Hubballi: ಕೆಂಪುಕೋಟೆಯಲ್ಲಿ ಹಾರಾಡೋ ಧ್ವಜ ತಯಾರಾಗೋದು ನಮ್ಮ ಕರ್ನಾಟಕದಲ್ಲಿ! ವಿಶೇಷ ಏನು ನೋಡಿ

ರಾಷ್ಟ್ರಧ್ವಜ ನೋಡಿದ ಕೂಡಲೇ ನಮ್ಮ ಮೈ ಮನಗಳು ರೋಮಾಂಚನವಾಗುತ್ತವೆ. ನಿಂತಲ್ಲಿಯೇ ನಾವು ಅದಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ. ಇಂತಹ ರಾಷ್ಟ್ರ ಧ್ವಜ ತಯಾರಿಸಲು ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯೇ ಹುಬ್ಬಳ್ಳಿಯ ಬೆಂಗೇರಿ ರಾಷ್ಟ್ರೀಯ ಧ್ವಜ ತಯಾರಿಕಾ ಕೇಂದ್ರ.

ತ್ರಿವರ್ಣ ಧ್ವಜ

ತ್ರಿವರ್ಣ ಧ್ವಜ

  • Share this:
ರಾಷ್ಟ್ರದ ಧ್ವಜ ನಮ್ಮ ಹೆಮ್ಮೆಯ ಪ್ರತೀಕ. ಅದರಲ್ಲೂ ಈ ಬಾರಿ ನಾವು ಸ್ವಾತಂತ್ರ್ಯೋತ್ಸವದ (Independence day) ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ದೇಶದ (India) ಮೂಲೆ ಮೂಲೆಯಲ್ಲೂ ತಿರಂಗಾ (Flag) ಹಾರಾಡುತ್ತಿದೆ. ಪುಟ್ಟ ಶಾಲೆಯಿಂದ ಹಿಡಿದು, ದೇಶದ ಕೆಂಪುಕೋಟೆವರೆಗೂ (Red fort)  ತ್ರಿವರ್ಣ ಧ್ವಜ ಹಾರುತ್ತದೆ. ನಾವು ಹಾರಿಸೋ ತ್ರಿವರ್ಣ ಧ್ವಜ ಹುಬ್ಬಳ್ಳಿಯಲ್ಲಿ ತಯಾರಾಗುತ್ತೆ ಅಂದ್ರೆ ನಂಬಲೇಬೇಕು. ಇಲ್ಲಿನ ಬೆಂಗೇರಿ ಕರ್ನಾಟಕ (Karnataka) ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ದೇಶದಲ್ಲಿಯೇ ಖಾದಿ ರಾಷ್ಟ್ರ ಧ್ವಜ ತಯಾರಿಸುವಂತಹ ಏಕೈಕ ಸಂಸ್ಥೆಯಾಗಿದೆ. ಕರ್ನಾಟಕ್ಕೂ ಇದು ಹೆಮ್ಮೆಯ ಸಂಗತಿಯಾಗಿದೆ. ದೇಶಕ್ಕೆ ಖಾದಿ (Khadi) ಧ್ವಜ ಪೂರೈಸೋ ಏಕೈಕ ಬೆಂಗೇರಿ ರಾಷ್ಟ್ರ ಧ್ವಜ ಉತ್ಪಾದನಾ ಕೇಂದ್ರದತ್ತ ಒಂದು ನೋಟ ಇಲ್ಲಿದೆ..

ರಾಷ್ಟ್ರಧ್ವಜ ನೋಡಿದ ಕೂಡಲೇ ನಮ್ಮ ಮೈ ಮನಗಳು ರೋಮಾಂಚನವಾಗುತ್ತವೆ. ತ್ರಿವರ್ಣ ಧ್ವಜ ಹಾರಾಡಿದಾಗ ದೇಶ ಪ್ರೇಮ ಉಕ್ಕಿ ಬರುತ್ತೆ. ನಿಂತಲ್ಲಿಯೇ ನಾವು ಅದಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ. ಇಂತಹ ರಾಷ್ಟ್ರ ಧ್ವಜ ತಯಾರಿಸಲು ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯೇ ಹುಬ್ಬಳ್ಳಿಯ ಬೆಂಗೇರಿ ರಾಷ್ಟ್ರೀಯ ಧ್ವಜ ತಯಾರಿಕಾ ಕೇಂದ್ರ.

ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜ ತಯಾರು!

ಬೆಂಗೇರಿ ರಾಷ್ಟ್ರ ಧ್ವಜ ಉತ್ಪಾದನಾ ಕೇಂದ್ರ 2004ರಿಂದ ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕೆಂಪುಕೋಟೆಯಿಂದ ಹಿಡಿದು, ಭಾರತದ ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಹಾರಾಡುವಂತಹ ಧ್ವಜಗಳು ತಯಾರಾಗೋದು ಇಲ್ಲಿಯೇ ಅನ್ನೋದು ವಿಶೇಷ. ಇಡೀ ದೇಶದಲ್ಲಿಯೇ ಇದೊಂದೇ ಕಡೆ ಮಾತ್ರ ಖಾದಿ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತದೆ.

only institute in the country which manufactures khadi national flag
ಬೆಂಗೇರಿ ಧ್ವಜ ನಿರ್ಮಾಣ ಸಂಘ


ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಕುಗ್ಗದ ದೇವೇಗೌಡರ ಉತ್ಸಾಹ, ಮೋದಿ ಕರೆಗೆ ಬೆಂಬಲಿಸಿ ತಿರಂಗಾ ಹಾರಾಟ

ದೇಶದ ಏಕೈಕ ಖಾದಿ ಧ್ವಜ ತಯಾರಿಕಾ ಸಂಸ್ಥೆ!

ಯಾವುದೇ ಧರ್ಮದ ಭೇದವಿಲ್ಲದೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಗುಂಪೊಂದು ಒಗ್ಗೂಡಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ತಲ್ಲೀನವಾಗಿದೆ. ಗಾಂಧಿವಾದಿಗಳ ಗುಂಪೊಂದರಿಂದ ಒಕ್ಕೂಟ ರಚನೆ ಮಾಡಿಕೊಂಡು ನವೆಂಬರ್ 7, 1957ರಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು ಸ್ಥಾಪಿಸಿತು. ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ್ ಮಾಗಡಿ ಇದರ ಸಂಸ್ಥಾಪಕರಾಗಿದ್ದಾರೆ.

only institute in the country which manufactures khadi national flag
ಹುಬ್ಬಳ್ಳಿಯ ಬೆಂಗೇರಿಯಲ್ಲಿರೋ ಧ್ವಜ ತಯಾರಿಸೋ ಸಂಘ


ಕರ್ನಾಟಕದ ಸುಮಾರು 58 ಸಂಸ್ಥೆಗಳನ್ನು ಈ ಸಂಘದ ಆಶ್ರಯದಲ್ಲಿ ತರಲಾಗಿದೆ. 17 ಎಕರೆ ಪ್ರದೇಶದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಸೌಲಭ್ಯಗಳ ವ್ಯವಸ್ಥೆ ಹೊಂದಿದ್ದು, ಖಾದಿ ಉತ್ಪನ್ನಗಳ ಉತ್ಪಾದನೆಯೂ 1982ರಲ್ಲಿ ಪ್ರಾರಂಭವಾಯಿತು. ಖಾದಿ ರಾಷ್ಟ್ರ ಧ್ವಜ ಉತ್ಪಾದನೆ 2004ರಿಂದ ಪ್ರಾರಂಭಗೊಂಡಿದೆ.

ಇದನ್ನೂ ಓದಿ: ಮನೆ ಮನೆಯಲ್ಲೂ ರಾರಾಜಿಸುತಿದೆ ಹೆಮ್ಮೆಯ ತಿರಂಗಾ, ಆಗದಿರಲಿ ರಾಷ್ಟ್ರಧ್ವಜಕ್ಕೆ ಅವಮಾನ!

1200 ಮಂದಿ ಕೆಲಸ!

ಬಟ್ಟೆ ನೂಲುವ, ನೇಯುವ, ರಾಷ್ಟ್ರ ಧ್ವಜ ತಯಾರಿಸುವುದನ್ನು ಸೇರಿ ಒಟ್ಟು 1200 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಶೇ.95ರಷ್ಟು ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ. ಇಲ್ಲಿ ರೂಪುಗೊಳ್ಳೋ ಖಾದಿ ರಾಷ್ಟ್ರಧ್ವಜ ಬಿ.ಐ.ಎಸ್. ಮಾನ್ಯತೆ ಪಡೆದಿದೆ.

1 ಕೋಟಿ ಮೌಲ್ಯದ ಧ್ವಜ ತಯಾರು!

ಕೇವಲ 10,500 ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭವಾದ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರತಿ ವರ್ಷಕ್ಕೆ ಸರಾಸರಿ 1 ಕೋಟಿ ರೂ.ಗಳ ಮೌಲ್ಯದ ಧ್ವಜಗಳನ್ನು ತಯಾರಿಸಲಾಗುತ್ತದೆ. ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖಾದಿ ಬಟ್ಟೆ ನೇಯಲಾಗುತ್ತೆ. ನಂತರ ಅದನ್ನು ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಕಳಿಸಲಾಗುತ್ತೆ. ಬೆಂಗೇರಿ ರಾಷ್ಟ್ರದ ಧ್ವಜ ಘಟಕದಲ್ಲಿ ಸುಮಾರು 60 ಹೊಲಿಗೆ ಯಂತ್ರಗಳ ಅಳವಡಿಸಲಾಗಿದೆ.

only institute in the country which manufactures khadi national flag
ಧ್ವಜ ತಯಾರಿಸುವುದರಲ್ಲಿ ನಿರತರಾಗಿರೋ ಸಿಬ್ಬಂದಿ


ತ್ರಿವರ್ಣ ಧ್ವಜ ತಯಾರಿಕೆಗೂ ಮಾನದಂಡ!

ಧ್ವಜ ತಯಾರಿಕೆಗೂ ಅದರದ್ದೇ ಆದ ಮಾನದಂಡಗಳಿವೆ. ಧ್ವಜದ ಅಗಲ ಮತ್ತು ಉದ್ದವು 2.3 ಅನುಪಾತದಲ್ಲಿರಬೇಕು‌. ಅಶೋಕ ಚಕ್ರವನ್ನು ಬಟ್ಟೆಯ ಎರಡೂ ಬದಿಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗುವಂತೆ ಮುದ್ರಿಸಬೇಕು. ಇಲ್ಲಿಂದ ರವಾನೆಯಾಗುವ ಪ್ರತಿಯೊಂದು ಧ್ವಜವನ್ನು ಬಿಐಎಸ್‌ ಪರಿಶೀಲಿಸುತ್ತದೆ. ಸಣ್ಣದೊಂದು ತಪ್ಪು ಜರುಗಿದ್ದರೂ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುತ್ತೆ.

ಇಲ್ಲಿ 9 ಗಾತ್ರಗಳಲ್ಲಿ ಧ್ವಜಗಳು ತಯಾರಿಸಲ್ಪಡುತ್ತವೆ. 6X4 ಇಂಚಿನದು ಚಿಕ್ಕದಾದರೆ, 21X14 ಅಡಿಯದ್ದು ದೊಡ್ಡ ಬಾವುಟ. ಬೆಂಗೇರಿ ರಾಷ್ಟ್ರ ಧ್ವಜ ತಯಾರಿಕಾ ಘಟಕ ಒಂದರಲ್ಲಿಯೇ 22 ಜನ ಕಾರ್ಯನಿರ್ವಹಣೆ ಮಾಡ್ತಿದ್ದಾರೆ. ಇವರ ವೇತನ 5 ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿವರೆಗೆ ಇದೆ.

ಇದೇ ನಮ್ಮ ದೇಶ ಸೇವೆ ಎನ್ನುತ್ತಾರೆ ಸಿಬ್ಬಂದಿ!

ಇಲ್ಲಿನ ಸಿಬ್ಬಂದಿಗೆ ರಾಷ್ಟ್ರ ಧ್ವಜವನ್ನು ತಯಾರಿಸುವುದು ಕೇವಲ ಜೀವನೋಪಾಯ ಮಾತ್ರ ಆಗಿಲ್ಲ. ರಾಷ್ಟ್ರದ ಸೇವೆಯೂ ಆಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ರಾಷ್ಟ್ರ ಧ್ವಜ ತಯಾರಿಕೆ ಮೂಲಕ ದೇಶ ಸೇವೆ ಮಾಡ್ತಿದ್ದೇವೆ ಎನ್ನುತ್ತಾರೆ ಸಿಬ್ಬಂದಿ. ಅವರೆಲ್ಲರಿಗೆ ನಮ್ಮದೊಂದು ಸೆಲ್ಯೂಟ್.
Published by:Thara Kemmara
First published: