ಐಎಎಸ್, ಐಪಿಎಸ್ ಅಧಿಕಾರಿಗಳು ಸಿಂಗಂ ಇಮೇಜ್ ಬಳಸಿಕೊಂಡು ಕೆಲಸ ಮಾಡಬೇಡಿ: ಪ್ರತಾಪ್ ಸಿಂಹ

ನಿಮ್ಮ ಜಿಲ್ಲೆಗೆ ಅವರು ಮಾಡಿರುವ ಕೆಲಸಗಳನ್ನು ಆಧರಿಸಿ ಅವರಿಗೆ ಅಭಿಮಾನಿಗಳಾಗಿ. ಅವರ ಸಾಮಾಜಿಕ ತಾಣಗಳಲ್ಲಿರುವ ಪೋಸ್ಟ್ ನೋಡಿಕೊಂಡು ಅವರಿಗೆ ಅಭಿಮಾನಿಗಳಾಗಬೇಡಿ ಎಂದು ಸಿಂಹ ಮನವಿ ಮಾಡಿಕೊಂಡಿದ್ದಾರೆ.

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

  • Share this:

ಚಲನಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಖಡಕ್ ನಾಯನ ನಟರ ಪಾತ್ರಗಳಲ್ಲಿ ತೋರಿಸುವಾಗ ಸಿಂಹದಂತೆ ಘರ್ಜನೆ ಇರುವ ಡಯಲಾಗ್‌ಗಳು, ದಿಗ್ಮೂಢರನ್ನಾಗಿಸುವ ಫೈಟಿಂಗ್ ಸೀನ್‌ಗಳು, ಖಳನಾಯಕರನ್ನು ಚೇಸ್ ಮಾಡುವ ದೃಶ್ಯಗಳು ಹೀಗೆ ಚಿತ್ರಕ್ಕೆ ಕೊಂಚ ಮಹತ್ವ ನೀಡಲು ದೃಶ್ಯಗಳಲ್ಲಿ ಈ ವಿಷಯಗಳನ್ನು ಸೇರಿಸಲಾಗುತ್ತದೆ. ಹೀಗೆ ಪೊಲೀಸ್ ಹಿರಿಮೆ ಮಹತ್ವವನ್ನು ಸಾರುವ ಅದೆಷ್ಟೋ ಚಿತ್ರಗಳು ಹಿಂದೆ ಸಿನಿ ತಾಣಗಳಲ್ಲಿ ಹೆಸರು ಮಾಡಿವೆ ಹಾಗೂ ಇಂದಿಗೂ ಇಂತಹ ಚಿತ್ರಗಳು ಪ್ರೇಕ್ಷಕರನ್ನು ಮುದಗೊಳಿಸುತ್ತವೆ. ಅಂತಹ ಒಂದು ಚಿತ್ರವಾಗಿದೆ ‘ಸಿಂಗಂ’ .ಹಿಂದಿ, ತಮಿಳು, ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಿದ್ದು ಚಿತ್ರಗಳ ಕಥಾ ನಾಯಕರು ದಕ್ಷಿಣ ಹಾಗೂ ಉತ್ತರ ಭಾರತಗಳಲ್ಲಿ ಹೆಸರುವಾಸಿಯಾದ ನಾಯಕರಾಗಿದ್ದಾರೆ.


ಸಿಂಗಂ ಚಿತ್ರದ ಅನೇಕ ದೃಶ್ಯಗಳು ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿವೆ. ಖಡಕ್ ಪೊಲೀಸ್ ಅಧಿಕಾರಿಯ ಖದರ್, ಅವರ ಸಂಭಾಷಣೆಗಳು, ಹೊಡೆದಾಡುವ ದೃಶ್ಯಗಳು ಹೀಗೆ ಅದೆಷ್ಟೋ ಜನರಿಗೆ ಪೊಲೀಸ್ ಹುದ್ದೆಗೆ ಸೇರಬೇಕೆಂಬ ತುಡಿತವನ್ನು ಈ ಚಿತ್ರ ಉಂಟುಮಾಡಿದೆ ಎಂದರೆ ತಪ್ಪಾಗಲಾರದು. ಆದರೆ ನಿಜಜೀವನದಲ್ಲಿ ಸಿಂಗಂ ಆಗುವುದು ಎಂದರೆ ಅದು ಸಿನಿಮಾ ಜೀವನಕ್ಕಿಂತ ಭಿನ್ನವಾಗಿರುತ್ತದೆ.


ನಾಯಕ ನಟ ಮಾಡಿದ ಅದೆಲ್ಲಾ ಹೊಡೆದಾಟ, ಸಂಭಾಷಣೆ, ಖದರ್ ಅನ್ನು ಸಾಮಾನ್ಯ ಪೊಲೀಸ್ ಅಧಿಕಾರಿ ತಮ್ಮ ವೃತ್ತಿಯಲ್ಲಿ ತೋರ್ಪಡಿಸಲಾಗುವುದಿಲ್ಲ. ಇದೇ ಮಾತನ್ನೇ ದೇಶದ ಪ್ರಧಾನಿ ನರೇಂದ್ರ ಮೋದಿಯವರು 2018 ನೇ ಬ್ಯಾಚ್‌ನ ಐಪಿಎಸ್ ನೇಮಕಾತಿಯನ್ನು ಉದ್ದೇಶಿಸಿ “ಸಿಂಗಂ” ಪ್ರಭಾವಕ್ಕೆ ಒಳಗಾಗಬೇಡಿ ಎಂಬ ಮಾತನ್ನು ಹೇಳಿದ್ದಾರೆ.


ಪೊಲೀಸ್ ಸಮವಸ್ತ್ರವು ಹೆಮ್ಮೆಯನ್ನು ಪ್ರೇರೇಪಿಸಿದ್ದು ವಿಸ್ಮಯದೊಂದಿಗೆ ಅಧಿಕಾರವು ಯಾವುದೇ ಸಂಬಂಧವನ್ನು ಹೊಂದಿಲ್ಲ. ಸಾಮಾನ್ಯವಾಗಿ ಜನರಲ್ಲಿ ಪೊಲೀಸ್ ಎಂದಾಗಲೇ ನಡುಕ ಉಂಟಾಗುತ್ತದೆ. ಇದಕ್ಕೆ ಕಾರಣ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಿಂಬಿಸುವ ವೈಖರಿಯಾಗಿದೆ. ರೌಡಿಗಳಿಗೆ ಸಿಂಹಸ್ನಪ್ನದಂತಿರುವ ಪೊಲೀಸ್ ನಾಯಕರೇ ಸಿನಿಮಾಗಳಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದು ಪೊಲೀಸ್ ಎಂದರೆ ಹೀಗಿರಬೇಕು ಎಂಬ ಭಾವನೆ ಜನರ ಮನಸ್ಸಿನಲ್ಲಿರುತ್ತದೆ.


ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಶುಭ ಸುದ್ದಿ; ಇಂದು ಇಳಿಕೆ ಕಂಡ ಬಂಗಾರದ ಬೆಲೆ

ಜನರ ಮನಸ್ಸಿನಲ್ಲಿ ಪೊಲೀಸ್ ಎಂದರೆ ಭಯ ಇಲ್ಲವೇ ಸಹಾನುಭೂತಿ ಹುಟ್ಟಬೇಕೆ ಅಥವಾ ನಮ್ಮನ್ನು ರಕ್ಷಿಸುವ ನಾಯಕರು, ಜನರನ್ನು ಕಾಪಾಡುವವರು ಎಂಬ ನಂಬಿಕೆ ಬರಬೇಕೇ ಎಂಬುದನ್ನು ನೀವೇ ನಿರ್ಧರಿಸಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.


ನಾಗರಿಕ ಸಮಾಜದೊಂದಿಗೆ ಪೊಲೀಸರ ಅನುಬಂಧ ಹೇಗಿರಬೇಕು ಎಂಬ ಅಂಶಕ್ಕೆ ನರೇಂದ್ರ ಮೋದಿ ಒತ್ತು ನೀಡಿದ್ದು ಆಡಳಿತದ ಒಂದು ಭಾಗವಾಗಿ ಪ್ರಮುಖ ಜವಾಬ್ದಾರಿ ಹೊತ್ತಿರುವ ಪೊಲೀಸರು ಬಹುಮುಖ ವೇದಿಕೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮೋದಿಯವರ ಇದೇ ಮಾತನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ಅನಿಸಿಕೆಗಳನ್ನು ಲೋಕಸಭಾ ಸಂಸದರಾದ ಪ್ರತಾಪ್ ಸಿಂಹ ತಮ್ಮದೇ ಮಾತುಗಳಲ್ಲಿ ವರ್ಣಿಸಿದ್ದಾರೆ.


ಇತ್ತೀಚೆಗೆ ಮೈಸೂರಿನಲ್ಲಿ ನಡೆದ KDEM ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರ ಇದೇ ಮಾತುಗಳನ್ನು ಪ್ರತಿಧ್ವನಿಸಿದ್ದ ಸಂಸದರು ಐಪಿಎಸ್ ಅಧಿಕಾರಿಗಳು ಮಾತ್ರವಲ್ಲದೆ ಐಎಎಸ್ ಅಧಿಕಾರಿಗಳೂ ಕೂಡ ಪೊಲೀಸ್‌ ಎಂಬುದು ಗೂಂಡಾಗಿರಿಯಲ್ಲ ಜನರ ಸೇವೆ ಎಂಬುದನ್ನು ಪ್ರದರ್ಶಿಸಬೇಕಿದೆ ಎಂದು ತಿಳಿಸಿದ್ದಾರೆ.


ಪೊಲೀಸ್ ಅಧಿಕಾರಿಗಳು ಹಣ, ಅಧಿಕಾರ ಹಾಗೂ ಕೀರ್ತಿಗಾಗಿ ಕೆಲಸ ಮಾಡದೇ ಜನರ ಕಲ್ಯಾಣಕ್ಕಾಗಿ ತಮ್ಮ ಹುದ್ದೆಯನ್ನು ಬಳಸಬೇಕು. ಸಿನಿಮಾಗಳಲ್ಲಿರುವ ಗಿಮಿಕ್‌ಗಳನ್ನು ನೋಡಿ ತಮ್ಮ ವೃತ್ತಿಯಲ್ಲಿ ಇಂತಹ ಅಭ್ಯಾಸಗಳನ್ನು ಅನ್ವಯಿಸಿಕೊಳ್ಳಬಾರದು ಎಂಬುದನ್ನು ಪ್ರತಾಪ್ ಸಿಂಹ ಒತ್ತಿನುಡಿದಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಕೂಡ ಪ್ರಚಾರದ ಆಸೆ ಇರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಮೇಲೆ ನಿಗಾ ಇಡಬೇಕು ಎಂಬ ಮಾಹಿತಿ ನೀಡಿದ್ದಾರೆ.


ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ನನ್ನಂತಹ ರಾಜಕಾರಣಿಗಳು ಕೂಡ ನಮ್ಮ ಹುದ್ದೆಯ ಮಹತ್ವವನ್ನು ಅರಿತುಕೊಂಡು ಕೆಲಸ ಮಾಡಬೇಕು. ಈ ನಿಯಮಗಳು ನನಗೂ ಅನ್ವಯವಾಗುತ್ತದೆ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ವ್ಯತ್ಯಾಸದ ಅರಿವಿಲ್ಲ ಎಂಬುದನ್ನು ಟೀಕಿಸಿದ್ದಾರೆ.


ಸಂಬಳ ಪಡೆಯುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಸಿಂಹ ನುಡಿದಿದ್ದಾರೆ. ರಾಜಕಾರಣಿಗಳು ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸಲು ತಮ್ಮ ಕೈಯಿಂದಲೇ ಹಣ ಖರ್ಚುಮಾಡುತ್ತಾರೆ. ತಮ್ಮ ವೈಯಕ್ತಿಕ ಖಾತೆಗಳ ಹಣ ಪಡೆದು ಸಾಮಾಜಿಕ ಕೆಲಸಗಳನ್ನು ನಡೆಸುತ್ತಾರೆ.


ಇದನ್ನೂ ಓದಿ:Mysuru Gang Rape Case: ಸಂತ್ರಸ್ಥೆ ಬಳಿ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾಮುಕರು, ಕಂಠಪೂರ್ತಿ ಕುಡಿದು ಗ್ಯಾಂಗ್​ ರೇಪ್

ಒಟ್ಟಿನಲ್ಲಿ ನಾವು ಹಾಗೂ ಸರಕಾರದಿಂದ ನಿಯೋಜಿತರಾಗಿರುವ ಸಂಬಳ ಪಡೆಯುವ ಅಧಿಕಾರಿಗಳಿಗೆ ಕರ್ತವ್ಯ ನಿಷ್ಠೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೆಲವೊಬ್ಬರು ಅಧಿಕಾರಿಗಳು ತಮ್ಮ ಅಧಿಕೃತ ಖಾತೆಯನ್ನು ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಸುತ್ತಲೂ ಒಂದಷ್ಟು ಜನರನ್ನು ಅಭಿಮಾನಿಗಳೆಂದು ನಿರ್ಮಿಸಿಕೊಂಡಿದ್ದಾರೆ. ಹೀಗೆ ತಮ್ಮ ವೈಯಕ್ತಿಕ ಚಿತ್ರಣವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿರುವುದು ಶಿಕ್ಷಾರ್ಹ ಅಪರಾಧ ಎಂದು ಪ್ರತಾಪ್ ಸಿಂಹ ಖಂಡಿಸಿದ್ದಾರೆ.


ಇದರಿಂದಾಗಿ ಜನರ ಮನಸ್ಸಿನಲ್ಲಿ ರಾಜಕಾರಣಿಗಳು ಕೆಟ್ಟವರು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳು ಒಳ್ಳೆಯವರು ಎಂಬ ಭಾವನೆ ಮೂಡುತ್ತದೆ. ಇಂತಹ ಅಧಿಕಾರಿಗಳ ಬಳಿ ಅವರು ಮಾಡುತ್ತಿರುವ ಕೆಲಸದ ಕುರಿತು ಪ್ರಶ್ನೆ ಎತ್ತಿದರೆ ನಮ್ಮ ಇಮೇಜ್ ಅನ್ನೇ ಹಾಳುಮಾಡುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಅಂಶವನ್ನು ಕೆಲವೊಂದು ಅಧಿಕಾರಿಗಳು ಮರೆತಿದ್ದಾರೆ. ಇಬ್ಬರೂ ಕೆಲಸ ಮಾಡುವುದು ರಾಜ್ಯಕ್ಕಾಗಿ, ಜನತೆಗಾಗಿ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದ್ದಾರೆ.


ಎಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳು ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಅಧಿಕಾರಿಗಳು ತಮ್ಮ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಅವರನ್ನು ಯಾರೂ ಸಿಂಗಂ ಎಂದು ಕರೆಯುವುದಿಲ್ಲ ಹಾಗೂ ಪ್ರಚಾರದ ಆಸೆಯಿಂದ ಕೆಲಸ ಕೂಡ ಮಾಡುವುದಿಲ್ಲ. ಸರಕಾರಕ್ಕೆ ಗೊತ್ತಿಲ್ಲದೆಯೇ ಕೆಲವೊಂದು ಅಧಿಕಾರಿಗಳು ಜನರಿಂದ ಸಹಾನುಭೂತಿಯನ್ನು ಪಡೆಯುವುದಕ್ಕಾಗಿ ಏಜೆನ್ಸಿಗಳನ್ನು ನೇಮಿಸಿಕೊಂಡಿದ್ದಾರೆ. ಈ ಏಜೆನ್ಸಿಗಳು ಅಧಿಕಾರಿಗಳ ಪರವಾಗಿ ಕೆಲಸ ಮಾಡುತ್ತವೆ ಹಾಗೂ ಆ ಅಧಿಕಾರಿಗಳನ್ನು ಜನರ ಕಣ್ಣಿನಲ್ಲಿ ಒಳ್ಳೆಯವರು ಎಂಬುದಾಗಿ ಬಿಂಬಿಸುತ್ತವೆ. ಈ ಏಜೆನ್ಸಿಗಳಿಗೆ ಅಧಿಕಾರಿಗಳು ಎಲ್ಲಿಂದ ಹಣ ನೀಡುತ್ತಿದ್ದಾರೆ ಎಂಬುದನ್ನು ಸರಕಾರ ತನಿಖೆ ಮಾಡಬೇಕು. ಪ್ರಚಾರದ ಹಸಿವಿನಿಂದ ಕಾರ್ಯನಿರ್ವಹಿಸುವ ಇಂತಹ ಅಧಿಕಾರಿಗಳನ್ನು ಪೋಷಿಸಬೇಕೇ ಬೇಡವೇ ಎಂಬುದು ಜನರಿಗೆ ಬಿಟ್ಟ ವಿಚಾರವಾಗಿದೆ.
ನಿಮ್ಮ ಜಿಲ್ಲೆಗೆ ಅವರು ಮಾಡಿರುವ ಕೆಲಸಗಳನ್ನು ಆಧರಿಸಿ ಅವರಿಗೆ ಅಭಿಮಾನಿಗಳಾಗಿ. ಅವರ ಸಾಮಾಜಿಕ ತಾಣಗಳಲ್ಲಿರುವ ಪೋಸ್ಟ್ ನೋಡಿಕೊಂಡು ಅವರಿಗೆ ಅಭಿಮಾನಿಗಳಾಗಬೇಡಿ ಎಂದು ಸಿಂಹ ಮನವಿ ಮಾಡಿಕೊಂಡಿದ್ದಾರೆ. ರಾಜಕಾರಣಿಗಳನ್ನು ಕೆಟ್ಟವರೆಂದು ಜರಿಯುವ ಮುನ್ನ ಆ ರಾಜಕಾರಣಿಗಳಿಗೆ ನೀವು ಮತ ಹಾಕಿರುವುದು ಅವರಲ್ಲಿರುವ ಒಳ್ಳೆಯ ಭಾವನೆಯನ್ನು ಗುಣವನ್ನು ನೋಡಿ ಎಂಬುದನ್ನು ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ.

Published by:Latha CG
First published: