ಬೆಂಗಳೂರು (ಆ. 25): ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದ ಕೆಲವು ಹಿರಿಯ ನಾಯಕರು ಪತ್ರ ಬರೆದಿದ್ದರು. ನಾನು ಈಗಲೂ ಹೇಳುತ್ತೇನೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಲ್ಲುವ ಶಕ್ತಿಯಿದ್ದರೆ ಅದು ರಾಹುಲ್ ಗಾಂಧಿಗೆ ಮಾತ್ರ ಎಂದು ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎದುರು ನಿಲ್ಲುವ ಶಕ್ತಿ ಇರುವುದು ರಾಹುಲ್ ಗಾಂಧಿ ಅವರಿಗೆ ಮಾತ್ರ. ಮೋದಿ ವಿರುದ್ಧ ಫೈಟ್ ಮಾಡೋಕೆ ರಾಹುಲ್ ಸೂಕ್ತವಾದ ವ್ಯಕ್ತಿ. ರಾಹುಲ್ ಪ್ರಶ್ನೆಗೆ ಮೋದಿ ಉತ್ತರಿಸೋಕೆ ಆಗುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿಯವರೇ ಮುಂದೆ ಬರಬೇಕು. ಬಿಜೆಪಿಯವರು ಕೇವಲ ಹಿಂದುತ್ವ ಹಿಂದುತ್ವ ಎನ್ನುತ್ತಾ ಇದ್ದರೆ ಹೇಗೆ? ನಾವೆಲ್ಲರೂ ಹಿಂದೂಗಳೇ ಅಲ್ಲವೇ? ಜೈನ್, ಸಿಖ್, ಬೌದ್ಧ ಎಲ್ಲರೂ ದೇಶದಲ್ಲಿ ಬಾಳಬೇಕಲ್ಲವೆ? ಸಂವಿಧಾನಕ್ಕೆ ಬಿಜೆಪಿಯವರು ಗೌರವ ಕೊಡಬೇಕು. ಎಲ್ಲಾ ಧರ್ಮಗಳಿಗೆ ಬದುಕುವ ಅವಕಾಶ ನೀಡಬೇಕು. ಆಗ ಮಾತ್ರ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಪತ್ರ ಬರೆದ ಹಿರಿಯ ನಾಯಕರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆಂಬ ಮಾತನ್ನು ರಾಹುಲ್ ಗಾಂಧಿ ಹೇಳಿಲ್ಲ. ನಾನು 7 ಗಂಟೆಯವರೆಗೆ ಸಭೆಯಲ್ಲಿ ಕೂತಿದ್ದೇನೆ. ಸೋನಿಯಾ ಗಾಂಧಿ ಆರೋಗ್ಯ ಸರಿಯಿಲ್ಲ. ಇಂತಹ ವೇಳೆ ನೀವು ಪತ್ರ ಬರೆದಿದ್ದು ಸರಿಯೇ? ಎಂಬ ಮಾತನ್ನಷ್ಟೇ ರಾಹುಲ್ ಗಾಂಧಿಯವರು ಕೇಳಿದ್ದರು ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವಾಗಲಿ; ಸೋನಿಯಾಗೆ ಸಿದ್ದರಾಮಯ್ಯ ಪತ್ರ
ಪತ್ರ ಬರೆದವರು ಪಕ್ಷದ ಬಗ್ಗೆ ಭಿನ್ನಾಬಿಪ್ರಾಯ ವ್ಯಕ್ತಪಡಿಸಿಲ್ಲ. ಅವರು ಪಕ್ಷ ಸಂಘಟನೆ ಉದ್ದೇಶದಿಂದ ಮಾತ್ರ ಪತ್ರ ಬರೆದಿದ್ದಾರೆ. ಅವರೇನೂ ಭಿನ್ನಾಬಿಪ್ರಾಯ ಹೊರಹಾಕಿಲ್ಲ. ನಾಯಕತ್ವದ ಬಗ್ಗೆ ಪತ್ರ ಬರೆದವರು ವಿರೋಧಿಸಿಲ್ಲ. ಸಾಂಸ್ಥಿಕ ಚುನಾವಣೆ ನಡೆಸಿ ಎಂದಷ್ಟೇ ಹೇಳಿದ್ದಾರೆ. ಪತ್ರದಲ್ಲೂ ಅವರು ನಾಯಕತ್ವದ ಬಗ್ಗೆ ಪ್ರಶ್ನಿಸಿಲ್ಲ. ಪಕ್ಷಕ್ಕೆ ಗಾಂಧಿ ಕುಟುಂಬವೇ ಅನಿವಾರ್ಯ. ಇದನ್ನ ನಾವು ಹೇಳ್ತಿಲ್ಲ, ಜನರೇ ಹೇಳುತ್ತಿದ್ದಾರೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ನಿನ್ನೆಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಿ, ಸುಧೀರ್ಘ ಚರ್ಚೆ ನಡೆಸಿದ್ದು ನನ್ನ ಅನುಭವದಲ್ಲಿ ಇದೇ ಮೊದಲು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾರೂ ಸಹ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿಲ್ಲ. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷನಿಷ್ಠರು. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಅವಕಾಶ ಇರಬೇಕು. ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಯಾರೂ ಪ್ರಶ್ನೆ ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Reservoir Water Level: ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ನಮಗೆ ಗೌರವವಿದೆ. ಪಕ್ಷದ ನಾಯಕರ ವಿರುದ್ದ ಯಾರೂ ಮಾತನಾಡಿಲ್ಲ. ಸೋನಿಯಾ ಗಾಂಧಿ ಅವರು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿ ಇದ್ದಾರೆ. ಕಾಂಗ್ರೆಸ್ನಲ್ಲಿ ಅಧಿಕಾರವಿಲ್ಲದೆ ಹೆಚ್ಚು ಕಾಲ ಅಧ್ಯಕ್ಷರಾಗಿದ್ದವರು ಸೋನಿಯಾ. ಪ್ರಧಾನಿ ತರಹದ ದೊಡ್ಡದಾದ ಹುದ್ದೆ ಬಿಟ್ಟು ಹತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ದೇಶಕ್ಕೆ ಸೇವೆ ಮಾಡಿದ್ದಾರೆ. ಪಕ್ಷ ಅಂದಮೇಲೆ ಭಿನ್ನಾಬಿಪ್ರಾಯಗಳು ಸಹಜ. ಅದನ್ನ ಸರಿಪಡಿಸಿಕೊಂಡು ಹೋಗೋಣ ಎಂದಿದ್ದಾರೆ. ಸೋನಿಯಾ ಗಾಂಧಿ ಎಲ್ಲರಿಗೂ ಇದನ್ನೇ ಹೇಳಿದ್ದಾರೆ. ಹಾಗಾಗಿ ಪಕ್ಷದಲ್ಲಿ ಯಾವುದೇ ಭಿನ್ನಮತಗಳಿಲ್ಲ ಎಂದು ಸಿಡಬ್ಲ್ಯುಸಿ ವಿಶೇಷ ಸದಸ್ಯ ಹಾಗೂ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ನಿನ್ನೆ 52 ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಇದ್ದೆವು. ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಮುಂದುವರಿಕೆ ಬಗ್ಗೆ ಒಪ್ಪಿಗೆ ನೀಡಿದ್ದೇವೆ. ರಾಹುಲ್ ಗಾಂಧಿಯವರ ಬಗ್ಗೆ ಬೆಂಬಲಿಸಿದ್ದೇವೆ. ಮೇಡಂ ಭೇಟಿಯಾಗೋಕೆ ಪತ್ರ ಬರೆದ 23 ಮಂದಿಗೂ ನಿರ್ಭಂದವಿರಲಿಲ್ಲ. ಯಾವಾಗ ಬೇಕಾದರೂ ಅವರು ಭೇಟಿ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕೆಪಿಸಿಸಿ ಅಧ್ಯಕ್ಷರು, ಸಿಎಲ್ಪಿ ಲೀಡರ್ ಕೂಡ ಬೆಂಬಲಿಸಿದ್ದಾರೆ. ಯಾರೂ ಗಾಂಧಿ ಕುಟುಂಬದ ಬಗ್ಗೆ ವಿರೋಧಿಸಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ