• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಬದಲಾವಣೆಯನ್ನು ತರಲು ಇರುವ ಮಾರ್ಗ; ಸಿದ್ದರಾಮಯ್ಯ

Siddaramaiah: ಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಬದಲಾವಣೆಯನ್ನು ತರಲು ಇರುವ ಮಾರ್ಗ; ಸಿದ್ದರಾಮಯ್ಯ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ನಾವು ಒಮ್ಮೆ ಭರವಸೆಗಳನ್ನು ಕೊಟ್ಟ ಮೇಲೆ 5 ವರ್ಷಗಳ ಅವಧಿಯಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2013ರಲ್ಲಿ ನಾವು ಪಕ್ಷದ ಪ್ರಣಾಳಿಕೆಯ ಮೂಲಕ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ಚುನಾವಣಾ ಪ್ರಣಾಳಿಕೆ (Election Manifesto) ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಅದು ರಾಜ್ಯದ ವಿಕಾಸಕ್ಕಾಗಿ, ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರಲು ಇರುವ ಮಾರ್ಗ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.


ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಒಮ್ಮೆ ಭರವಸೆಗಳನ್ನು ಕೊಟ್ಟ ಮೇಲೆ 5 ವರ್ಷಗಳ ಅವಧಿಯಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2013ರಲ್ಲಿ ನಾವು ಪಕ್ಷದ ಪ್ರಣಾಳಿಕೆಯ ಮೂಲಕ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ಯಾವ ಭರವಸೆ ನೀಡಿದ್ದೆವು ಮತ್ತು ಏನು ಮಾಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಆದರೆ ಬಿಜೆಪಿಯವರು 2018ರಲ್ಲಿ ಪ್ರಣಾಳಿಕೆಯ ಮೂಲಕ ನೀಡಿದ್ದ 600 ಭರವಸೆಗಳಲ್ಲಿ 3 ವರ್ಷ 10 ತಿಂಗಳ ಅವಧಿಯಲ್ಲಿ ಈಡೇರಿಸಿದ್ದು ಕೇವಲ 55 ಭರವಸೆಗಳು ಮಾತ್ರ. 10% ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ ಎಂದರು.


ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಹಿರಿಯ ರಾಜಕಾರಣಿ ಶರದ್ ಪವಾರ್!


ಹಿಂದೆ ನಾವು ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಗಳ - ವರ್ಗದ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತ ವರ್ಗಗಳ ಜನರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟಿದ್ದೆವು. ಉದಾಹರಣೆಗೆ ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆ, ಬಹುಶಃ ತೆಲಂಗಾಣ ರಾಜ್ಯವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿ ಇಂಥದ್ದೊಂದು ಕಾಯ್ದೆ ಇರಲಿಲ್ಲ ಎಂದ ಸಿದ್ದರಾಮಯ್ಯ, ದಲಿತರ ಬಗ್ಗೆ ಬಹಳ ಮಾತನಾಡುವ ಮೋದಿ ಅವರು ಸಬ್‌ ಕ ಸಾಥ್‌, ಸಬ್‌ ಕ ವಿಕಾಸ್‌ ಎನ್ನುತ್ತಾರೆ ಆದರೆ ಇಂಥ ಕಾಯ್ದೆಯನ್ನು ಯಾಕೆ ಅವರು ಕೇಂದ್ರದಲ್ಲಿ ಜಾರಿಗೆ ತಂದಿಲ್ಲ. ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುವ ಕೆಲಸವನ್ನು ಯಾಕೆ ಮಾಡಿಲ್ಲ. 2013ರಲ್ಲಿ ನಮ್ಮ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿತು. ಅಲ್ಲಿಯವರೆಗೆ ಈ ಯೋಜನೆಗಳಿಗೆ ಖರ್ಚಾಗಿದ್ದ ಹಣ 22,000 ಕೋಟಿ ರೂಪಾಯಿ. ಕಾಯ್ದೆ ಜಾರಿಯಾದ ನಂತರ 88,000 ಕೋಟಿ ರೂಪಾಯಿ ಈ ಯೋಜನೆಗೆ ಖರ್ಚಾಯಿತು ಎಂದು ಹೇಳಿದರು.


ಮೀಸಲಾತಿ ಬಗ್ಗೆ ಪುನರುಚ್ಛಾರ


ಇನ್ನು ಮೀಸಲಾತಿ ಪುನರ್‌ ವರ್ಗೀಕರಣ ಮಾಡುತ್ತೇವೆ ಎಂದು ಇಡೀ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದ ಸಿದ್ದರಾಮಯ್ಯ,  ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ 2% ಮತ್ತು ಲಿಂಗಾಯತರಿಗೆ 2% ನೀಡಿದ್ರು. ಒಕ್ಕಲಿಗರು ಕೇಳಿದ್ದು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನಾವು 12% ಇದ್ದೇವೆ ನಮಗೆ 12% ಮೀಸಲಾತಿ ನೀಡಿ ಎಂದು, ಲಿಂಗಾಯತರು ತಮ್ಮನ್ನು 3ಬಿ ಇಂದ 2ಎ ಗೆ ಸೇರಿಸಿ ಎಂದು ಕೇಳಿದ್ದರು. ಅವರಿಗೆ ಮೀಸಲಾತಿ ಹೆಚ್ಚಿಸುವುದಕ್ಕೆ ನಾವು ಕೂಡ ಅವರ ಪರವಾಗಿದ್ದೇವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮೀಸಲಾತಿ ಪ್ರಮಾಣ 50% ಗಿಂತ ಹೆಚ್ಚಾಗಬಾರದು ಎಂದು ಹೇಳಿದೆ, ಇದು ಕಡ್ಡಾಯವಲ್ಲ, ವಿಶೇಷ ಸಂದರ್ಭದಲ್ಲಿ ಈ ಮಿತಿಯನ್ನು ಮೀರಬಹುದು ಎಂದು ಅದೇ ತೀರ್ಪಿನಲ್ಲಿ ಹೇಳಲಾಗಿದೆ ಎಂದರು.


ಇದನ್ನೂ ಓದಿ: Sad News: ಅಯ್ಯೋ ಇದೆಂಥಾ ದುರಂತ! ಮದುವೆ ಮನೆಯಲ್ಲಿ ಕುದಿಯುತ್ತಿದ್ದ ಸಾಂಬಾರಿನ ಹಂಡೆಗೆ ಬಿದ್ದು ಯುವಕ ಸಾವು!


ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು 69% ಮಾಡಿದ್ದಾರೆ, ಸರ್ಕಾರ ವಿಶೇಷ ಸಂದರ್ಭಕ್ಕೆ ಅನುಗುಣವಾಗಿ ಈ ಮೀಸಲಾತಿ ಪ್ರಮಾಣವನ್ನು 50% ಗಿಂತ ಹೆಚ್ಚು ಮಾಡಬಹುದಾಗಿತ್ತು ಎಂದ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಅವರ ಸರ್ಕಾರ ಇದ್ದಾಗ ಈ ಮಿತಿಯನ್ನು 73%ಗೆ ಹೆಚ್ಚಳ ಮಾಡಿತ್ತು, ಅದೀಗ ನ್ಯಾಯಾಲಯದಲ್ಲಿದೆ. ಕಾರಣ 9ನೇ ಶೆಡ್ಯೂಲ್‌ಗೆ ಸೇರಿರಲಿಲ್ಲ. ನಾವು ಈ ಬಾರಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು 75% ಗೆ ಹೆಚ್ಚಳ ಮಾಡಿ, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ಇವರೆಲ್ಲರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ. ಎಸ್‌,ಸಿ ಜನಸಂಖ್ಯೆ 17.15% ಇದೆ, ಅವರ ಮೀಸಲಾತಿಯನ್ನು 17% ಗೆ, ಎಸ್‌,ಟಿ ಜನಸಂಖ್ಯೆ 7% ಇದೆ ಅವರ ಮೀಸಲಾತಿಯನ್ನು 3% ಇಂದ 7% ಗೆ ಹೆಚ್ಚಿಸುತ್ತೇವೆ. ಇದನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸದಿದ್ದರೆ ಸಂವಿಧಾನಾತ್ಮಕ ರಕ್ಷಣೆ ಇರುವುದಿಲ್ಲ. ಅದನ್ನು ಮಾಡುತ್ತೇವೆ ಎಂದರು.
ಇನ್ನು, ನಾವು ಈ ಎಲ್ಲಾ ವಿಚಾರಗಳನ್ನು ಲೆಕ್ಕಾಚಾರ ಹಾಕಿ ನಮ್ಮ ಭರವಸೆಗಳ ಈಡೇರಿಕೆ ಸಾಧ್ಯವಾ ಇಲ್ಲವಾ ಎಂಬುದನ್ನು ತಿಳಿದುಕೊಂಡ ಮೇಲೆಯೇ ನಮ್ಮಿಂದ ಈಡೇರಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ ಎಂದ ಸಿದ್ದರಾಮಯ್ಯ. ಈ ವಿಚಾರವನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ. ಮೋದಿ ಅವರು ಕರ್ನಾಟಕದ ಜನರಿಗೆ ತಪ್ಪು ಮಾಹಿತಿ ನೀಡಬೇಡಿ, ನಿಮಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಇಲ್ಲ ಎಂದು ಕಾಣುತ್ತದೆ. ನಾವು ನುಡಿದಂತೆ ನಡೆಯುವವರು, ಕೊಟ್ಟ ಭರವಸೆಗಳನ್ನು ಹಿಂದೆಯೂ ಈಡೇರಿಸಿದ್ದೇವೆ, ಮುಂದೆಯೂ ಈಡೇರಿಸುತ್ತೇವೆ ಎಂದರು.

top videos
    First published: