ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರಗತಿಯ ಹೆಜ್ಜೆ ಹಾಕುತ್ತಿರುವ ಯೋಜನೆಗಳು ಶ್ಲಾಘನೀಯ. ಆದರೆ ಅದನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಸಾರ್ವಜನಿಕರಿಗೆ (Public) ಸಮಸ್ಯೆಯಾಗುತ್ತದೆ ಎನ್ನುವ ಅರಿವು ಯಾರಿಗೂ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್, ಬದಲಿ ರಸ್ತೆಗಳ ಕೊರತೆ, ಧೂಳು, ಶಬ್ಧ ಮಾಲಿನ್ಯದಂತಹ ಕಿರಿಕಿರಿ ಇದೆಲ್ಲವನ್ನು ಕೇಳುವವರು ಯಾರು? ಈಗ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ ರೋಡ್ (B.C. Road) ಮತ್ತು ಪೆರಿಯಶಾಂತಿ ಕಾಮಗಾರಿ ಇಂತಹ ಘಟನೆಗೆ ಸಾಕ್ಷಿಯಾಗಿದೆ. ಹೌದು ಪ್ರತಿನಿತ್ಯ ಇಲ್ಲಿ ಓಡಾಡುವ ವಾಹನ ಚಾಲಕರು ಮತ್ತು ನಿವಾಸಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿ 500 ದಿನಗಳು ಕಳೆದರೂ ಇನ್ನೂ ಈ ಕಾಮಗಾರಿ ಶೇಕಡಾ 50 ರಷ್ಟು ಮುಗಿದಿಲ್ಲ. ಇದನ್ನು ಸರಿಯಾಗಿ ನಿರ್ವಹಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.
ನವೆಂಬರ್ 23, 2023 ರೊಳಗೆ ಕಾಮಗಾರಿ ಪೂರ್ಣವಾಗಬೇಕಿತ್ತು!
ಹೌದು!. ಈ ಕಾಮಗಾರಿಯನ್ನು ನವೆಂಬರ್ 23, 2021 ರಂದು ಪ್ರಾರಂಭಿಸಲಾಗಿತ್ತು. ಸುಮಾರು 730 ದಿನಗಳಲ್ಲಿ ಪೂರ್ಣವಾಗಬೇಕಿದ್ದ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಶೇಕಡಾ 30 ರಷ್ಟು ಕೂಡ ಕೆಲಸ ಸಂಪುರ್ಣವಾಗಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.
1,100 ಕೋಟಿ ಕಾಮಗಾರಿ ವೆಚ್ಚ
ಕೆಎನ್ ಆರ್ ಕನ್ಸ್ಟ್ರಕ್ಷನ್ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ರಸ್ತೆಯ ವಿನ್ಯಾಸ, ಅಗತ್ಯವಿರುವ ಸಾಮಗ್ರಿಗಳು, ಕಾರ್ಯನಿರ್ವಹಣೆಯ ಸೌಲಭ್ಯಗಳು ಸೇರಿದಂತೆ (ಇಪಿಸಿ ) ವಿಧಾನ ಅಡಿಯಲ್ಲಿ ಅಂದಾಜು 1,100 ಕೋಟಿ ವೆಚ್ಚದಲ್ಲಿ ಹೆದ್ದಾರಿ ವಿಸ್ತರಿಸುವ ಯೋಜನೆಗೆ ಎನ್ಎಚ್ಎಐ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ
ಪೆರಿಯಶಾಂತಿ – ಅಡ್ಡಹೊಳೆ (15ಕಿಮೀ) ಪ್ಯಾಕೇಜ್ 1 ರ ಅಡಿಯಲ್ಲಿದ್ದಾಗ, ಪೆರಿಯಶಾಂತಿ – ಬಿ.ಸಿ ರೋಡ್ ವಿಸ್ತರಣೆಯು ಅಡ್ಡಹೊಳೆ – ಬಿ.ಸಿ ಯ ಚತುಷ್ಪತ ರಸ್ತೆ ಯೋಜನೆಯ ಪ್ಯಾಕೇಜ್ 2 ರ ಅಡಿಯಲ್ಲಿತ್ತು. ಇದನ್ನು 400 ಕೋಟಿ ರೂ ಅಂದಾಜು ವೆಚ್ಚದಲ್ಲಿ ಎಮ್ ಎಸ್ ಅಟಾಡೆ ಯೂ ಕಾರ್ಯಗತಗೊಳಿಸಿತ್ತು.
ಇನ್ನೂ ಎಷ್ಟು ದಿನ ಧೂಳಿನಲ್ಲಿ ಕೊಳೆಯುವುದು?
ಹೀಗೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳು ತಲೆದೂರಿವೆ,. ಧೂಳು, ಕೆಸರು, ಅವ್ಯವಸ್ಥೆಯ ರಸ್ತೆ, ಇದೆಲ್ಲವನ್ನು ಇನ್ನೂ ಎಷ್ಟು ದಿನದ ತನಕ ತಡೆಯಬೇಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಧೂಳಿನ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದಾಗ ನೀರು ಚಿಮುಕಿಸುವ ವ್ಯವಸ್ಥೆ ಮಾಡಲಾಯಿತು. ಆದರೆ ಈಗ ಅದು ಕೆಸರಿನಿಂದ ಆವೃತ್ತವಾಗಿದೆ. ಇನ್ನೂ ರಸ್ತೆಗಳ ಕಥೆಯಂತೂ ಮೊದಲಿನಿಂದಲು ಅಧ್ವಾನವಾಗಿದೆ. ಹಳ್ಳ, ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸುವುದು ಈಗ ಮತ್ತಷ್ಟು ತ್ರಾಸದಾಯಕವಾಗಿದೆ.
ಹೆದ್ದಾರಿ ವಿಸ್ತರಣೆ ಮಾಡುವಾಗ ಎನ್ಎಚ್ಎಐ ಸರಿಯಾದ ಸರ್ವೀಸ್ ರಸ್ತೆ, ವಾಹಗಳ ಚಲಾವಣೆಗೆ ಸೂಕ್ತ ರಸ್ತೆಯನ್ನು ಒದಗಿಸಬೇಕೆಂದು ಗುತ್ತಿಗೆದಾರರಿಗೆ ಒತ್ತಾಯಿಸಿಲ್ಲ.
ಜೊತೆಗೆ ಕೆಲಸಗಳು ನಡೆಯುತ್ತಿರುವ ಸ್ಥಳವನ್ನು ಮುಖ್ಯ ರಸ್ತೆಯಿಂದ ಸರಿಯಾಗಿ ಬೇರ್ಪಡಿಸಿಲ್ಲ ಇದರಿಂದ ಅಲ್ಲಿ ಓಡಾಡುವ ಜನರಿಗೆ ಅಪಾಯವಿದೆ ಎನ್ನುವ ಆರೋಪಗಳಿವೆ. ಕಲ್ಲಡ್ಕ ಪಟ್ಟಣದ ಮೂಲಕ ಹಾದು ಹೋಗಿರುವ 2 ಕಿ.ಮೀ ಮೇಲ್ಸೇತುವೆ ಕಾಮಗಾರಿ 15 ತಿಂಗಳಿಂದ ಪೂರ್ಣವಾಗಿಲ್ಲ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.
ಸಿಬ್ಬಂದಿ ಮತ್ತು ಉಪಕರಣಗಳ ಕೊರತೆ
ಗುತ್ತಿಗೆದಾರರು ಸಿಬ್ಬಂದಿ ಮತ್ತು ನಿರ್ಮಾಣಕ್ಕೆ ಅಗತ್ಯವಾದ ಉಪಕರಣಗಳನ್ನು ವ್ಯವಸ್ಥೆ ಮಾಡಿಲ್ಲ. ಕೆಲವೇ ಮಂದಿ ಕಾರ್ಮಿಕರು ಮಾತ್ರ ಕೆಲಸದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!
ಕಲ್ಲಡ್ಕದ ಮೇಲ್ಸೇತುವೆ ಮೇಲೂ ಇದೇ ಪರಿಸ್ಥಿತಿ ಇದೆ. ಮೆಲ್ಕಾರ್ ಮತ್ತು ಪಾಣೆ ಮಂಗಳೂರಿನ ವಾಹನ ಮೇಲ್ಸೇತುವೆಗಳನ್ನು ಬಿಟ್ಟು, ಕಲ್ಲಡ್ಕ ಮತ್ತು ಪಾಣೆ ಮಂಗಳೂರು ನಡುವಿನ ವಿಸ್ತರಣೆ ಪೂರ್ಣವಾಗುತ್ತಿದೆ.
ನೇತ್ರಾವತಿ ಪ್ರಮುಖ ಸೇತುವೆಯ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಒಟ್ಟಿನಲ್ಲಿ ಜನಪ್ರತಿನಿಧಿಗಳು ಈ ಬಗ್ಗೆ ಸಕಾಲದಲ್ಲಿ ಗಮನವಹಿಸಿದರೆ ಈ ಕಾಮಗಾರಿ ಪೂರ್ಣಗೊಳ್ಳುತ್ತದ ಎನ್ನುವ ನಂಬಿಕೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ