ಬೆಂಗಳೂರು: ಗುಜರಾತ್ ಮೂಲದ (Gujarat) ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ (KMF) ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (KMF) ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಕೆಎಂಎಫ್ ವಸ್ತುಗಳನ್ನು ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಜನರಿಗೆ ಉತ್ತಮ ನಂದಿನಿ ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳು ಸಿಗುತ್ತಿಲ್ಲ. ಕೊಳ್ಳುವ ಗ್ರಾಹಕರ ಕೈ ಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ. ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಂಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಕೇಂದ್ರದ ಮೋದಿ ಸರ್ಕಾರ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‍ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಯಾರಿ ನಡೆಸಿತ್ತು. ರೈತರು ವಿರೋಚಿತ ಪ್ರತಿಭಟಿಸಿದ ಕಾರಣದಿಂದ ತಾತ್ಕಾಲಿಕವಾಗಿ ಮೋದಿ ಸರ್ಕಾರ ಹಿಂದೆ ಸರಿದಿದೆ ಎಂದು ಅವರು ಆರೋಪಿಸಿದ್ದಾರೆ.
ಬೀಫ್ ಎಕ್ಸ್‌ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆ
ಬಿಜೆಪಿ ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ 2019 ರಲ್ಲಿ 1.29 ಕೋಟಿ ಹಸು ಎಮ್ಮೆ, ಎತ್ತು, ಕೋಣಗಳಿದ್ದವು. ಅವು 2022 ರ ಡಿಸೆಂಬರ್ ವೇಳೆಗೆ 1.15 ಕೋಟಿ ಇಳಿಕೆಯಾಗಿವೆ ಎಂದಿರುವ ಸಿದ್ದರಾಮಯ್ಯ, ಈ 14 ಲಕ್ಷ ಜಾನುವಾರುಗಳು ಎಲ್ಲಿಗೆ ಹೋದವು? ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಕಡಿಮೆಯಾಗುವುದಕ್ಕೆ ಕಾರಣಗಳೇನು? ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಬಹುತೇಕ ಗೋಶಾಲೆಗಳಲ್ಲಿ ಗಂಡು ಕರುಗಳ ಪ್ರಮಾಣ ಶೇ.10 ಕ್ಕಿಂತ ಕಡಿಮೆ ಇದೆ. ನಿಸರ್ಗ ತತ್ವದ ಪ್ರಕಾರ ಶೇ.50 ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಸಬರ್‍ವಾಲ್‍ಗಳು, ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ಬೀಫ್ ಎಕ್ಸ್‌ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ. ಹಾಗಿದ್ದರೆ ಯಾರ ಅಭಯದಿಂದ ಇವರೆಲ್ಲ ಎಕ್ಸ್‍ಪೋರ್ಟ್ ಮಾಡುತ್ತಿದ್ದಾರೆ? ಇದಕ್ಕೆಲ್ಲ ಬಿಜೆಪಿ ಸರ್ಕಾರಗಳು ಉತ್ತರ ಹೇಳಬೇಕು ಎಂದು ಹೇಳಿದ್ದಾರೆ.
ಪಶುಪಾಲಕರಿಗೆ ಪ್ರತಿ ದಿನ 11 ಕೋಟಿ ನಷ್ಟ
ಇನ್ನು, ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತಂತೆ ಅತ್ಯಂತ ಆತಂಕಕಾರಿಯಾದ ವರದಿಗಳನ್ನು ಪ್ರಕಟಿಸಿವೆ. ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಒಂದು ಪ್ರಮುಖ ಸಾಧನವಾಗಿತ್ತು. ಇದಕ್ಕೆ ಯಾರು ಹೊಣೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Congress ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೆ ನೇರ ಕಾರಣ ಇದಕ್ಕೆ ಕಾರಣವಲ್ಲವೆ? ಎಂದಿರುವ ಸಿದ್ದರಾಮಯ್ಯ, ಪತ್ರಿಕೆಗಳು ವರದಿ ಮಾಡಿರುವಂತೆ ರಾಜ್ಯದ ರೈತರು ಹಸುಗಳನ್ನು ವ್ಯಾಪಕವಾಗಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಚರ್ಮಗಂಟು ಕಾಯಿಲೆ ಕೂಡ ಲಕ್ಷಾಂತರ ಜಾನುವಾರುಗಳನ್ನು ರೋಗಗ್ರಸ್ತವಾಗುವಂತೆ ಮಾಡಿದೆ. ಸುಮಾರು 32000 ಜಾನುವಾರುಗಳು ಈ ರೋಗದಿಂದ ಮರಣ ಹೊಂದಿವೆ ಎಂದು ಹೇಳಿದ್ದಾರೆ.
ಇನ್ನು ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದಿರುವ ಅವರು, ಗ್ರಾಮೀಣ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಯ ಚೈತನ್ಯವನ್ನು ನಾಶ ಮಾಡಲು ಮನುವಾದಿ ಶಕ್ತಿಗಳು ಹಾಗೂ ಕಾರ್ಪೊರೇಟ್ ಶಕ್ತಿಗಳು ಒಂದಾಗಿ ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ