ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಬೆಂಗಳೂರು (Bengaluru) ಹಾಗೂ ಚಿಕ್ಕಬಳ್ಳಾಪುರ (Chikkaballapur) ಮಾರ್ಗದ ಮಧ್ಯೆ ಎಲೆಕ್ಟ್ರಿಕ್ ಟ್ರೈನನ್ನು (Electric train) ಓಡಿಸಲೆಂದು ಮಾರ್ಗದ ವಿದ್ಯುದೀಕರಣ ಸಂಪನ್ನವಾಗಿದೆ. ಹಾಗಾಗಿ ಸೌಥ್ ವೆಸ್ಟರ್ನ್ ರೈಲ್ವೇಯು (South Western Railway) ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಜುಲೈ 29 ರಿಂದ ಬೆಂಗಳೂರು ಕೇಂದ್ರ ರೈಲು ನಿಲ್ದಾಣ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ (Kempegowda International Airport) ಮಧ್ಯೆ ಐದು ಜೊತೆ ಮೆಮು (Memu) ರೈಲುಗಳಿಗೆ ಚಾಲನೆ ನೀಡಿದೆ. ಇದು ಈಗಾಗಲೇ ಚಾಲ್ತಿಯಲ್ಲಿದ್ದ ಎರಡು ಡೆಮು (Demu) ರೈಲು ಸೇವೆಗಳ ಜೊತೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವುದು ಹೇಗೆ?
ಇಷ್ಟಾಗಿಯೂ, ಬೆಂಗಳೂರಿನಿಂದ ಕೆಂಪೇಗೌಡ ಏರ್ಪೋರ್ಟಿಗೆ ತೆರಳಲು ನಿರೀಕ್ಷಿಸಲಾಗಿದ್ದಂತಹ ಪ್ರಯಾಣಿಕರ ಸಂಖ್ಯೆಯನ್ನು ಈ ರೈಲು ಸೇವೆ ಪಡೆಯುತ್ತಿಲ್ಲ. ಈ ಸೇವೆ ಪ್ರಾರಂಭವಾದ ಮೊದಲ ಹನ್ನೊಂದು ದಿನಗಳಲ್ಲಿ ಇದರಲ್ಲಿ ಪ್ರಯಾಣಿಸಿರುವ ಪ್ರಯಾಣಿಕರ ಸಂಖ್ಯೆಯನ್ನು ಸರಾಸರಿಗೆ ತೆಗೆದುಕೊಂಡರೆ, ಏರ್ಪೋರ್ಟಿಗೆ ತೆರಳಿದವರ ಸಂಖ್ಯೆ ಕೇವಲ 3-20 ಆದರೆ ಮರಳಿದವರ ಸಂಖ್ಯೆ 3-13 ರಷ್ಟಿದೆ.
ಹಾಗೆ ನೋಡಿದರೆ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಈ ರೈಲು ಸೇವೆ ಕೇವಲ 90 ನಿಮಿಷಗಳಷ್ಟು ಅವಧಿಯನ್ನು ತೆಗೆದುಕೊಳ್ಳುತ್ತದೆ. ಅಷ್ಟೆ ಅಲ್ಲದೆ, ಅಲ್ಲಿಂದ ಟರ್ಮಿನಲ್ ಬಳಿಗೆ ತೆರಳಲು ಉಚಿತ ಶಟಲ್ ಸೇವೆ ಸಹ ನೀಡಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಒಟ್ಟಾರೆ ಪ್ರಯಾಣಕ್ಕೆ ತಗುಲುವ ವೆಚ್ಚ ಕೇವಲ 30 ರೂಪಾಯಿ ಮಾತ್ರ.
ಇನ್ನು, ಕ್ಯಾಬ್ ಅಥವಾ ಬಿಎಂಟಿಸಿ ಸೇವೆಗಳನ್ನು ಪಡೆದುಕೊಂಡರೆ ವಿಮಾನ ನಿಲ್ದಾಣಕ್ಕೆ ತಲುಪಲು ಕ್ಯಾಬ್ ಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಹಾಗೂ ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಪ್ರತಿ ತಲೆಗೆ ರೂ. 250 ವ್ಯಯಿಸಬೇಕಾಗುತ್ತದೆ. ಅಲ್ಲದೆ, ಟ್ರಾಫಿಕ್ ದಟ್ಟಣೆಯಿದ್ದು ತಲುಪಲು ಸಮಯವೂ ವಿಳಂಬವಾಗುತ್ತದೆ.
ಪರಿಸ್ಥಿತಿ ಹೀಗಿರುವಾಗ ಏಕೆ ಜನರು ಸಮಯ ಹಾಗೂ ಹಣ ಉಳಿಸುವಂತಹ ರೈಲು ಸೇವೆಯನ್ನು ಪಡೆದುಕೊಳ್ಳಲು ಇಚ್ಛಿಸುತ್ತಿಲ್ಲ ಎಂಬ ಪ್ರಶ್ನೆಯೊಡನೆ ಟೈಮ್ಸ್ ಮಾಧ್ಯಮವು ಜನರ ಅಭಿಪ್ರಾಯ ಸಂಗ್ರಹಿಸಿದ್ದು ಆ ಮೂಲಕ ಈ ಪ್ರಶ್ನೆಗೆ ಉತ್ತರ ಹೀಗೆ ಕಂಡುಕೊಳ್ಳಲ್ಲಾಗಿದೆ ಅಂತ ಹೇಳಬಹುದಾಗಿದೆ.
ಸಮಯಕ್ಕೆ ಸರಿಯಾಗಿಲ್ಲದೆ ಇರುವುದು
ಪ್ರಸ್ತುತ ಸೌತ್ ವೆಸ್ಟರ್ನ್ ರೈಲ್ವೇಯು ವಿಮಾನ ನಿಲ್ದಾಣಕ್ಕೆಂದು ತೆರಳಲು ಒಟ್ಟು ಏಳು ಜೊತೆ ಮೆಮು ಹಾಗೂ ಡೆಮು ರೈಲು ಸೇವೆ ಒದಗಿಸಿದೆ. ಆದರೆ ಈ ಪ್ರಮಾಣ ಪರ್ಯಾಪ್ತವಾಗಿಲ್ಲ. ಅಲ್ಲದೆ, ಲಭ್ಯವಿರುವ ಈ ರೈಲುಗಳೂ ಸಹ ಸಮಯಕ್ಕೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವನ್ನೂ ಸಹ ಹಲವು ವೈಮಾನಿಕ ಪ್ರಯಾಣಿಕರು ಹೊರಹಾಕಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೊರಡುವ ಜನರಿಗೆ/ಪ್ರಯಾಣಿಕರಿಗೆ ಏನಿಲ್ಲವೆಂದರೂ ಪ್ರತಿ ಮೂವತ್ತು ನಿಮಿಷಗಳಿಗೊಮ್ಮೆ ಒಂದರಂತೆ ರೈಲಿನ ಸೌಲಭ್ಯ ಬೇಕೆಂಬ ಬೇಡಿಕೆಯಿದೆ. ಇನ್ನೊಂದೆಡೆ ಪ್ರಯಾಣಿಕರು ಕ್ಯಾಬ್ ಹಣ ಉಳಿಸುವ ಸಲುವಾಗಿ ಫ್ಲೈಟ್ ಮಿಸ್ ಮಾಡಿಕೊಳ್ಳುವುದನ್ನು ಬಯಸುತ್ತಿಲ್ಲ.
ಹಾಗಾಗಿ ಈ ಎಲ್ಲ ಅಂಶಗಳಿಂದಾಗಿಯೇ ನಿರೀಕ್ಷಿತ ಪ್ರಮಾಣದಲ್ಲಿ ಜನರು ಈ ಮೆಮು/ಡೆಮು ರೈಲು ಸೇವೆಗಳನ್ನು ಸಮರ್ಪಕವಾಗಿ ಬಳಸಲು ಮುಂದಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ
ನಗರದಲ್ಲಿ ನೆಲೆಸಿರುವ ಸುಮಾರು 29,000 ದಷ್ಟು ಜನರು ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಅವರ್ಯಾರೂ ಈ ರೈಲು ಸೇವೆಯನ್ನ ನೆಚ್ಚಿಕೊಂಡಿಲ್ಲ. ಒಂದೋ ಅವರಿಗೆ ಕಂಪನಿಯಿಂದ ನೀಡಲಾಗಿರುವ ಪ್ರಯಾಣ ಸೌಲಭ್ಯವಿದೆ, ಎರಡನೇಯದಾಗಿ ಬಹು ಜನರು ತಮ್ಮ ವೈಯಕ್ತಿಕ ವಾಹನಗಳನ್ನು ಬಳಸುತ್ತಾರೆ.
ಸೇವೆಗಳ ಬಗ್ಗೆ ಅರಿವಿಲ್ಲದೆ ಇರುವುದು
ಆದಾಗ್ಯೂ, ಈ ರೀತಿಯ ಮೆಮು ರೈಲು ಸೇವೆಗಳಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣಕ್ಕೆ ತೆರಳಲು ಈ ರೀತಿಯ ಸೌಲಭ್ಯವಿದೆ ಎಂಬುದರ ಬಗ್ಗೆ ನಗರದಲ್ಲಿರುವ ಹಲವು ಜನರಿಗೆ ಇನ್ನೂ ತಿಳಿಯದೆ ಇರುವುದೂ ಸಹ ಈ ಸೇವೆಗೆ ನಿರೀಕ್ಷಿತ ಪ್ರಮಾಣದ ಯಶ ಸಿಗದಿರಲು ಒಂದು ಕಾರಣವಾಗಿದೆ.
ಈ ಕುರಿತು ಜನರಲ್ಲಿ ಈ ರೈಲು ಸೇವೆಗಳಿವೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಲ್ಲದೆ ಈ ಬಗ್ಗೆ ಅವುಗಳ ವೇಳಾಪಟೀಯನ್ನೂ ಸಹ ಸಿದ್ಧಪಡಿಸಿ ಅಳವಡಿಸಬೇಕಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳುತ್ತಾರೆ.
ಉತ್ತಮವಾಗಿರದ ಸಂಪರ್ಕ ಸೌಲಭ್ಯ
ಇನ್ನೊಂದು ಕಾರಣವೆಂದರೆ ಮೆಮು ರೈಲುಗಳು 'ಇನ್ ಬಿಟ್ವೀನ್' ನಿಲ್ದಾಣಗಳನ್ನು ಹೊಂದಿಲ್ಲ. ಹಾಗಾಗಿ ಹಲವು ಜನರು ಇದರ ಉಪಯೋಗ ಪಡೆಯುತ್ತಿಲ್ಲ. ಉದಾಹರಣೆಗೆ ಮೆಮು ಟ್ರೈನು ದೊಡ್ಡಜಾಲ, ಚೆನ್ನಸಂದ್ರ ಮುಂತಾದೆಡೆಗಳಲ್ಲಿ ಹಾಲ್ಟ್ ಹೊಂದಿಲ್ಲ.
ಹೀಗಾಗಿ ಇಲ್ಲಿರುವ ಜನರಿಗೆ ಇದರ ಉಪಯೋಗ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಜನರು ಈ ರೈಲುಗಳು ಎಲ್ಲ ಕಡೆ ಹಾಲ್ಟ್ ಹೊಂದುವಂತೆ ಮಾಡುವ ಮೂಲಕ ಸೌತ್ ವೆಸ್ಟರ್ನ್ ರೈಲ್ವೇ ಈ ರೈಲುಗಳಿಗೆ ಹೆಚ್ಚೆ ಹೆಚ್ಚು ಜನರು ಬರುವಂತೆ ಮಾಡಬಹುದು ಎನ್ನುತ್ತಾರೆ ಈ ಪ್ರದೇಶದಲ್ಲಿರುವ ನಿವಾಸಿಗಳು.
ಇದನ್ನೂ ಓದಿ: Tomato Fever: ಎಚ್ಚರ, ಕಟ್ಟೆಚ್ಚರ! ಕರ್ನಾಟಕಕ್ಕೆ ಟೊಮೆಟೊ ಜ್ವರದ ಎಚ್ಚರಿಕೆ ನೀಡಿದ ಪ್ರಮುಖ ಮೆಡಿಕಲ್ ಜರ್ನಲ್
ಕೊನೆಯದಾಗಿ ಸಮಯಕ್ಕೆ ಸರಿಯಾಗಿ ಈ ರೈಲುಗಳು ಕಾರ್ಯನಿರ್ವಹಿಸದೇ ಇರುವುದು ಸಹ ನಗರ ಪ್ರದೇಶ ವಾಸಿಗಳಿಗೆ ಈ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ವೈಮಾನಿಕ ಪ್ರಯಾಣಿಕರು ನಿಗದಿತ ವೇಳೆಗೆ ಹೊರಡಬೇಕಾಗಿದ್ದು ವಿಳಂಬತೆಯ ಸಾಧ್ಯತೆ ಹೊಂದಿರುವ ರೈಲುಗಳ ಮೇಲೆ ಅವಲಂಬಿತರಾಗಲು ಹಿಂಜರಿಯುತ್ತಾರೆ. ಹಾಗಾಗಿ ಕ್ಯಾಬ್ ಹಣ ಉಳಿತಾಯ ಮಾಡಲೆಂದು ಅವರು ಫ್ಲೈಟ್ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ.
ಒಟ್ಟಾರೆಯಾಗಿ ಈ ಎಲ್ಲ ಅಂಶಗಳನ್ನು ರೈಲ್ವೇ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಂಡರೆ ಮುಂಬರುವ ಸಮಯದಲ್ಲಿ ಪ್ರತಿಯೊಬ್ಬರೂ ವಿಮಾನ ನಿಲ್ದಾಣಕ್ಕೆ ತೆರಳಲು ರೈಲನ್ನೇ ಪ್ರಾಥಮಿಕವಾಗಿ ಆಶ್ರಯಿಸುವುದರಲ್ಲಿ ಸಂಶಯವೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ