ಬೆಂಗಳೂರು: ವಿಧಾನಸಭೆ ಅಧಿವೇಶನದ ವೇಳೆ ನೆನ್ನೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ವಿಧಾನಸಭೆ ವಿಸರ್ಜಿಸಿ ಬನ್ನಿ. ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೆ ನೋಡೋಣ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಇದೇ ವಿಚಾರವಾಗಿ ನೆನ್ನೆ ಸದನದಲ್ಲಿ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಂದು ಈ ವಿಷಯವಾಗಿ ಬಿಜೆಪಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ಪ್ರತಿಏಟು ನೀಡಿದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ, ಸಿದ್ದರಾಮಯ್ಯ ಅವರೇ, ಯಾವ ಮಾನದಂಡ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸೋಣ ಎಂದು ಹೇಳುತ್ತಿದ್ದೀರಿ? ಲೋಕಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಸೋತಿದ್ದೀರಿ, ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸೋತಿದ್ದೀರಿ. ಮುಂದೆ ಕಾಂಗ್ರೆಸ್ ಸೋಲುವುದನ್ನು ಅರಿತು ಡಿ.ಕೆ.ಶಿವಕುಮಾರ್ ಅವರ ಬಲ ಕುಗ್ಗಿಸುವ ಪ್ರಯತ್ನದ ಭಾಗವೇ ಇದು ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿತ್ತು.
ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರ್ಕಾರ.
ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್ ಸಂಪುಟ.
ಹನಿಟ್ರಾಪ್ ಮೂಲಕ ಆಪರೇಷನ್ ಕಮಲ.
ಯತ್ನಾಳ್ ಹೇಳಿದಂತೆ @BSYBJP ಫ್ಯಾಮಿಲಿ ಸರ್ಕಾರ.
'ದಂಡ'ದ ಸರ್ಕಾರಕ್ಕೆ 'ಮಾನ' ಎಲ್ಲಿದೆ @BJP4Karnataka?
ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ. https://t.co/Zq2Dzh68QN
— Karnataka Congress (@INCKarnataka) March 16, 2021
ಇದನ್ನು ಓದಿ: ಆಪರೇಷನ್ ಕಮಲ ವಿಚಾರವಾಗಿ ವಿಧಾನಸಭೆಯಲ್ಲಿ ಹಾಲಿ, ಮಾಜಿ ಸಿಎಂಗಳ ನಡುವೆ ಬಿಸಿ ಬಿಸಿ ಚರ್ಚೆ!
ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ನೆನ್ನೆ (ಸೋಮವಾರ) ವಿಧಾನಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಿಎಂಗಳ ನಡುವೆ ವಾಕ್ಸಮರವೇ ನಡೆಯಿತು. ಆಪರೇಷನ್ ಕಮಲ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ