HOME » NEWS » State » OPPOSITION FOR KERALA POWER LINE INSTALLATION IN SOUTH CANARA SESR AKP

ಕೇರಳಕ್ಕೆ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿಗೆ ವಿರೋಧ, ರೈತಸಂಘದಿಂದ ಹೋರಾಟದ ಎಚ್ಚರಿಕೆ

ಕೇರಳಕ್ಕೆ ವಿದ್ಯುತ್ ಲೈನ್ ನಿರ್ಮಿಸುವ  ಯೋಜನೆಯಿಂದ ನೂರಾರು ಎಕರೆ ಕೃಷಿಭೂಮಿ ಹಾಗೂ ಅರಣ್ಯ ಭೂಮಿ ನಾಶವಾಗಲಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.

news18-kannada
Updated:January 22, 2021, 5:14 PM IST
ಕೇರಳಕ್ಕೆ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿಗೆ ವಿರೋಧ, ರೈತಸಂಘದಿಂದ ಹೋರಾಟದ ಎಚ್ಚರಿಕೆ
ಅರಣ್ಯ ಭೂಮಿ
  • Share this:
ಪುತ್ತೂರು (ಜ.22): ರಾಜ್ಯದ ಕರಾವಳಿಯಲ್ಲಿ ವಿವಿಧ ಅಭಿವೃದ್ದಿ ಯೋಜನೆಯ ಹೆಸರಿನಲ್ಲಿ ಈಗಾಗಲೇ ಹಲವು ಕೈಗಾರಿಕೆಗಳು, ಪೈಪ್‍ಲೈನ್, ವಿದ್ಯುತ್ ಯೋಜನೆಗಳು ತಲೆ ಎತ್ತಿದೆ. ಇದರಿಂದ ನಲುಗಿರುವ ಕರಾವಳಿಯ ಜನರಿಗೆ ಇದೀಗ ಇನ್ನೊಂದು ಶಾಕ್ ಎದುರಾಗಿದೆ.  ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿರುವ ಯು.ಪಿ.ಸಿ.ಎಲ್ ವಿದ್ಯುತ್ ಉತ್ಪಾದನಾ ಘಟಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕೇರಳದ ಕಾಸರಗೋಡು ಪ್ರವೇಶಿಸುವ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆ ಶುರುವಾಗಿದೆ.ಈ ಯೋಜನೆಗೆ ನೂರಾರು ಎಕರೆ ಕೃಷಿ ಭೂಮಿ ಹಾಗೂ ಅರಣ್ಯ ಭೂಮಿ ನಾಶವಾಗಲಿದ್ದು, ಯೋಜನೆಯ ವಿರುದ್ಧ ಕೃಷಿಕರು ಹೋರಾಟದ ಹಾದಿ ಹಿಡಿದಿದ್ದಾರೆ.   ಯು.ಪಿ.ಸಿ.ಎಲ್ ನಿಂದ ಕೇರಳಕ್ಕೆ ವಿದ್ಯುತ್ ಲೈನ್ ನಿರ್ಮಿಸುವ  ಯೋಜನೆಯಿಂದ ನೂರಾರು ಎಕರೆ ಕೃಷಿಭೂಮಿ ಹಾಗೂ ಅರಣ್ಯ ಭೂಮಿ ನಾಶವಾಗಲಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ. ಈಗಾಗಲೇ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೊಲ್ಲಪದವು ಖಾಸಗಿಯವರ ಕುಮ್ಕಿ ಜಾಗದಲ್ಲಿ ಯಾವುದೇ ಮಾಹಿತಿ ನೀಡದೆ, ಸರ್ವೇ ಕಾರ್ಯ ನಡೆಸಿ ರಸ್ತೆ ನಿರ್ಮಾಣ ಮಾಡಿ ಟವರ್ ನಿರ್ಮಾಣಕ್ಕೆ ಆಳೆತ್ತರದ ಗುಂಡಿಯನ್ನು ತೆಗೆಯಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕೇರಳದ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಲೋಡ್ ನಿವಾರಣೆಯ ದೃಷ್ಟಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 847 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, 400 ಕೆ.ವಿ ಸಾಮಥ್ರ್ಯದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ವಿದ್ಯುತ್ ಮಾರ್ಗ ಸಾಗುವ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ 310 ಕಡೆ ಫೌಂಡೇಶನ್ ನಿರ್ಮಾಣವಾಗಲಿದೆ. ಇದರಲ್ಲಿ 127 ಟವರ್ ಗಳು ಕೇರಳ ವ್ಯಾಪ್ತಿಯಲ್ಲಿ ಹಾಗೂ 183 ಕರ್ನಾಟಕ ವ್ಯಾಪ್ತಿಯಲ್ಲಿ ಇರಲಿದೆ. ಹೀಗಾಗಿ ವಿದ್ಯುತ್ ಮಾರ್ಗ ಸಾಗುವ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಯೋಜನೆಯ ಅನುಷ್ಟಾನಕ್ಕೆ ಮೊದಲು ಭೂಮಿ ಕಳೆದು ಕೊಳ್ಳುವ ಸಂತ್ರಸ್ತರನ್ನು ಸಂಪರ್ಕಿಸುವ ಕಾರ್ಯವನ್ನು ಸ್ಥಳೀಯಾಡಳಿತ ಮಾಡಿಲ್ಲ ಎನ್ನುವ ಆರೋಪವೂ ಇದೆ. ಅಲ್ಲದೆ ವಿದ್ಯುತ್ ತಂತಿಗಳನ್ನು ಅಂಡರ್ ಗ್ರೌಂಡ್ ಮೂಲಕ ಮಾಡಬೇಕೇ ವಿನಹ ಕೃಷಿ ಭೂಮಿಗಳಿಗೆ ತೊಂದರೆ ಮಾಡಿ ನಿರ್ಮಿಸಬಾರದು ಎನ್ನುವ ಒತ್ತಾಯವೂ ಕೇಳಿ ಬರಲಾರಂಭಿಸಿದೆ. ಒಂದು ವೇಳೆ ಕೃಷಿಕರ ಮನವಿಯನ್ನು ಕಡೆಗಣಿಸಿ ವಿದ್ಯುತ್ ತಂತಿಗಳನ್ನು ಕೃಷಿ ಭೂಮಿಯ ಮಧ್ಯೆ ಕೊಂಡೊಯ್ದಲ್ಲಿ ತೀವ್ರ ತರದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ  ರೈತ ಸಂಘ ನೀಡಿದೆ. ಅಲ್ಲದೆ ಕೇರಳಕ್ಕೆ ವಿದ್ಯುತ್ ಲೈನ್ ಸಾಗಿಸಲು ಕರ್ನಾಟಕದ ಭೂಮಿ ಬಳಸುವುದಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Published by: Seema R
First published: January 22, 2021, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories