ಜನರ ಮುಂದಿನ ಸಲ ನಮಗೆ ಅಧಿಕಾರ ಕೊಟ್ಟೇ ಕೊಡುತ್ತಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ನಾವು ನಿಮ್ಮ ಕುರ್ಚಿಯಲ್ಲಿ ಬಂದು ಕೂರುವ ದಿನಗಳು ದೂರ ಇಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಫೂಡ್ ಡೆಲಿವರಿ ಕೆಲಸದಲ್ಲೂ ಹೆಣ್ಣಮಕ್ಕಳು ಸೈ; ಬೆಂಗಳೂರಿನ ಈ ದಿಟ್ಟ ಯುವತಿಯರಿಗೆ ಗ್ರಾಹಕರಿಂದಲೂ ಮೆಚ್ಚುಗೆ
ಬೊಮ್ಮಾಯಿ ಮಧ್ಯ ಪ್ರವೇಶಕ್ಕೆ ಸಿದ್ದು ಕಿಡಿ:
ಈ ವೇಳೆ ಮಾತಿಗೆ ಅಡ್ಡ ಬಂದು ಉತ್ತರಿಸಲು ಬಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ನನ್ನ ದಾರಿ ತಪ್ಪಿಸೋಕೆ ಎದ್ದು ನಿಲ್ಲುತ್ತೀಯಾ ಬೊಮ್ಮಾಯಿ. ನಾನು ದಾರಿ ತಪ್ಪೋನಲ್ಲ ಎಂದು ಹೇಳಿದರು. ನಂತರ ಮಾತು ಮುಂದುವರಿಸಿ, ಬಜೆಟ್ ವಿಚಾರದಲ್ಲಿ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ನೀವು ಸಾಲ ಪಡೆಯುವ ಗರಿಷ್ಠ ಮಿತಿ ತಲುಪಿದ್ದೀರಿ. ಮತ್ತೆ ಸಾಲ ಮಾಡಲು ನಿಮಗೆ ಅವಕಾಶವೇ ಇಲ್ಲ. ಇವತ್ತಿನಿಂದಲೇ ಎಚ್ಚೆತ್ತುಕೊಳ್ಳಿ. ತೆರಿಗೆ ವಸೂಲಿ ಜಾಸ್ತಿ ಮಾಡದೇ ತೆರಿಗೆಯೇತರ ಆದಾಯ ಹೆಚ್ಚಿಸಿ. 20 ಕೋಟಿ ಮೇಲ್ಪಟ್ಟ ಯೋಜನೆಗಳನ್ನ ಕೈಬಿಡಿ, ಇಲಾಖೆಗಳ ವಿಲೀನ ಮಾಡುವುದಾದರೆ ಮಾಡಿ. ಅನಗತ್ಯ ಹುದ್ದೆಗಳನ್ನ ಕೈಬಿಡಿ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು. ಈ ವೇಳೆ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಲು ಯತ್ನಿಸಿದಾಗ ಸಿಡಿಮಿಡಿಕೊಂಡ ಸಿದ್ದರಾಮಯ್ಯ, ಮತ್ತೆ ಮತ್ತೆ ಎದ್ದು ನಿಂತು ಮಾತನಾಡಿ ಅಡೆತಡೆ ಮಾಡಿದರೆ ನಾನು ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರ ಎಲ್ಲದಕ್ಕೂ ಕೊರೋನಾದ ಕಾರಣವನ್ನು ಕೊಡುತ್ತದೆ. ಈ ಬಾರಿ ಬಜೆಟ್ ವೆಚ್ಚ ಅಧಿಕವಾಗಿದೆ. ವೆಚ್ಚ ಅಧಿಕವಾದರೆ ಆರ್ಥಿಕ ಹೊರೆಯೂ ಹೆಚ್ಚುತ್ತದೆ. ರೆನಿನ್ಯೂ ಖರ್ಚು ವೆಚ್ಚಗಳು ಸಮತೋಲನವಾಗಿರಬೇಕು. ಇಲ್ಲದಿದ್ದರೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ನಾವು ತೆಗೆದುಕೊಳ್ಳುವ ಸಾಲವು ಆದಾಯದ ಶೇ. 25ರ ಒಳಗಿರಬೇಕು. ಫಿಸಿಕಲ್ ಡೆಪಾಸಿಟ್ ಹೊಣೆಗಾರಿಕೆ ಕಾಯ್ದೆ ಕೂಡ ಇದನ್ನ ಹೇಳಿದೆ. ಎಲ್ಲಾ ರಾಜ್ಯಗಳಲ್ಲೂ ಇದನ್ನ ಮಾಡಿಕೊಳ್ಳಲಾಗಿದೆ. 2004-05ರಲ್ಲಿ ನಾವು ಸಮತೋಲನ ಕಾಯ್ದುಕೊಂಡೆವು. ಆಗ ನಾನು ಹಣಕಾಸು ಮಂತ್ರಿಯಾಗಿದ್ದೆ. ಅಲ್ಲಿಂದ ಇ ಲ್ಲಿಯವರೆಗೆ ಅದನ್ನ ಕಾಯ್ದುಕೊಂಡು ಬರಲಾಗುತ್ತಿದೆ. ಈ ಬಾರಿ ಈ ಸಮತೋಲನದಲ್ಲಿ ಏರುಪೇರಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೂಂಡಾಗಿರಿಗೆ ಬಿಜೆಪಿ ಅವಕಾಶ ನೀಡಲ್ಲ; ಬಿ ವೈ ವಿಜಯೇಂದ್ರ
‘ಸರ್ಕಾರಕ್ಕೆ ಪಿಂಚಣಿ ಕೊಡಲೂ ಹಣ ಇರಲ್ಲ’
ಈ ಬಜೆಟ್ನಲ್ಲಿ 73 ಸಾವಿರ ಕೋಟಿ ರೂ ಸಾಲ ತೆಗೆದುಕೊಳ್ಳಲಾಗಿದೆ. ಸಾಲ ಸಿಗುತ್ತೆ ಎಂದು ಸಾಲ ತೆಗೆದುಕೊಳ್ಳಬಾರದು. ಸಾಲ ತೀರಿಸಲು ಆಗುವಷ್ಟು ಮಾತ್ರ ಸಾಲ ಮಾಡಬೇಕು. ಆದರೆ, ಈ ಸರ್ಕಾರ ಈಗ ಆರ್ಥಿಕ ಸಮತೋಲನ ಕಾಯ್ದುಕೊಳ್ಳೋದು ಕಷ್ಟ. ಈ ಬಜೆಟ್ ವಿತ್ತೀಯ ನಿಯಮಗಳಿಗೂ ವಿರುದ್ಧವಾಗಿದೆ. 2020-21ರ ಬಜೆಟ್ನಲ್ಲಿ 19,485 ಕೋಟಿ ರೂ ವಿತ್ತೀಯ ಕೊರತೆಯಾಗಿದೆ. ಈ ಸಾಲಿನ ಬಜೆಟ್ನಲ್ಲಿ 15,133 ಕೋಟಿ ರೂ ಕೊರತೆ ಆಗುವ ಅಂದಾಜು ಇದೆ. ಈ ಕೊರತೆ ನೀಗಿಸಲು ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಇದು ಹೀಗೇ ಮುಂದುವರಿದರೆ ಸಾಲದ ಪ್ರಮಾಣವು ಶೇ. 26.09ರಷ್ಟಾಗಲಿದೆ. ಆ ಪರಿಸ್ಥಿತಿಯಿಂದ ಸರ್ಕಾರವು ಆದಾಯ ಹೆಚ್ಚಳದ ಸ್ಥಿತಿಗೆ ಬಂದು ತಲುಪುತ್ತದೆ ಅನ್ನೋ ನಂಬಿಕೆ ಇಲ್ಲ. ಸಾಲದಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಬಳಿ ಉಳಿಯುವುದು ಕೇವಲ 10 ಸಾವಿರ ಕೋಟಿ ಮಾತ್ರ. ಹೀಗಾದರೆ ಮುಂದೆ ಸರ್ಕಾರಕ್ಕೆ ನೌಕರರ ಪಿಂಚಣಿ ಕೊಡಲೂ ದುಡ್ಡು ಇಲ್ಲದಂಥ ಪರಿಸ್ಥಿತಿ ಬಂದರೆ ಆಶ್ಚರ್ಯ ಇಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೇಂದ್ರದಿಂದ ಯಾವುದೇ ವಿಶೇಷ ಅನುದಾನಗಳನ್ನ ತಂದಿಲ್ಲ. ಪ್ರಧಾನಿಯನ್ನ, ಹಣಕಾಸು ಸಚಿವರನ್ನ ಹೋಗಿ ಭೇಟಿ ಮಾಡಿದ್ದಿರಾ? ನಿಮಗೆ ಭಯ ಏನಾದರೂ ಇದೆಯಾ? ಕೇಂದ್ರದ ಜೊತೆ ಸಂಘರ್ಷ ಮಾಡಿ ಎಂದು ಹೇಳುತ್ತಿಲ್ಲ. ನಮ್ಮ ಹಕ್ಕು ಕೇಳಲೂ ಅಸಮರ್ಥರಾದರೆ ನೀವು ಸರ್ಕಾರವನ್ನು ನಡೆಸಲು ಸಮರ್ಥರಾ ಎಂದು ಸಿದ್ದರಾಮಯ್ಯ ಈ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮಾಹಿತಿ ಕೃಪೆ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ