ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರು ವಲಸಿಗ ಶಾಸಕರ (Rebel MLA) ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ (Controversial Statement) ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಹರಿಪ್ರಸಾದ್ ಹೇಳಿಕೆಗೆ ಪರವಿರೋಧ ಅಭಿಪ್ರಾಯ ಕೇಳಿಬಂದಿದ್ದು, ಬಿಜೆಪಿ (BJP) ಪಾಳಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಸ್ಥಾನವನ್ನು ಮಾರಿಕೊಂಡಿದ್ದಾರೆ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ (BC Patil) ಪ್ರತಿಕ್ರಿಯೆ ನೀಡಿ, ‘ ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂಎಲ್ಸಿ ಆಗಿದ್ದಾರೆ. ಹಾಗಾದರೆ, ಹಿಂಬಾಗಿಲಿನಿಂದ ಬಂದ ಅವರನ್ನು ‘ಪಿಂಪ್’ ಎಂದು ಕರೆಯಬಹುದಾ?’ ಎಂದು ಟೀಕಿಸಿದ್ದರು.
ಇದೀಗ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಬಾಗಲಕೋಟೆಯಲ್ಲಿ ಟಾಂಗ್ ನೀಡಿರುವ ಬಿ.ಕೆ ಹರಿಪ್ರಸಾದ್, ಕೃಷಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಬಿ.ಸಿ ಪಾಟಿಲ್ ಪೊಲೀಸ್ ಅಧಿಕಾರಿ ಇದ್ದಾಗ ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕೆ ಅಂತ ಹೇಳಲಿ ಎಂದು ಸವಾಲೆಸೆದಿರುವ ಬಿಕೆ ಹರಿಪ್ರಸಾದ್, ಬೋರಿಂಗ್ ಇನ್ಸ್ಟಿಟ್ಯೂಟ್ ಅಲ್ಲಿ ಕಾಲಪತ್ಥರ್ ರೌಡಿಗೆ ಯಾವ ಸೇವೆ ಮಾಡ್ತಿದ್ರು ಗೊತ್ತಿದೆ. ಇಂತಹ ಪೊಲೀಸ್ ಅಧಿಕಾರಿ, ಸಿನಿಮಾ ನಟನ ಹೇಳಿಕೆಗೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಹರಿಹಾಯ್ದರು.
‘ಬಿಜೆಪಿಗರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ’
ಒಬ್ಬ ಮಾಜಿ ಚಿತ್ರನಟ ಇನ್ನೊಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ ಎಂದಿರುವ ಬಿಕೆ ಹರಿಪ್ರಸಾದ್, ಬಿ.ಸಿ ಪಾಟಿಲ್ ಗರತಿ ತರಹ ಮಾತಾಡುತ್ತಾರೆ. ಇಂತವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಬಿಜೆಪಿಗರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
‘ಬಿಜೆಪಿಯಲ್ಲಿ ರವಿಗಳೇ ತುಂಬಿದ್ದಾರೆ’
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿ ವಿರುದ್ಧವೂ ಹರಿಹಾಯ್ದಿರುವ ಬಿಕೆ ಹರಿಪ್ರಸಾದ್, ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿಟಿ ರವಿ, ಫೈಟರ್ ರವಿ, ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡೋದಕ್ಕೆ ಆಗೋದಿಲ್ಲ ಎಂದರು. ಅಲ್ಲದೇ, ಸ್ಯಾಂಟ್ರೊ ರವಿಗೂ ಕಾಂಗ್ರೆಸ್ಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವ. ಅವನು ಹೇಗೆ ಅಂತ ಗೊತ್ತಿದೆ. ಧೈರ್ಯ ಇದ್ದರೆ ಮಾತಾಡಲಿ, ನಾನು ಮಾತಾಡ್ತೀನಿ ಎಂದು ಕಿಡಿಕಾರಿದರು.
‘ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ’
ಇನ್ನು ಬಿಜೆಪಿ ಸರ್ಕಾರದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಬಿಕೆ ಹರಿಪ್ರಸಾದ್, ಯತ್ನಾಳ್ ಅವರೇ ಖುದ್ದಾಗಿ ಹೇಳಿದ್ದಾರೆ. ಬಿಜೆಪಿ ಸರಕಾರದ ಮಂತ್ರಿಗಳು ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಅಂತ ಹೇಳಿದ್ದಾರೆ. ಇನ್ನೊಬ್ಬ ಶಾಸಕರು ಹೇಳ್ತಾರೆ ಇವರು ಪಿಂಪ್ ಕೆಲಸ ಮಾಡಿ ಮಂತ್ರಿ ಆಗಿದ್ದಾರೆ ಅಂತ. ಇವರು (ವಲಸೆ ಸಚಿವರು) ಮಂತ್ರಿಗಳು ನಮ್ಮ ಸರಕಾರದಲ್ಲಿ ಮಂತ್ರಿ ಆಗೋದಕ್ಕೆ ಏನು ಮಾಡಿದಾರೆ ಅಂತ ಗೊತ್ತಿದೆ. ಆದರೆ ಅದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳೋದಿಲ್ಲ. ಅವರಿಗೆ ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ. ಇವರು ಬಳಸುವ ಪದಗಳನ್ನು ನೋಡಿದರೆ ಅವರ ಯೋಗ್ಯತೆ ಏನು ಅಂತ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ