ಬಿಎಸ್​ವೈ ಸರ್ಕಾರ ಸೇಫ್ ಆದ್ರೂ ಮುಂದುವರೆದ ಆಪರೇಷನ್ ಕಮಲ; ಜೆಡಿಎಸ್ ಪಕ್ಷದ ಮತ್ತಿಬ್ಬರು ಶಾಸಕರು ಬಿಜೆಪಿ ತೆಕ್ಕೆಗೆ?

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಈ ಹಿಂದೆಯೇ ಜೆಡಿಎಸ್ ತೊರೆದು ಬಿಜೆಪಿ ಜೊತೆ ಕೈ ಜೋಡಿಸುವ ಇರಾದೆಯನ್ನು ಹೊಂದಿದ್ದರು. ಆದರೆ, ರಾಜಕೀಯ ಭವಿಷ್ಯದ ಭಯದಿಂದ ಜೆಡಿಎಸ್ ತೊರೆಯಲು ಹಿಂದೇಟು ಹಾಕಿದ್ದರು.

news18-kannada
Updated:December 17, 2019, 10:27 AM IST
ಬಿಎಸ್​ವೈ ಸರ್ಕಾರ ಸೇಫ್ ಆದ್ರೂ ಮುಂದುವರೆದ ಆಪರೇಷನ್ ಕಮಲ; ಜೆಡಿಎಸ್ ಪಕ್ಷದ ಮತ್ತಿಬ್ಬರು ಶಾಸಕರು ಬಿಜೆಪಿ ತೆಕ್ಕೆಗೆ?
ಪ್ರಾತಿನಿಧಿಕ ಚಿತ್ರ.
  • Share this:
ಮಂಡ್ಯ (ಡಿಸೆಂಬರ್ 17); ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಭರ್ಜರಿಯಾಗಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ಸೇಫ್ ಆಗಿದೆ. ಆದರೆ, ಸರ್ಕಾರ ಸೇಫ್ ಆದ್ರೂ ಬಿಜೆಪಿ ಆಪರೇಷನ್ ಕಮಲವನ್ನು ನಿಲ್ಲಿಸಿಲ್ಲವೇ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಪ್ರಸ್ತುತ ಬಿಜೆಪಿ ಪಕ್ಷದ ಒಳಗೆ ನಡೆಯುತ್ತಿರುವ ಬೆಳವಣಿಗೆಗಳು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದ್ದರೂ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ನೆಲೆ ಇಲ್ಲ. ಈ ಭಾಗದಲ್ಲಿ ಕಮಲ ಬೇರೂರಬೇಕು ಎಂಬುದು ಬಿಜೆಪಿ ನಾಯಕರ ಹಲವು ವರ್ಷದ ಕನಸು. ಆದರೆ, ಅದು ಸುಲಭದ ಮಾತಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರಿಲ್ಲದೆ ಕಮಲವನ್ನು ಬೆಳೆಸಲು ಸಾಧ್ಯವಿಲ್ಲ ಎಂಬ ವಿಚಾರ ಬಿಜೆಪಿ ವರಿಷ್ಟರಿಗೂ ಗೊತ್ತು.

ಇದೇ ಕಾರಣಕ್ಕೆ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕುವ ಮೂಲಕ ಮಂಡ್ಯದ ಪ್ರಭಾವಿ ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಮುಂದಾಗಿದೆಯಾ? ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿದೆ. ಈ ಬೆನ್ನಿಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ಪಕ್ಷಕ್ಕೆ ಗುಡ್​ಬೈ ಹೇಳಲು ತುದಿಗಾಲಲ್ಲಿ ನಿಂತಿದ್ದು ಜೆಡಿಎಸ್ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಗೆ ಗುಡ್ ಬೈ ಹೇಳಲಿದ್ದಾರಾ ಈ ಶಾಸಕರು?

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಈ ಹಿಂದೆಯೇ ಜೆಡಿಎಸ್ ತೊರೆದು ಬಿಜೆಪಿ ಜೊತೆ ಕೈ ಜೋಡಿಸುವ ಇರಾದೆಯನ್ನು ಹೊಂದಿದ್ದರು. ಆದರೆ, ರಾಜಕೀಯ ಭವಿಷ್ಯದ ಭಯದಿಂದ ಜೆಡಿಎಸ್ ತೊರೆಯಲು ಹಿಂದೇಟು ಹಾಕಿದ್ದರು.

ಆದರೆ, ಉಪ ಚುನಾವಣೆಯಲ್ಲಿ ಕೆ.ಆರ್. ಪೇಟೆ ಫಲಿತಾಂಶ ಈ ಇಬ್ಬರೂ ಶಾಸಕರ ಮನಸ್ಸು ಬದಲಿಸುವಲ್ಲಿ ಯಶಸ್ವಿಯಾಗಿದೆ, ಕೆ.ಆರ್. ಪೇಟೆಯಂತೆ ತಮ್ಮ ಕ್ಷೇತ್ರದಲ್ಲೂ ಕಮಾಲ್ ನಡೆಯುತ್ತೆ ಎಂಬ ಭರವಸೆ ಇವರಲ್ಲಿ ಮೂಡಿದೆ. ಹೀಗಾಗಿ ಬಿಜೆಪಿ ಕರೆಗೆ ಈ ಇಬ್ಬರೂ ನಾಯಕರು ಕಾಯುತ್ತಿದ್ದಾರೆ ಎಂಬ ಸುದ್ದಿಗಳು ಇದೀಗ ರೆಕ್ಕೆಪುಕ್ಕಗಳು ಬಿಚ್ಚಿಕೊಂಡಿವೆ.

ಈ ಅನುಮಾನಕ್ಕೆ ಇಂಬು ನೀಡುವಂತೆ ಶಾಸಕ ಸುರೇಶ್ ಗೌಡ ಮೊನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಬಿಎಸ್​ವೈ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಇದನ್ನೆಲ್ಲಾ ನೋಡಿದರೆ ಈ ಇಬ್ಬರೂ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದು ಸಾಧ್ಯವಾದರೆ ಮಂಡ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ಭದ್ರ ಅಡಿಪಾಯ ಹಾಕಲು ಸಾಕಷ್ಟು ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.ಆದರೆ, ಈ ಕುರಿತು ನ್ಯೂಸ್​ 18 ಕನ್ನಡಕ್ಕೆ ಸ್ಪಷ್ಟನೆ ನೀಡಿರುವ ಶ್ರೀರಂಗ ಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ "ನಾನು ಮತ್ತು ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತೇವೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ನಾವು ಯಾವುದೇ ಕಾರಣಕ್ಕೂ ಜೆಡಿಎಸ್​ ತೊರೆಯುವ ಮಾತೆ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಭವಿಷ್ಯದ ರಾಜಕಾರಣದಲ್ಲಿ ಎಂತಹಾ ನಾಟಕೀಯ ಬೆಳವಣಿಗೆ ಬೇಕಾದರೂ ನಡೆಯಬಹುದು ಎಂಬುದಕ್ಕೆ ಭೂತಕಾಲದಲ್ಲಿ ಸಾಕಷ್ಟು ಘಟನೆಗಳು ನಿದರ್ಶನವಾಗಿವೆ.

ಇದನ್ನೂ ಓದಿ : ನೀರಾವರಿ ಖಾತೆಗೆ ಪಟ್ಟು ಹಿಡಿದ ರಮೇಶ್ ಜಾರಕಿಹೊಳಿ, ಮೂಲ ಬಿಜೆಪಿಗರಿಂದ ಅಡ್ಡಗಾಲು; ಬಿಎಸ್​ವೈ ಮೇಲೆ ಹೆಚ್ಚಿದ ಒತ್ತಡ
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ